2,000 ಮಂದಿಗೆ ಹಕ್ಕುಪತ್ರ ವಿತರಿಸುವ ಶಾಸಕ ವೇದವ್ಯಾಸ ಕಾಮತ್ ಹೇಳಿಕೆ ಹಾಸ್ಯಾಸ್ಪದ: ಮಾಜಿ ಶಾಸಕ ಲೋಬೊ

ಮಂಗಳೂರು: ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೊಳಪಟ್ಟ ಬೆಂಗ್ರೆಯಲ್ಲಿ ಫೆ.22ರಂದು ಸುಮಾರು 2,000 ಮಂದಿಗೆ ಹಕ್ಕುಪತ್ರ ವಿತರಿಸುವುದಾಗಿ ಶಾಸಕ ಡಿ.ವೇದವ್ಯಾಸ ಕಾಮತ್ ನೀಡಿರುವ ಹೇಳಿಕೆ ಹಾಸ್ಯಾಸ್ಪದವಾಗಿದೆ ಎಂದು ಮಾಜಿ ಶಾಸಕ ಜೆ.ಆರ್.ಲೋಬೊ ತಿಳಿಸಿದ್ದಾರೆ.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಸರಕಾರದ ಆದೇಶದ ಪ್ರಕಾರ 2018ರ ವರೆಗೆ ಮನೆ ಕಟ್ಟಿದವರಿಗೆ ತಾನು ಶಾಸಕನಾಗಿ 2018ರಲ್ಲಿ ಹಕ್ಕು ಪತ್ರ ನೀಡಿದ್ದೆನು.
ಆ ಬಳಿಕ ಶಾಸಕರಾಗಿ ಆಯ್ಕೆಯಾದ ಶಾಸಕ ವೇದವ್ಯಾಸ ಕಾಮತ್ ಸುಳ್ಳು ಹೇಳಿ ಜನರನ್ನು ಮೂರ್ಖರನ್ನಾಗಿಸಲು ಹೊರಟಿದ್ದಾರೆ ಎಂದು ಆರೋಪಿಸಿದರು.
ತಾನು ಹಕ್ಕು ಪತ್ರ ಕೊಡಿಸಿದ ನಂತರ ಚುನಾವಣೆ ಘೋಷಣೆಯಾಗಿರುವುದರಿಂದ ತಮಗೆ ಖಾತೆ ಮಾಡಿಕೊಡಲು ಸಾಧ್ಯವಾಗಿರಲಿಲ್ಲ ಎಂದು ಹೇಳಿದರು.
ತಾನು ಶಾಸಕನಾಗಿ ಆಯ್ಕೆಯಾದ ಬಳಿಕ ಬೆಂಗ್ರೆಗೆ ಭೇಟಿ ನೀಡಿದಾಗ ಸುಮಾರು 50 ವರ್ಷದಿಂದ ಬೆಂಗ್ರೆಯಲ್ಲಿ ನೆಲೆಸಿದ್ದವರಿಗೆ ಹಕ್ಕುಪತ್ರ ಸಿಗದ ವಿಚಾರ ತನ್ನ ಗಮನಕ್ಕೆ ಬಂದಿತ್ತು. ಈ ಬಗ್ಗೆ ಪರಿಶೀಲಿಸಿದಾಗ ಬೆಂಗ್ರೆ ಜಮೀನಿಗೆ ಕಂದಾಯ ಗ್ರಾಮ ಎಂದು ಘೋಷಣೆಯಾಗದಿರುವ ಹಿನ್ನೆಲೆಯಲ್ಲಿ ಯಾವುದೇ ಸರ್ವೆ ನಂಬ್ರ ಮತ್ತು ಹಾಗೂ ಸರ್ವೆ ನಕಾಶೆ ಇಲ್ಲದಿರುವುದು ಹಾಗೂ ದಾಖಲೆಗಳಲ್ಲಿ ಇದೊಂದು ಕೇವಲ ಮರಳಿನ ದಿಣ್ಣೆ ಎಂದು ನಮೂದಾಗಿರುವುದು ಬೆಳಕಿಗೆ ಬಂತು. ಬಳಿಕ ಮೂರು ವರ್ಷಗಳ ಕಾಲ ನಡೆಸಿದ ಸತತ ಪ್ರಯತ್ನದ ಮೂಲಕ ಕಂದಾಯ ಇಲಾಖೆಯಿಂದ ಅಧಿಕೃತವಾಗಿ ಗ್ರಾಮ ಎಂದು ಘೋಷಿಸುವಂತೆ ಮಾಡಿ, ಇದಕ್ಕೆ ಕಂದಾಯ ಸರ್ವೆ ನಂಬ್ರ ಕೊಡಿಸಲಾಗಿತ್ತು ಎಂದರು.
