ಬಜ್ಪೆ: ಕೇಂದ್ರ ಗೃಹ ಸಚಿವ ಅಮಿತ್ ಶಾ ರೋಡ್ ಶೋ

ಮಂಗಳೂರು: ಕೇಂದ್ರ ಗೃಹ ಸಚಿವ ಅಮಿತ್ ಶಾ ಶನಿವಾರ ಮುಸ್ಸಂಜೆ ಮಂಗಳೂರು ವಿಮಾನ ನಿಲ್ದಾಣದ ಹೊರಗೆ ರೋಡ್ ಶೋ ನಡೆಸಿ ಗಮನ ಸೆಳೆದರು.
ಪುತ್ತೂರಿನ ಕಾರ್ಯಕ್ರಮ ಮುಗಿಸಿದ ಬಳಿಕ ಅಮಿತ್ ಶಾ ಸಂಜೆ ಸುಮಾರು 6ಕ್ಕೆ ಹೆಲಿಕಾಫ್ಟರ್‌ನಲ್ಲಿ ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ಈ ಸಂದರ್ಭ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಮತ್ತಿತರರು ತೆರೆದ ಜೀಪಿನಲ್ಲಿ ಅಮಿತ್ ಶಾ ಜೊತೆಗೂಡಿ ವಿಮಾನ ನಿಲ್ದಾಣದ ನಿರ್ಗಮನ ದ್ವಾರದಿಂದ ಸುಮಾರು 200 ಮೀ.ದೂರದವರೆಗೆ ರೋಡ್ ಶೋ ನಡೆಸಿದರು.
ಬಳಿಕ ಕೆಂಜಾರಿನ ಶ್ರೀದೇವಿ ಕಾಲೇಜಿನಲ್ಲಿ ಬಿಜೆಪಿಯ ಮಂಗಳೂರು ಮತ್ತು ಶಿವಮೊಗ್ಗ ವಿಭಾಗೀಯ ಪ್ರಮುಖರ ಸಭೆ ನಡೆಸಿದರು. ಈ ಹಿಂದೆ ಅಮಿತ್ ಶಾ ಅವರ ರೋಡ್ ಶೋ ಕಾವೂರಿನಿಂದ ಪದವಿನಂಗಡಿವರೆಗೆ ನಿಗದಿಯಾಗಿತ್ತು. ಆದರೆ ಪದವಿನಂಗಡಿಯಲ್ಲಿ ಧಾರ್ಮಿಕ ಕಾರ್ಯಕ್ರಮವಿದ್ದುದರಿಂದ ಭದ್ರತೆಯ ಹಿನ್ನೆಲೆಯಲ್ಲಿ ರೋಡ್ ಶೋ ರದ್ದುಗೊಳಿಸಲಾಗಿತ್ತು.
Next Story









