ಟಿಪ್ಪು ಬೆಂಬಲಿಸುವ ಕಾಂಗ್ರೆಸ್-ಜೆಡಿಎಸ್ ಗೆ ಅಥವಾ ಅಬ್ಬಕ್ಕನನ್ನು ಗೌರವಿಸುವ ಬಿಜೆಪಿಗೆ ಮತ ನೀಡುತ್ತಿರಾ?: ಅಮಿತ್ ಶಾ
ಕ್ಯಾಂಪ್ಕೋದ ಸುವರ್ಣ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿದ ಕೇಂದ್ರ ಸಚಿವ

ಪುತ್ತೂರು: ಕ್ಯಾಂಪ್ಕೊ ದೇಶದ ಮಾದರಿ ಸಹಕಾರಿ ಸಂಸ್ಥೆಯಾಗಿ ಬೆಳೆದಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಅವರು ಪುತ್ತೂರಿನ ತೆಂಕಿಲದಲ್ಲಿರುವ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಆವರಣದಲ್ಲಿ ಕ್ಯಾಂಪ್ಕೋದ ಸುವರ್ಣ ಮಹೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಕ್ಯಾಂಪ್ಕೊ ಅಡಿಕೆ ಬೆಳೆಗಾರರ ಸಂಕಷ್ಟದ ಕಾಲದಲ್ಲಿ ಅವರಿಗೆ ಸಹಾಯ ಮಾಡಿದ ಸಂಸ್ಥೆ, ರಬ್ಬರ್, ಕೋಕೊ ಬೆಳೆಗಾರರು ಮತ್ತು ಈಗ ತೆಂಗಿನ ಬೆಳೆಗಾರರಿಗೆ ನೆರವು ನೀಡಲು ಹೊರಟಿದೆ. ಸಂಸ್ಥೆ 50ನೆ ವರ್ಷಾಚರಣೆ ಮಾಡುತ್ತಿರುವುದೇ ಅದರ ಪ್ರಾಮಾಣಿಕ ಸೇವೆಗೆ ನೀಡಿದ ಪ್ರಮಾಣ ಪತ್ರ. 3000 ಕೋಟಿ ರೂಪಾಯಿಗಳ ಆರ್ಥಿಕ ವ್ಯವಹಾರ ಮಾಡುವ ಕ್ಯಾಂಪ್ಕೊ ಒಂದೇ ಸೂರಿನಡಿ ಕೃಷಿ ಉಪಕರಣಗಳು, ಕೀಟ ನಾಶಕ, ರಸಗೊಬ್ಬರ ಸೇರಿದಂತೆ ಕೃಷಿ ಸಲಕರಣೆಗಳ, ಉತ್ಪನ್ನಗಳ ಮಾಲ್ ಆರಂಭಿಸುವ ಯೋಜನೆ, ತೆಂಗಿನಕಾಯಿ ಉತ್ಪನ್ನ ಕಲ್ಪ, ಭದ್ರಾವತಿಯಲ್ಲಿ ಗೋದಾಮು ರಚನೆ, ಸೋಲಾರ್ ಅಳವಡಿಕೆ, ಗಾಳಿಯಂತ್ರದ ಬಳಕೆಯ ಮಾದರಿ ಸಹಕಾರಿ ಸಂಸ್ಥೆ ವಾರಣಾಸಿ ಸುಬ್ರಾಯ ಭಟ್ ರವರ ಮೂಲಕ ಬೆಳೆದು ಬಂದಿರುವುದಕ್ಕಾಗಿ ತಾನು ಅಭಿನಂದಿಸು ವುದಾಗಿ ತಿಳಿಸಿದ್ದಾರೆ.
