ಭ್ರಷ್ಟರ ‘ಅಭಿವೃದ್ಧಿ’ಯೇ ಬೊಮ್ಮಾಯಿ ಹೆಗ್ಗಳಿಕೆ: ಕಾಂಗ್ರೆಸ್ ಲೇವಡಿ
''BJP ಆಡಳಿತದಲ್ಲಿ ಬಿಡಿಎ ಅಂದರೆ ‘ಭ್ರಷ್ಟಾಚಾರ ಡೆವಲಪ್ಮೆಂಟ್ ಅಥಾರಿಟಿ''

ಬೆಂಗಳೂರು, ಫೆ. 11: ‘ಬಿಜೆಪಿ ಆಡಳಿತದಲ್ಲಿ ಬಿಡಿಎ ಅಂದರೆ ‘ಭ್ರಷ್ಟಾಚಾರ ಡೆವಲಪ್ಮೆಂಟ್ ಅಥಾರಿಟಿ’ ಎಂದಾಗಿದೆ!. ನಿವೇಶನ ಹಂಚಿಕೆ, ಪರಿಹಾರ ವಿತರಣೆ ಮುಂದಾದ ಪ್ರಕ್ರಿಯೆಯಲ್ಲಿ ಭಾರಿ ಅಕ್ರಮಗಳು ನಡೆದಿರುವುದು ಲೋಕಾಯುಕ್ತ ದಾಳಿಯಿಂದ ಹೊರಬಂದಿದೆ. ಬೆಂಗಳೂರಿನ ಬದಲು ಭ್ರಷ್ಟಾಚಾರವನ್ನು ‘ಡೆವಲಪ್ಮೆಂಟ್’ ಮಾಡಿದ್ದೇ ಬಸವರಾಜ ಬೊಮ್ಮಾಯಿ ಅವರ ಹೆಗ್ಗಳಿಕೆ ಮತ್ತು ಸಾಧನೆ!’ ಎಂದು ಕಾಂಗ್ರೆಸ್ ಲೇವಡಿ ಮಾಡಿದೆ.
ಶನಿವಾರ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, ‘ಬಿಜೆಪಿ ಸರಕಾರಕ್ಕೆ ತಿಳಿದಿರುವುದು ಕನ್ನ ಹಾಕುವುದು ಬಿಟ್ಟರೆ ಅನ್ನ ಹಾಕುವುದಲ್ಲ. ಬಡವರ, ಕೂಲಿ ಕಾರ್ಮಿಕರ, ವಿದ್ಯಾರ್ಥಿಗಳ ಹೊಟ್ಟೆ ತುಂಬಿಸುತ್ತಿದ್ದ ‘ಇಂದಿರಾ ಕ್ಯಾಂಟೀನ್’ಗಳನ್ನು ವ್ಯವಸ್ಥಿತವಾಗಿ ಮುಚ್ಚುತ್ತಿರುವ ಬಿಜೆಪಿ ಬಡವರ ಹೊಟ್ಟೆ ಮೇಲೆ ಹೊಡೆಯುತ್ತಿದೆ. ಕಮಿಷನ್ ತಿನ್ನುವ ಬಿಜೆಪಿಗೆ ಅನ್ನ ತಿನ್ನುವವರ ಹಸಿವಿನ ಬೆಲೆ ತಿಳಿದಿದೆಯೇ?’ ಎಂದು ವಾಗ್ದಾಳಿ ನಡೆಸಿದೆ.
‘ಆಡಳಿತ ಸುಧಾರಣೆಗೆ ‘ಬಿಗ್ ಡಾಟಾ ಅನಾಲಿಟಿಕ್ಸ್ ಕಾಲೇಜ್’ ಸ್ಥಾಪಿಸುತ್ತೇವೆಂದಿದ್ದ ಬಿಜೆಪಿ ಸರಕಾರ ನಂತರ ಮಾಡಿದ್ದು ಮತದಾರರ ಡಾಟಾ ಕಳ್ಳತನ!. ಬಿಜೆಪಿ ಪ್ರಕಾರ, ‘ಆಡಳಿತ ಸುಧಾರಣೆ' ಎಂದರೆ ಕಮಿಷನ್ ಮೊತ್ತದ ಏರಿಕೆಯೇ? ‘ಡಾಟಾ ಅನಾಲಿಟಿಕ್ಸ್' ಎಂದರೆ ಮತಕ್ಕಾಗಿ ಮತದಾರರ ಮಾಹಿತಿ ಕದ್ದು ಆಮಿಷ ಒಡ್ಡುವುದೇ?’ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
‘ಮತದಾರರ ಮಾಹಿತಿ ಕಳುವಿನ ಚಿಲುಮೆ ಹಗರಣ ಮುಚ್ಚಿ ಹೋಯ್ತು, ಸ್ಯಾಂಟ್ರೋ ರವಿಯ ಪ್ರಕರಣ ಬಿಲ ಸೇರಿತು, ಬಿಟ್ ಕಾಯಿನ್ ಹಗರಣದ ತನಿಖೆಯ ಉಸಿರು ಕಟ್ಟಿತು, ಶೇ.40ರಷ್ಟು ಕಮಿಷನ್ ಲೂಟಿಯ ತನಿಖೆಯೇ ಆಗಲಿಲ್ಲ. ವಿಧಾನಸೌಧದಲ್ಲಿ 10 ಲಕ್ಷ ರೂ.ಹಣ ಸಿಕ್ಕ ಪ್ರಕರಣವೂ ಮುಚ್ಚಿ ಹೋಯ್ತು, ಸಿಎಂ ಆಗಿ ಬಸವರಾಜ ಬೊಮ್ಮಾಯಿ ಅವರ ಕೆಲಸ ಹಗರಣಗಳನ್ನು ಮುಚ್ಚಿಹಾಕುವುದೇ?’ ಎಂದು ಕಾಂಗ್ರೆಸ್ ಟೀಕಿಸಿದೆ.
