ಯಕ್ಷಗಾನಕ್ಕೆ ಪಾರಂಪರಿಕ, ಸಾಂಸ್ಥಿಕ, ಸಾಮುದಾಯಿಕತೆಗಳ ಸಮನ್ವಯತೆ ಅಗತ್ಯ: ಡಾ.ಪ್ರಭಾಕರ ಜೋಶಿ
ರಾಜ್ಯಮಟ್ಟದ ಪ್ರಥಮ ಸಮಗ್ರ ಯಕ್ಷಗಾನ ಸಮ್ಮೇಳನ ಉದ್ಘಾಟನೆ

ಉಡುಪಿ: ಯಕ್ಷಗಾನ ಕಲೆಗೆ ಪಾರಂಪರಿಕ-ಸಾಂಸ್ಕೃತಿಕ ಹಾಗೂ ಸಾಮುದಾಯಿಕ ಪದ್ಧತಿಗಳ ಯೋಗ್ಯ ಸಮನ್ವಯದ ವ್ಯವಸ್ಥೆಯನ್ನು ರೂಪಿಸಬೇಕು. ಇದಕ್ಕೆ ದೊಡ್ಡ ಪ್ರಮಾಣದ ಯೋಜನೆ- ಅರ್ಥ ಸಂಯೋಜನೆ- ದುಡಿಮೆಗಳ ಅಗತ್ಯ ಇದ್ದು, ಸರಕಾರಿ ಹಾಗೂ ಖಾಸಗಿ ನೆರವು ಅತ್ಯಗತ್ಯ. ಅದೇ ರೀತಿ ರಾಜ್ಯ ಸರಕಾರ ಯಕ್ಷಗಾನ ಕೇಂದ್ರಗಳಿಗೆ ಸಮಗ್ರ ಗೌರವಯುತ ಅನುದಾನ ನೀತಿಯನ್ನು ರೂಪಿಸಬೇಕು ಎಂದು ಯಕ್ಷಗಾನ ವಿದ್ವಾಂಸ, ಅರ್ಥದಾರಿ, ಲೇಖಕ ಡಾ.ಎಂ.ಪ್ರಭಾಕರ ಜೋಶಿ ಸಲಹೆ ನೀಡಿದ್ದಾರೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು ಹಾಗೂ ಉಡುಪಿ ಜಿಲ್ಲಾಡಳಿತಗಳ ಸಂಯುಕ್ತ ಆಶ್ರಯದಲ್ಲಿ ಉಡುಪಿ ಎಂಜಿಎಂ ಕಾಲೇಜಿನ ಎ.ಎಲ್.ಎನ್.ರಾವ್ ಕ್ರೀಡಾಂಗಣದಲ್ಲಿ ಆಯೋಜಿಸಲಾದ ಎರಡು ದಿನಗಳ ರಾಜ್ಯಮಟ್ಟದ ಪ್ರಥಮ ಸಮಗ್ರ ಯಕ್ಷಗಾನ ಸಮ್ಮೇಳನದ ಸಮ್ಮೇಳನಾಧ್ಯಕ್ಷತೆಯ ಸ್ಥಾನದಲ್ಲಿ ಅವರು ಮಾತನಾಡುತಿದ್ದರು.
ಯಕ್ಷಗಾನ ಶಿಕ್ಷಣ ಪದ್ಧತಿ ಮತ್ತು ಸಂಘಟನೆಯ ಸ್ವರೂಪದಲ್ಲಿ ಆಮೂಲಾಗ್ರ ಪರಿಷ್ಕಾರಗಳು ಅಗತ್ಯ. ಕಲಾಶಿಕ್ಷಣದ ಪರಿಕಲ್ಪನೆಗಳಲ್ಲಿ ಅನೇಕ ಹೊಸ ವಿಚಾರಗಳೂ ಬಂದಿವೆ. ಪ್ರಸಕ್ತ ಯಕ್ಷಗಾನ ಶಿಕ್ಷಣದಲ್ಲಿ ಕತಾತತ್ತ್ವ (ಥಿಯರಿ) ಹಾಗೂ ಅನ್ಯಕಲೆಗಳ ಪರಿಚಯ ಭಾಗ ಇಲ್ಲವೇ ಇಲ್ಲ ಎಂಬಂತಿದೆ. ಅವುಗಳ ಅಳವಡಿಕೆ ಅತಿ ಮುಖ್ಯ ಎಂದವರು ಹೇಳಿದರು.