ಕಾಂಗ್ರೆಸ್-ಜೆಡಿಎಸ್ ವಿರುದ್ಧ ಅಮಿತ್ ಶಾ ವಾಗ್ದಾಳಿ: ಕರ್ನಾಟಕದ ಸುರಕ್ಷತೆಗಾಗಿ ಮುಂದಿನ ಚುನಾವಣೆಯಲ್ಲಿ ಮೋದಿಯನ್ನು, ಬೊಮ್ಮಾಯಿಯವರನ್ನು ಮತ್ತು ಬಿಜೆಪಿಯನ್ನು ಬೆಂಬಲಿಬೇಕು ಎಂದು ಅಮಿತ್ ಶಾ ಮನವಿ ಮಾಡಿದರು.
ಟಿಪ್ಪುವನ್ನು ಬೆಂಬಲಿಸುವ ಕಾಂಗ್ರೆಸ್-ಜೆಡಿಎಸ್ ಗೆ ಮತ ನೀಡುತ್ತಿರಾ ಅಥವಾ ಅಬ್ಬಕ್ಕನನ್ನು ಗೌರವಿಸುವ ಬಿಜೆಪಿಗೆ ಮತ ನೀಡುತ್ತೀರಾ ಎಂದು ಅಮಿತ್ ಶಾ ಪ್ರಶ್ನಿಸಿದರು.
ಬಿಜೆಪಿ ಪಂಡಿತ್ ದೀನ್ ದಯಾಳ್ ರ ಆಶಯದಂತೆ ರಾಷ್ಟ್ರದ ಸುರಕ್ಷತೆ, ಅಭಿವೃದ್ಧಿ, ಬಡವರ ಕಲ್ಯಾಣ ಕಾರ್ಯಕ್ರಮಗಳಿಗೆ ಒತ್ತು ನೀಡುತ್ತಾ ಬಂದಿದೆ. ಬಡವರಿಗೆ ವಿದ್ಯುತ್, ಅಡುಗೆ ಅನಿಲ, ವಿಮೆ ಮೊದಲಾದ ಸೌಲಭ್ಯ ನೀಡುತ್ತಾ ಬಂದಿದೆ ಎಂದು ಅಮಿತ್ ಶಾ ತಿಳಿಸಿದ್ದಾರೆ. ಈ ಬಾರಿಯ ಬಜೆಟ್ ನ ಮೂಲಕ ಗ್ರಾಮ ಪಂಚಾಯತ್ ನಲ್ಲಿ ಸಹಕಾರಿ ಸಂಘಗಳ ಸ್ಥಾಪನೆಗೆ ನೆರವು ನೀಡಲು ನಿರ್ಧರಿಸಿದೆ.
ಮಂಗಳೂರು ವಿಮಾನ ನಿಲ್ದಾಣದ ವಿಸ್ತರಣೆ, ಎಂಆರ್ಪಿಎಲ್ ವಿಸ್ತರಣೆ, ಆದಿವಾಸಿಗಳಿಗೆ ಭೂಮಿ, ಗಂಜಿ ಮಠದಲ್ಲಿ ಪ್ಲಾಸ್ಟಿಕ್ ಪಾರ್ಕ್ ಯೋಜನೆ, ಮೀನುಗಾರರಿಗೆ ಪ್ರಧಾನ ಮಂತ್ರಿ ಮತ್ಸಾಶ್ರಯ ಯೋಜನೆ, ಮೀನುಗಾರಿಕೆಗೆ, ಸಹಕಾರಿ ರಂಗಕ್ಕೆ ಪ್ರತ್ಯೇಕ ಸಚಿವಾಲಯ ಬಿಜೆಪಿಯ ಕೊಡುಗೆ ಎಂದರು.
