ಯುವ ಪೀಳಿಗೆ ಮೂಲಕ ಯಕ್ಷಗಾನಕ್ಕೆ ಪುನರುಜ್ಜೀವನ: ಸಚಿವೆ ಶೋಭಾ
ರಾಜ್ಯ ಮಟ್ಟದ ಸಮಗ್ರ ಯಕ್ಷಗಾನ ಸಮ್ಮೇಳನ-2023

ಉಡುಪಿ: ಯುವ ಪೀಳಿಗೆಗೆ ಯಕ್ಷಗಾನವನ್ನು ಶಾಸ್ತ್ರಬದ್ಧವಾಗಿ ಕಲಿಸುವ ಮೂಲಕ, ಕಲೆಯನ್ನು ಉಳಿಸಿ, ಬೆಳೆಸಿ ಮುಂದಿನ ತಲೆಮಾರಿಗೆ ಹಸ್ತಾಂತರಿಸುವ ಪ್ರಯತ್ನ ನಡೆಯಬೇಕು ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಖಾತೆ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಯಕ್ಷಗಾನ ಅಕಾಡೆಮಿ, ಬೆಂಗಳೂರು, ಜಿಲ್ಲಾಡಳಿತ ಉಡುಪಿ ಇವುಗಳ ಸಂಯುಕ್ತ ಆಶ್ರಯದಲ್ಲಿ ನಗರದ ಎಂಜಿಎಂ ಕಾಲೇಜಿನ ಎ.ಎಲ್.ಎನ್.ರಾವ್ ಕ್ರೀಡಾಂಗಣದಲ್ಲಿ ಶನಿವಾರ ಪ್ರಾರಂಭಗೊಂಡ ಎರಡು ದಿನಗಳ ರಾಜ್ಯಮಟ್ಟದ ಪ್ರಥಮ ಸಮಗ್ರ ಯಕ್ಷಗಾನ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅನುಪಸ್ಥಿತಿಯಲ್ಲಿ ಸಮ್ಮೇಳನವನ್ನು ಉದ್ಘಾಟಿಸಿದ ಶೋಭಾ, ಕನ್ನಡ ಭಾಷೆ ಮತ್ತು ಸಾಹಿತ್ಯವನ್ನು ಬೆಳೆಸಿದ ಯಕ್ಷಗಾನದಿಂದ ಮಾತುಗಾರಿಕೆ ಸುಲಲಿತಗೊಳ್ಳುತ್ತದೆ. ದೇಹಕ್ಕೆ ವ್ಯಾಯಾಮ ಹಾಗೂ ಪುರಾಣಗಳ ಅರಿವು ಸಾಧ್ಯವಾಗುತ್ತದೆ. ಹೀಗಾಗಿ ಎಲ್ಲಾ ಶಾಲೆಗಳಲ್ಲೂ ಯಕ್ಷಗಾನ ಕಲಿಕೆಯನ್ನು ಕಡ್ಡಾಯಗೊಳಿಸುವುದು ಸೂಕ್ತ ಎಂದರಲ್ಲದೇ, ಜಾತಿ, ಧರ್ಮ, ಲಿಂಗ ತಾರತಮ್ಯವನ್ನು ಮೀರಿ ನಿಂತ ಕಲೆ ಯಕ್ಷಗಾನ ಎಂದರು.
ಇದೇ ಸಂದರ್ಭದಲ್ಲಿ ಸಮ್ಮೇಳನದ ಪ್ರಯುಕ್ತ ಯಕ್ಷಗಾನ ಅಕಾಡೆಮಿ ಮೂಲಕ ಪ್ರಕಟಗೊಂಡ ವಿವಿಧ ಲೇಖಕರ ಯಕ್ಷಗಾನ ಕುರಿತ 18 ಕೃತಿಗಳನ್ನು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಅಧ್ಯಕ್ಷ ಕೆ.ಜಯಪ್ರಕಾಶ್ ಹೆಗ್ಡೆ ಬಿಡುಗಡೆಗೊಳಿಸಿ ಮಾತನಾಡಿ, ಯಕ್ಷಗಾನ ಇಂದು ಗಂಡು ಕಲೆಯಾಗಿ ಉಳಿದಿಲ್ಲ. ಮಹಿಳೆಯರೂ ಈಗ ಸಮಪ್ರಮಾಣದಲ್ಲಿ ಇದರಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತಿದ್ದಾರೆ. ಕಾಲಮಿತಿ ಪ್ರಯೋಗದಿಂದ ಯಕ್ಷಗಾನದತ್ತ ಕಲಾಸಕ್ತರು ಮತ್ತೆ ಆಕರ್ಷಿತರಾಗುತಿದ್ದಾರೆ ಎಂದರು.
