ಸಂವಿಧಾನ ನಾಶಕ್ಕೆ ‘ಸುಪಾರಿ’ ಪಡೆದವರು ಮುಂಚೂಣಿಯಲ್ಲಿದ್ದಾರೆ: ಸಾಹಿತಿ ಡಾ.ಕೆ.ಮರುಳಸಿದ್ದಪ್ಪ

ಬೆಂಗಳೂರು, ಫೆ.11: ದೇಶದಲ್ಲಿ ಸಂವಿಧಾನವನ್ನು ನಾಶ ಮಾಡುವುದಕ್ಕೆ ಸುಪಾರಿ ತೆಗೆದುಕೊಂಡಿರುವವರು ಮುಂಚೂಣಿಯಲ್ಲಿದ್ದಾರೆ ಎಂದು ಹಿರಿಯ ಸಾಹಿತಿ ಡಾ.ಕೆ.ಮರುಳಸಿದ್ದಪ್ಪ ಕಳವಳ ವ್ಯಕ್ತಪಡಿಸಿದ್ದಾರೆ.
ಶನಿವಾರ ನಗರದ ಗಾಂಧಿಭವನದಲ್ಲಿ ಲೇಖಕ ಕುಂ.ವೀರಭದ್ರಪ್ಪನವರ ‘ಸುಪಾರಿ’ ಕಾದಂಬರಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಇಂದು ದೇಶ ಶೋಚನೀಯ ಸ್ಥಿತಿಯನ್ನು ತಲುಪಿದ್ದು, ಇಂತಹ ಸಂದರ್ಭದಲ್ಲಿ ಜನಾಭಿಪ್ರಾಯವನ್ನು ರೂಪಿಸುವಂತಹ ಜವಾಬ್ದಾರಿ ನೇರ, ನಿಷ್ಠೂರವಾದಿ ಬರಹಗಾರರ ಮೇಲೆ ಇರುತ್ತದೆ. ಈ ಜವಾಬ್ದಾರಿಯನ್ನು ನಮ್ಮ ಲೇಖಕಕರು ಎಷ್ಟರ ಮಟ್ಟಿಗೆ ನಿರ್ವಹಿಸುತ್ತಿದ್ದಾರೆ ಎನ್ನುವುದನ್ನು ಒಮ್ಮೆ ಯೋಚಿಸಿದರೆ ಬಹಳ ನಿರಾಸೆ ಹುಟ್ಟುತ್ತದೆ. ಬಹುತೇಕ ಲೇಖಕರು, ಕವಿಗಳು ಮಾತನಾಡಲೇ ಬೇಕಾದ ನಿರ್ಣಾಯ ಸಂದರ್ಭಗಳಲ್ಲಿ ಮೌನಿಬಾಬಾಗಳಾಗುತ್ತಾರೆ. ಜ್ವಲಂತ ವಿಷಯಗಳ ಬಗ್ಗೆ ತಮ್ಮ ಸಾಮಾಜಿಕವಾದಂತಹ ಅಭಿಪ್ರಾಯಗಳನ್ನೇ ನೀಡುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಕುಂವೀ ಮಾತ್ರ ತಮ್ಮ ಸೃಜನಶೀಲ ಬರವಣಿಗೆಯಿಂದಾಚೆಗೂ ದೇಶದ ದುರಂತ ಸಮಸ್ಯೆಗಳಿಗೆ ತಮ್ಮ ಅಭಿಪ್ರಾಯಗಳನ್ನು ನಿರ್ಭೀತವಾಗಿ, ದಿಟ್ಟವಾಗಿ, ಮುಕ್ತವಾಗಿ ಹೇಳುತ್ತಾ ಬಂದಿದ್ದು, ಇದರಿಂದಾಗಿಯೇ ಅವರಿಗೆ ಅನೇಕ ಸಲ ಕೊಲೆ ಬೆದರಿಕೆಯ ಪತ್ರಗಳೂ ಬಂದಿವೆ. ಆದರೆ ಅವರು ಯಾವುದಕ್ಕೂ ಹೆದರಿಲ್ಲ. ಅವರ ಎಲ್ಲ ಕೃತಿಗಳಲ್ಲಿ ತುಳಿತಕ್ಕೊಳಗಾದವರ ಧ್ವನಿ, ಅವರ ಪರವಾದ ಒಂದು ನಿಲುವು ಇರುತ್ತದೆ ಎಂದು ತಿಳಿಸಿದರು.