ಯಕ್ಷಗಾನ ಶಾಸ್ತ್ರೀಯ: ಯಕ್ಷಗಾನ ಜಾನಪದವೇ ಅಥವಾ ಶಾಸ್ತ್ರೀಯವೇ ಎಂಬ ಕುರಿತ ಚರ್ಚೆಯನ್ನು ಪ್ರಸ್ತಾಪಿಸಿದ ಡಾ.ಜೋಶಿ, ಯಕ್ಷಗಾನವು ಶಾಸ್ತ್ರೀಯವೇ ಎಂಬ ಪ್ರಶ್ನೆಗೆ ಸರಳವಾದ ಉತ್ತರ ಹೌದು ಎಂದರು. ವಸ್ತು ವಿಷಯಗಳಲ್ಲಿ ವೈವಿಧ್ಯತೆ, ಗಾಂಭೀರ‌್ಯ ಉಚ್ಛತೆ ಇರುವ, ನಿಯಮಬದ್ಧವಾದ ಸಂಕೀರ್ಣತೆ ಇರುವ ಪ್ರಕಾರಗಳನ್ನು ಶಾಸ್ತ್ರೀಯ ಎನ್ನಬಹುದು. ಈ ನೆಲೆಯಲ್ಲಿ ಯಕ್ಷಗಾನ ಕಲಾರೂಪವು ಶಾಸ್ತ್ರೀಯ ಎಂದು ಪ್ರತಿಪಾದಿಸಿದರು.
ಇದರ ವಸ್ತು ಗಹನವಾದ ದೈವಿಕ ಪುರಾಣ ಕಥನಗಳು, ಇದರ ಪದ, ಪದ್ಯಗಳು ಛಂದಶಾಸ್ತ್ರೀಯವಾದವು. ರಾಗತಾಳಗಳು ಕರ್ನಾಟಕಿ ಶಾಸ್ತ್ರೀಯ ಸಂಗೀತದ ಪ್ರಾಚೀನವಾದ ವಿಶಿಷ್ಟವಾದ, ಖಚಿತವಾದ ಶೈಲಿ, ಆಕಾರವುಳ್ಳದ್ದು. ಮಾತುಗಾರಿಕೆಯು ಪರಿಷ್ಕೃತವಾದ ಆಶುಸಾಹಿತ್ಯ. ಒಟ್ಟಿನಲ್ಲಿ ಇದು ಕ್ರಿ.ಪೂ. ಶಾಸ್ತ್ರೀಯ ನಾಟ್ಯ ಸಂಪ್ರದಾಯ. ಅಖಿಲ ಭಾರತೀಯ ಪಾರಂಪರಿಕ ಶಾಸ್ತ್ರೀಯ ಕಲಾ ಸಮುಚ್ಚಯದ ಒಂದು ಹೆಗ್ಗುರುತು ಮತ್ತು ಉಳಿಕೆ ಮುಂದುವರಿಕೆ ಎಂದು ಯಕ್ಷಗಾನ ಶಾಸ್ತ್ರೀಯ ಎಂಬುದಕ್ಕೆ ಸಮರ್ಥನೆಯಾಗಿ ತಿಳಿಸಿದರು.
ಕಲೆ ನಿಂತ ನೀರಲ್ಲ. ಹಾಗೆಯೇ ಅದು ಎಲ್ಲವನ್ನೂ ಕೊಚ್ಚಿಕೊಂಡು ಹೋಗುವ ನೆರೆಯೂ ಆಗಬಾರದು. ಪ್ರಯೋಗ ಬೇಕು. ಆಧುನಿಕತೆಯೂ ಬೇಕು. ಆದರೆ ನಾವೀನ್ಯ, ಪ್ರಯೋಗ, ಆಧುನಿಕತೆ, ತಂತ್ರಜ್ಞಾನ ಎಂದರೆ ಏನು ಎಂಬುದನ್ನು ತಿಳಿದಿರಬೇಕು. ಅವುಗಳ ಅನ್ವಯ ಎಂದರೇನು ಎಂಬುದರ ತಿಳಿವೂ ಇರಬೇಕು ಎಂದು ಡಾ.ಜೋಶಿ ಯಕ್ಷಗಾನದಲ್ಲಿ ಕಂಡುಬರುತ್ತಿರುವ ಬದಲಾವಣೆಯ ಕುರಿತು ವಿವರಿಸಿದರು.