ಶಾಸಕ ಕೆ.ರಘುಪತಿ ಭಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಮಾರಂಭದಲ್ಲಿ ರಾಜ್ಯ ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನಿಲ್ ಕುಮಾರ್, ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ., ಜಿಪಂ ಸಿಇಓ ಪ್ರಸನ್ನ ಎಚ್., ಮೈಸೂರು ಇಲೆಕ್ಟ್ರಿಕಲ್ ಇಂಡಸ್ಟ್ರೀಸ್ ಪ್ರೈವೇಟ್ ಲಿಮಿಟೆಡ್ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ, ಉಡುಪಿ ನಗರ ಸಭೆಯ ಅಧ್ಯಕ್ಷೆ ಸುಮಿತ್ರಾ ಆರ್ ನಾಯಕ್, ಮಾಹೆ ಮಣಿಪಾಲದ ಸಹ ಕುಲಾಧಿಪತಿ ಡಾ.ಎಚ್. ಎಸ್ ಬಲ್ಲಾಳ್, ಉದ್ಯಮಿಗಳಾದ ಗುರ್ಮೆ ಸುರೇಶ್ ಶೆಟ್ಟಿ, ಪುರುಷೋತ್ತಮ್ ಶೆಟ್ಟಿ, ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸುರೇಂದ್ರ ಅಡಿಗ ನೀಲಾವರ, ಎಂಜಿಎಂ ಕಾಲೇಜು ಪ್ರಾಂಶುಪಾಲರಾದ ಪ್ರೊ.ಲಕ್ಷ್ಮೀನಾರಾಯಣ ಕಾರಂತ, ಕಟೀಲು ದೇವಳದ ಅರ್ಚಕ ವಾಸುದೇವ ಅಸ್ರಣ್ಣ, ಮಂದಾರ್ತಿ ದೇವಸ್ಥಾನದ ಆಡಳಿತ ಮೊಕ್ತೇಸರ ಎಚ್.ಧನಂಜಯ ಶೆಟ್ಟಿ, ಕೊಲ್ಲೂರು ದೇವಸ್ಥಾನದ ಆಡಳಿತ ಮೊಕ್ತೇಸರ ಕೆರಾಡಿ ಚಂದ್ರಶೇಖರ ಶೆಟ್ಟಿ, ಕುಂಭಾಶಿ ದೇವಸ್ಥಾನದ ಶ್ರೀರಮಣ ಉಪಾಧ್ಯ ಉಪಸ್ಥಿತರಿದ್ದರು.
ಸಮ್ಮೇಳನ ಸಮಿತಿಯ ಪ್ರಧಾನ ಸಂಚಾಲಕರಾದ ಪಳ್ಳಿ ಕಿಶನ್ ಹೆಗ್ಡೆ ಸ್ವಾಗತಿಸಿದರೆ, ಕಾರ್ಯಾಧ್ಯಕ್ಷರಾದ ಡಾ.ಜಿ.ಎಲ್.ಹೆಗಡೆ ಆಶಯ ಭಾಷಣ ಮಾಡಿದರು. ಯಕ್ಷಗಾನ ಅಕಾಡೆಮಿಯ ಮಾಜಿ ಅಧ್ಯಕ್ಷ ಪ್ರೊ.ಎಂ.ಎಲ್ ಸಾಮಗ ಸಮ್ಮೇಳನಾಧ್ಯಕ್ಷರನ್ನು ಸಭೆಗೆ ಪರಿಚಯಿಸಿದರು. ಕದ್ರಿ ನವನೀತ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.