ಕುಂವೀ ಕನ್ನಡದ ಒಬ್ಬ ವಿಶಿಷ್ಟ ಲೇಖಕ. ದಣಿವರಿಯದೆ ನೂರಾರು ಪುಸ್ತಕಗಳನ್ನು ಕನ್ನಡಕ್ಕೆ ಕೊಡುಗೆಯಾಗಿ ನೀಡಿದ್ದಾರೆ. ಕೃತಿಗಳ ಮೂಲಕ ಮತ್ತು ವ್ಯಕ್ತಿಯಾಗಿ ಅವರಿಗಿರುವ ಸಾಮಾಜಿಕ ಬದ್ಧತೆ ನನಗೆ ಹೆಚ್ಚು ಆಪ್ತವಾಗುತ್ತದೆ. ಈಗ ಹೊರತಂದಿರುವ ಪುಸ್ತಕ ಸಾಮಾಜಿಕ ಕಾಳಜಿಯಿಂದ ಕೂಡಿದ ಅಸಾಧಾರಣ ಕಾದಂಬರಿಯಾಗಿದೆ. ಕಾದಂಬರಿಯ ಪ್ರತಿಯೊಂದು ಪಾತ್ರವನ್ನು ನಿರೀಕ್ಷಿಸಲು ಅಸಾಧ್ಯ ಎಂದು ಹೇಳಿದರು.
ಲೇಖಕ ಅಗ್ರಹಾರ ಕೃಷ್ಣಮೂರ್ತಿ ಮಾತನಾಡಿ, ಸಾಹಿತ್ಯ ಎನ್ನುವುದು ಜೀವನದ ಪ್ರತಿಬಿಂಬ. ಜಗತ್ತನ್ನು ಇನ್ನೊಂದು ರೀತಿಯಲ್ಲಿ ಬಿಂಬಿಸುವ, ಕಾಣಿಸುವ ಕೆಲಸ. ಹಾಗೆಯೇ ಕುಂವೀ ಸುಪಾರಿ ಕಾದಂಬರಿಯಲ್ಲಿ ನಮಗೆ ಇನ್ನೊಂದು ಜಗತ್ತನ್ನು ಕಟ್ಟಿಕೊಟ್ಟಿದ್ದಾರೆ ಎಂದ ಅವರು, ಕಾದಂಬರಿಯಲ್ಲಿ ಸಮಾಜದ ಪೀಕಲಾಟ, ದುರಂತಗಳನ್ನು ನೇರವಾಗಿ ಹೇಳದೆ ಪಲ್ಲಟದ ರೂಪದಲ್ಲಿ ನಮ್ಮ ಮುಂದೆ ತಂದಿಟ್ಟಿದ್ದಾರೆ ಎಂದರು.
ಹಿರಿಯ ವಿಮರ್ಶಕ ಪ್ರೊ.ಸಿ.ಎನ್.ರಾಮಚಂದ್ರನ್ ಮಾತನಾಡಿ, ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸುವಲ್ಲಿ ಕುಂವೀ ಪಾತ್ರವೂ ಇದೆ. ಅವರ ಒಂದೊಂದು ಪುಸ್ತಕಗಳೂ ಒಂದೊಂದು ಮಾದರಿಯನ್ನು ಒಳಗೊಂಡಿರುತ್ತವೆ. ಪ್ರತಿ ಪುಸ್ತಕದಲ್ಲಿ ಹೊಸ ವಸ್ತು, ನವೀನ ಶೈಲಿಯಲ್ಲಿ ಬರೆಯುತ್ತಾರೆ ಎಂದ ಅವರು, ಸುಪಾರಿ ಕಾದಂಬರಿಯು ಕೌಟುಂಬಿಕ, ಸಾಮಾಜಿಕ, ಸಾಂಸ್ಕøತಿಕ ಮತ್ತು ಪಾತಕಲೋಕ ಎಲ್ಲವನ್ನೂ ಒಳಗೊಂಡಿದ್ದು, ಇಂತಹದ್ದೇ ಎಂದು ನಿಖರವಾಗಿ ನಿರ್ಧರಿಸಲು ಸಾಧ್ಯವಾಗುವುದಿಲ್ಲ. ಅದರಲ್ಲಿನ ಪಾತ್ರಗಳೂ ಸಹ ತರ್ಕಕ್ಕೆ, ನಿರೀಕ್ಷೆಗೆ ನಿಲುಕದ್ದು ಎಂದರು. ಕಾರ್ಯಕ್ರಮದಲ್ಲಿ ಸಾಹಿತಿ ಕುಂ ವೀರಭದ್ರಪ್ಪ, ಪ್ರಕಾಶಕರೂ ಆಗಿರುವ ಸಪ್ನ ಬುಕ್ ಹೌಸ್‍ನ ನಿತಿನ್‍ಶಾ ಸೇರಿದಂತೆ ಇತರರು ಇದ್ದರು.