ಶಾಸ್ತ್ರೀಯ ಮನ್ನಣೆಗೆ ಪ್ರಯತ್ನ: ಯಕ್ಷಗಾನಕ್ಕೆ ಯುನೆಸ್ಕೋ ಪಾರಂಪರಿಕ ಪ್ರಕಾರದ ಮಾನ್ಯತೆ, ಸಂಗೀತ ನಾಟಕ ಅಕಾಡೆಮಿಯ ಶಾಸ್ತ್ರೀಯ ಪ್ರಕಾರಗಳ -ಭರತನಾಟ್ಯ, ಕಥಕಳ್ಳಿ, ಕೂಚುಪುಡಿ ಇತ್ಯಾದಿ 12 ಕಲಾಪ್ರಕಾರದ ಜೊತೆ- ಮನ್ನಣೆ ಸಿಗಬೇಕೆಂಬುದು ಎಲ್ಲರ ಅಪೇಕ್ಷೆ. ಇದಕ್ಕೆ ಪ್ರಯತ್ನಗಳೂ ಅಗತ್ಯ ಎಂದು ಡಾ.ಪ್ರಭಾಕರ ಜೋಶಿ ನುಡಿದರು.
ಇದರೊಂದಿಗೆ ನಾವು ಗಂಭೀರವಾಗಿ ಆಲೋಚಿಸಬೇಕಾದ ವಿಷಯವೆಂದರೆ ಶಾಸ್ತ್ರೀಯತೆ, ಅಭಿಮಾನ, ಮಾನ್ಯತೆಗಳಿಗೆ ತಕ್ಕುದಾಗಿ ನಮ್ಮ ಒಟ್ಟು ರಂಗ ಇದೆಯೇ? ಅದಕ್ಕೊಂದು ಆದರ್ಶ, ಅಂಶೋಧ್ಧಾರ ಕಲ್ಪಿತರೂಪವನ್ನು ನಾವೆಲ್ಲ ಸೇರಿ ಕೊಡಬೇಕಾಗಿದೆ.ಕೇವಲ ಅಂಧಾಭಿಮಾನದಿಂದ, ಅಲ್ಪತೃಪ್ತಿಯಿಂದ ಇದು ಆಗುವುದಿಲ್ಲ, ದಾರಿ ಸುಲಭವಲ್ಲ. ಯಕ್ಷಗಾನ ಅಭಿಮಾನ- ಅಭಿಯಾನ- ಅಭಿಜ್ಞಾನದ ಸಂಗಮವಾಗಬೇಕು ಎಂದರು.
ಕಾರ್ಟೂನ್ ಚಿತ್ರ ಸರಣಿ: ಯಕ್ಷಗಾನವನ್ನು ಮುಂದಿನ ಪೀಳಿಗೆಗೆ ದಾಟಿಸುವ ಹಲವು ಪ್ರಯತ್ನಗಳನ್ನು ಉಲ್ಲೇಖಿಸಿ ಶ್ಲಾಘಿಸಿದ ಅವರು, ಉಡುಪಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪ್ರೌಢ ಶಾಲೆಗಳಲ್ಲಿ ಶಾಸಕ ಕೆ.ರಘುಪತಿ ಭಟ್ ಅವರ ನೇತೃತ್ವದಲ್ಲಿ ನಡೆದಿರುವ ಯಕ್ಷ ಶಿಕ್ಷಣ ಟ್ರಸ್ಟ್ ಮೂಲಕ ನೀಡಲಾಗುವ ಯಕ್ಷಗಾನ ಕಲಾ ಶಿಕ್ಷಣ, ಕೋಟ-ಸಾಲಿಗ್ರಾಮದಲ್ಲಿ ಎಚ್.ಶ್ರೀಧರ ಹಂದೆ ಮತ್ತು ಕಾರ್ಕಳ ಶ್ರೀನಿವಾಸ ಉಡುಪರ ಸಾಲಿಗ್ರಾಮ ಮಕ್ಕಳ ಮೇಳ ಉತ್ತಮ ಪ್ರಯತ್ನ ಎಂದರು.
ಯಕ್ಷಗಾನ ಪ್ರಸಂಗಗಳ ಕಥೆಗಳನ್ನು ಯಕ್ಷಗಾನ ವೇಷಗಳ ಚಿತ್ರರೂಪದಲ್ಲಿ ಕಾರ್ಟೂನ ಚಿತ್ರ ಸರಣಿ, ಕಾರ್ಟೂನ ಚಲನಚಿತ್ರಗಳ ರೂಪದಲ್ಲಿ ನೀಡುವ ಕುರಿತು ಆ ಕ್ಷೇತ್ರಗಳ ತಜ್ಞರು ಕಾರ್ಯಪ್ರವೃತ್ತರಾದರೆ, ಯಕ್ಷಗಾನಕ್ಕೆ ಹೊಸ ಸಾಧ್ಯತೆಯೊಂದು ಗೋಚರಿಸಲಿದೆ ಎಂದರು.