ಸುಮಾರು 2,400 ಅರ್ಜಿಗಳನ್ನು ಪಡೆದು ಅವುಗಳನ್ನು ಕಂದಾಯ ಅಧಿಕಾರಿಗಳ ಮುಖಾಂತರ ಪರಿಶೀಲನೆ ನಡೆಸಲಾಗಿತ್ತು. ಈ ಪೈಕಿ ಅಂದು ಅಲ್ಲಿ ಸುಮಾರು 1,500 ಮನೆಗಳನ್ನು ನಿರ್ಮಿಸಲಾಗಿತ್ತು. ವಾಸವಿದ್ದವರಿಗೆ ಪತ್ರ ನೀಡಲಾಗಿತ್ತು. ಸುಮಾರು 100 ಮಂದಿಗೆ ಆರ್‌ಟಿಸಿ ವಿತರಿಸಲಾಗಿತ್ತು ಎಂದು ಮಾಹಿತಿ ನೀಡಿದರು.
ಹಕ್ಕುಪತ್ರಗಳನ್ನು ಪಡೆದ ಬಹಳಷ್ಟು ಮಂದಿ ಈಗಾಗಲೇ ಖಾತೆಯನ್ನು ಮಾಡಿದ್ದಾರೆ. ಈ ದಾಖಲೆಗಳ ಮೂಲಕ ಸರಕಾರದ ಸೌಲಭ್ಯ ಹಾಗೂ ಮನೆಕಟ್ಟಲು ಬ್ಯಾಂಕ್‌ಗಳಿಂದ ಸಾಲವನ್ನು ಕೂಡ ಪಡೆದಿದ್ದಾರೆ.
ಬಂಗಾರಪ್ಪ ಮುಖ್ಯಮಂತ್ರಿಯಾಗಿದ್ದಾಗ ಬೆಂಗ್ರೆಯಲ್ಲಿ ಹಕ್ಕು ಪತ್ರ ನೀಡಬೇಕೆಂದು ಜಿಲ್ಲಾಧಿಕಾರಿಗೆ ಆದೇಶ ನೀಡಿದ ಪ್ರಕಾರ ಹಲವಾರು ಮಂದಿಗೆ ಹಕ್ಕು ಪತ್ರ ಪಡೆದಿದ್ದರು. ಆದರೆ ಅದರಲ್ಲಿ ಸರ್ವೆನಂಬ್ರ ಹಾಕಿರುವುದಿಲ್ಲ, ಆಗ ಸರ್ವೆನಂಬ್ರ ಇರಲಿಲ್ಲ. ತಾನು ಶಾಸಕನಾದ ನಂತರ ಇದಕ್ಕೂ ಕೂಡ ಸರ್ವೆನಂಬ್ರವನ್ನು ನೀಡಲಾಯಿತು, ಈಗ ತನ್ನಿಂದ ತಾನೇ ಆ ಹಕ್ಕು ಪತ್ರಕ್ಕೂ ಸರ್ವೆನಂಬ್ರ ಅನ್ವಯವಾಗಿರುತ್ತದೆ ಎಂದು ಮಾಜಿ ಶಾಸಕ ಜೆ.ಆರ್.ಲೋಬೊ ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಮೀನುಗಾರರ ಘಟಕ ಅಧ್ಯಕ್ಷ ಚೇತನ್ ಬೆಂಗ್ರೆ, ಬ್ಲಾಕ್ ಅಧ್ಯಕ್ಷ ಅಬ್ದುಲ್ ಸಲೀಮ್, ಶೇಖರ್ ಪುತ್ರನ್, ನವೀನ್ ಕರ್ಕೇರ, ಸತೀಶ್ ಕೋಟ್ಯಾನ್, ಅಸ್ಲಾಂ ಬೆಂಗ್ರೆ, ಸಮದ್, ಬಿ. ಎಂ. ಶರೀಫ್,ಮಾಜಿ ಕಾರ್ಪೊರೇಟರ್ ಕವಿತಾ ವಾಸು ಮೊದಲಾದವರು ಉಪಸ್ಥಿತರಿದ್ದರು.