ಕಾಂಪ್ಕೊ ಸುವರ್ಣ ಮಹೋತ್ಸವದ ಚಾರಿತ್ರಿಕ ಕಾರ್ಯಕ್ರಮದ ಸಂದರ್ಭದಲ್ಲಿ ಪುತ್ತೂರಿನ ಮಹಮ್ಮಾಯ ದೇವಸ್ಥಾನದ ಹತ್ತಿರ ಒಂದು ಎಕರೆ ವಿಸ್ತೀರ್ಣದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಅಗ್ರಿಮಾಲ್ ಗೆ ಶಿಲಾನ್ಯಾಸ ಪುತ್ತೂರಿನ ಬಾಕಲೇಟ್ ಕಾರ್ಖಾನೆ ಆವರಣದಲ್ಲಿ ತಂಗಿನ ಎಣ್ಣೆ ಕಲ್ಪ ಮಾರುಕಟ್ಟೆಗೆ ಬಿಡುಗಡೆ ಮತ್ತು ಭದ್ರಾವತಿಯಲ್ಲಿ ಸುಸಜ್ಜಿತವಾಗಿ ನಿರ್ಮಿಸಲ್ಪಟ್ಟ ಬಹು ಉದ್ದೇಶಿತ ಗೋದಾಮನ್ನು ಡಿಜಿಟಲ್ ತಂತ್ರಜ್ಞಾನದ ಮೂಲಕ ಅಮಿತ್ ಶಾ ಉದ್ಘಾಟಿಸಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ಮುಂದಿನ ಬಜೆಟ್ ನಲ್ಲಿ ಅಡಿಕೆ ಸಂಶೋಧನೆಗೆ ವಿಶೇಷ ಅನುದಾನ ನೀಡುವ ಭರವಸೆ ನೀಡಿದರು.
ಕಾನ, ಬಾಣೆ, ಸೊಪ್ಪಿನಬೆಟ್ಟದಲ್ಲಿ ಕೃಷಿ ಮಾಡುತ್ತಿರುವ ರೈತರಿಗೆ ಹಕ್ಕು ನೀಡುವ ನಿರ್ಧಾರ ಸರಕಾರ ಕೈಗೊಳ್ಳಲಿದೆ. ಕೇಂದ್ರ ಸರ್ಕಾರ ಈ ಬಾರಿಯ ಬಜೆಟ್ ನಲ್ಲಿ 7500 ಕೋಟಿ ರೂ ಗಳನ್ನು ರಾಜ್ಯ ದ ರೈಲ್ವೇ ಯೋಜನೆ ಗೆ ನೀಡಿರುವುದಕ್ಕೆ ಅಮಿತ್ ಶಾ ಅವರನ್ನು ಅಭಿನಂದಿಸಿದರು.
ಸಮಾರಂಭದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾತನಾಡುತ್ತಾ, ಅಡಿಕೆ ಬೆಳೆಗಾರರಿಗೆ ನೆರವು ನೀಡಿದ ಸಂಸ್ಥೆ ಬಹುರಾಷ್ಟ್ರೀಯ ಕಂಪೆನಿಗಳಿಗೆ ಸಾಟಿಯಾಗಿ ಬೆಳೆದು ಬಂದಿದೆ. ಜಾಗತಿಕವಾಗಿ ಬೆಳೆಯಲಿ ಎಂದು ಶುಭ ಹಾರೈಸಿದರು.
ಸಚಿವರಾದ ಎಸ್.ಟಿ. ಸೋಮಶೇಖರ್, ಸುನಿಲ್ ಕುಮಾರ್, ಎಸ್.ಅಂಗಾರ, ಕೋಟ ಶ್ರೀನಿವಾಸ ಪೂಜಾರಿ, ಆರಗ ಜ್ಞಾನೇಂದ್ರ, ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕರಾದ ಸಂಜೀವ ಮಠಂದೂರು, ರಾಜೇಶ್ ನಾಯ್ಕ್, ಹರೀಶ್ ಪೂಂಜಾ, ಕಾಂಪ್ಕೊ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ, ವಿವೇಕಾನಂದ ವಿದ್ಯಾವರ್ಧಕ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಪ್ರಭಾಕರ ಭಟ್ ಉಪಸ್ಥಿತರಿದ್ದರು.
ಕ್ಯಾಂಪ್ಕೊ ವ್ಯವಸ್ಥಾಪಕ ನಿರ್ದೇಶಕ ಹೆಚ್.ಎಮ್. ಕೃಷ್ಣ ಕುಮಾರ್ ಸ್ವಾಗತಿಸಿದರು.














