ಸುಳ್ಯ: ಈಜಲು ಪಯಸ್ವಿನಿ ನದಿಗೆ ಇಳಿದಿದ್ದ ಪುತ್ತೂರಿನ ಇಬ್ಬರು ಯುವಕರು ನೀರುಪಾಲು

ಸುಳ್ಯ: ಈಜಲು ಪಯಸ್ವಿನಿ ನದಿಗೆ ಇಳಿದಿದ್ದ ಪುತ್ತೂರಿನ ಕೌಡಿಚ್ಚಾರಿನ ಯುವಕರಿಬ್ಬರು ನೀರು ಪಾಲಾದ ಘಟನೆ ಶನಿವಾರ ಸುಳ್ಯದ ದೊಡ್ಡೇರಿ ಸಮೀಪ ನಡೆದಿದೆ.
ಪುತ್ತೂರು ತಾಲೂಕಿನ ಕೌಡಿಚ್ಚಾರು ಸಮೀಪದ ಅರಿಯಡ್ಕದ ದೇರ್ಲ ನಾರಾಯಣ ಪಾಟಾಳಿ ಅವರ ಪುತ್ರ ಜಿತೇಶ್ (19) ಮತ್ತು ಪಡುವನ್ನೂರು ಗ್ರಾಮದ ಅಂಬಟೆಮೂಲೆಯ ಕೃಷ್ಣ ನಾಯ್ಕರ ಪುತ್ರ ಪ್ರವೀಣ್ (19) ಮೃತ ಯುವಕರು.
ಪುತ್ತೂರಿನ ಕೌಡಿಚ್ಚಾರ್ ಸುತ್ತಮುತ್ತಲ 6 ಮಂದಿ ಯುವಕರು ಜತೆಯಾಗಿ ಸುಳ್ಯದ ಪಯಸ್ವಿನಿ ನದಿಗೆ ಈಜಲು ಬಂದಿದ್ದರು. ಯುವಕರಲ್ಲಿ ಒಬ್ಬ ನೀರಿಗಿಳಿದಿದ್ದು, ನೀರಿಗಿಳಿದ ಸ್ಥಳ ಪ್ರಪಾತವಾಗಿದ್ದರಿಂದ ಆತ ನೀರಿನಲ್ಲಿ ಮುಳುಗುತ್ತಿದ್ದಂತೆ ಆತನನ್ನು ರಕ್ಷಿಸಲು ಹೋದ ಸ್ನೇಹಿತನೂ ನೀರು ಪಾಲಾಗಿದ್ದಾನೆ ಎಂದು ತಿಳಿದು ಬಂದಿದೆ.
ಸಂತೋಷ್ ಅಂಬಟೆಮೂಲೆ, ಸತ್ಯಾನಂದ ಚಂದುಕೂಡ್ಲು, ಯುವರಾಜ ಅಂಬಟೆಮೂಲೆ, ನಿತೀಶ್ ಬಳ್ಳಿ ಕಾನ, ಜಿತೇಶ್ ಮತ್ತು ಪ್ರವೀಣ್ ಎಂಬವರು ಜತೆಯಾಗಿ ಸುಳ್ಯಕ್ಕೆ ಬಂದಿದ್ದರು. ಸುಳ್ಯದ ಓಡಬಾಯಿ ಬಳಿಯ ತೂಗುಸೇತುವೆ ಸಮೀಪ ಕಾರನ್ನು ನಿಲ್ಲಿಸಿ ಸೇತುವೆಯಲ್ಲಿ ನಡೆದು ದೊಡ್ಡೇರಿಯ ಸಂಬಂಧಿಕರ ಮನೆಗೆ ಹೋಗಿ ಬಂದು ಬಳಿಕ ಪಯಸ್ವಿನಿ ನದಿಗೆ ಇಳಿದಿದ್ದರು ಎಂದು ತಿಳಿದು ಬಂದಿದೆ.
ಸ್ಥಳಕ್ಕೆ ಸುಳ್ಯ ಪೊಲೀಸರು ಭೇಟಿ ನೀಡಿ ಮಹಜರು ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.