ಯಕ್ಷಗಾನಂ ವಿಶ್ವಗಾನಂ: ಯಕ್ಷಗಾನವು ವಿಶ್ವಗಾನವಾಗಬೇಕಾದರೆ ನಾವು ವಿಶ್ವಮಟ್ಟದ ರಂಗಭೂಮಿಯಲ್ಲಿ ಸ್ವೀಕಾರಕ್ಕೆ ಯೋಗ್ಯವಾದ ರೀತಿಯಲ್ಲಿ ಗಾನ- ನೃತ್ಯ- ಪ್ರಸ್ತುತಿ- ದ್ವನಿ- ಬೆಳಕು- ರಂಗಶಿಸ್ತು- ಸಮಯ ಪರಿವಾಲನೆ- ಸಮಗ್ರ ನಿರ್ದೇಶಿತ ರೂಪಗಳಿಂದ ಕಲಾ ಪ್ರದರ್ಶನ ನೀಡಬೇಕು ಎಂದವರು ಸಲಹೆ ನೀಡಿದರು.
ಯಕ್ಷಗಾನದಲ್ಲಿ ಆಗಬೇಕಾದ 30 ಮುಖ್ಯ ಕೆಲಸಗಳ ಪಟ್ಟಿ
ತಮ್ಮ ಸುಧೀರ್ಘ ಭಾಷಣದ ಕೊನೆಯಲ್ಲಿ ಡಾ.ಪ್ರಭಾಕರ ಜೋಶಿ ಯಕ್ಷಗಾನ ರಂಗದಲ್ಲಿ ಆಗಬೇಕಾಗಿರುವ ಕೆಲವು ಮುಖ್ಯವಾದ ಕೆಲಸದ ಪಟ್ಟಿಯನ್ನು ಮಾಡಿದರು. 30 ಅಂಶಗಳಿರುವ ಈ ಪಟ್ಟಿಯಲ್ಲಿ ಯಕ್ಷಗಾನ ಅಕಾಡೆಮಿಗೆ ಕನಿಷ್ಠ 10 ಕೋಟಿ ರೂ.ಗಳನ್ನು ಯಕ್ಷಗಾನದ ಬಳಕೆಗಾಗಿ ಮೀಸಲಿರುವಂತೆ ಸರಕಾರಕ್ಕೆ ಮನವಿಯನ್ನೂ ಮಾಡಿದರು.
ಪ್ರಮುಖ ಅಂಶ: ಯಕ್ಷಗಾನದ ವಿವಿಧ ತಿಟ್ಟು, ಮೇಳಗಳ, ತಾಳಮದ್ದಲೆ, ಮೂಡಪಾಯ, ಗಟ್ಟರ ಕೋರೆ, ಕೇಳಿಕೆ ಸಹಿತ ತಿಟ್ಟುಗಳ ಲಭ್ಯ ಪಾರಂಪರಿಕ ರೂಪಗಳ ತಜ್ಞ ದಾಖಲೀಕರಣ, ಯಕ್ಷಗಾನ ಕಲೆ, ಕಲಾವಿದರು, ಮೇಳಗಳು, ಗ್ರಂಥಗಳು, ಈವರೆಗಿನ ವಿದ್ಯುನ್ಮಾನ ದಾಖಲೆಗಳ, ಜಾಲತಾಣ, ದತ್ತಾಂಶ ಸಂಪದ ರಚಿಸಬೇಕು. ಕಲಾವಿದ, ಸಿಬ್ಬಂದಿಗಳಿಗೆ ವಾಸ್ತವವಾದಿ ಕಾರ್ಯಸಾಧ್ಯ ಕಲ್ಯಾಣ ಯೋಜನೆ ಅನುಷ್ಠಾನ.
ಹತ್ತು ವರ್ಷ ತುಂಬಿರುವ ಯಕ್ಷಗಾನ ಕೇಂದ್ರಗಳಿಗೆ ಸೂಕ್ತ ನಿಯಂತ್ರಣ ದೊಂದಿಗೆ ಖಾಯಂ ಅನುದಾನ. ದೇವಾಲಯಗಳಿಗೆ ಕಲಾ ನೀತಿ ಅಳವಡಿಕೆ. ಯಕ್ಷಗಾನವನ್ನು ರಾಷ್ಟ್ರೀ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಸ್ತುತ ಪಡಿಸಲು ರಂಗತಜ್ಞರ ಮೂಲಕ ಉಪಕ್ರಮ.