‘ರೌಡಿ ಮೋರ್ಚಾ ಕಟ್ಟಿಕೊಂಡಿರುವ ಬಿಜೆಪಿ ನಾಯಕರು ಮಾಫಿಯಾ ಡಾನ್‍ಗಳಂತೆ ವರ್ತಿಸುತ್ತಾ, ಚುನಾವಣೆಯನ್ನು ಮಾಫಿಯಾದಂತೆ ನಡೆಸಲು ಮುಂದಾಗಿದ್ದಾರೆ. ಯಲಹಂಕ ಶಾಸಕ ವಿಶ್ವನಾಥ್ ಕಾಂಗ್ರೆಸ್ ನಾಯಕರಿಗೆ ಜೀವ ಬೆದರಿಕೆ ಹಾಕುವ ಮೂಲಕ ‘ರೌಡಿ ರಾಜಕೀಯ’ ಮಾಡ್ತಿದಾರೆ. ಕಾಂಗ್ರೆಸ್ ಎಂದಿಗೂ ಬಿಜೆಪಿ ರೌಡಿಗಳ ಬೆದರಿಕೆಗಳಿಗೆ ಮಣಿಯುವುದಿಲ್ಲ’ ಎಂದು ಕಾಂಗ್ರೆಸ್ ಎಚ್ಚರಿಕೆ ನೀಡಿದೆ.
‘ರೈತರ ಸಾಲಮನ್ನಾ ಮಾಡುವುದರಿಂದ ದೇಶಕ್ಕೆ ಉಪಯೋಗವಿಲ್ಲ ಎಂದ ಸಂಸದ ತೇಜಸ್ವಿ ಸೂರ್ಯ ರೈತರ ಜೀವ ಹೋದರೆ ಯಾವುದೇ ನಷ್ಟವಿಲ್ಲ ಎಂದರೂ ಅಚ್ಚರಿ ಇಲ್ಲ. ರೈತರ ಆದಾಯ ಡಬಲ್ ಮಾಡುತ್ತೇವೆಂದವರು ಈಗ ರೈತರ ಸಂಕಷ್ಟಗಳನ್ನು, ಆತ್ಮಹತ್ಯೆಯನ್ನು ಡಬಲ್ ಮಾಡಿದ್ದಾರೆ. ನೆರೆ, ಬೆಳೆ ಹಾನಿಗಳಿಗೆ ಪರಿಹಾರ ನೀಡದ ಸರ್ಕಾರ ಇನ್ನಷ್ಟು ರೈತರ ಜೀವ ತೆಗೆಯುವುದು ನಿಶ್ಚಿತ’
-ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷ
ಬಿಜೆಪಿ ಆಡಳಿತದಲ್ಲಿ ಬಿಡಿಎ ಅಂದರೆ "ಭ್ರಷ್ಟಾಚಾರ ಡೆವಲಪ್ಮೆಂಟ್ ಅಥಾರಿಟಿ" ಎಂದಾಗಿದೆ!
— Karnataka Congress (@INCKarnataka) February 11, 2023
ನಿವೇಶನ ಹಂಚಿಕೆ, ಪರಿಹಾರ ವಿತರಣೆ ಮುಂದಾದ ಪ್ರಕ್ರಿಯೆಯಲ್ಲಿ ಭಾರಿ ಅಕ್ರಮಗಳು ನಡೆದಿರುವುದು ಲೋಕಾಯುಕ್ತ ದಾಳಿಯಿಂದ ಹೊರಬಂದಿದೆ.
ಬೆಂಗಳೂರಿನ ಬದಲು ಭ್ರಷ್ಟಾಚಾರವನ್ನು "ಡೆವಲಪ್ಮೆಂಟ್" ಮಾಡಿದ್ದೇ @BSBommai ಅವರ ಹೆಗ್ಗಳಿಕೆ ಮತ್ತು ಸಾಧನೆ! pic.twitter.com/suZ41MlWRA







