ಯಕ್ಷಗಾನ ಸಮ್ಮೇಳನ: ವಿರೋಧದ ನಡುವೆಯೂ ಗೋಷ್ಠಿ ಉದ್ಘಾಟಿಸಿದ ರೋಹಿತ್ ಚಕ್ರತೀರ್ಥ

ಉಡುಪಿ: ಹಿರಿಯ ಯಕ್ಷಗಾನ ಕಲಾವಿದರು, ಬಿಲ್ಲವ ಸಂಘಟನೆಗಳು ಹಾಗೂ ವಿವಿಧ ಪಕ್ಷಗಳ ವಿರೋಧದ ನಡುವೆಯೂ ರಾಜ್ಯಮಟ್ಟದ ಸಮಗ್ರ ಯಕ್ಷಗಾನ ಸಮ್ಮೇಳನದಲ್ಲಿ ಇಂದು ಭಾಗವಹಿಸಿದ ರೋಹಿತ್ ಚಕ್ರತೀರ್ಥ, ಕೆರೆಮನೆ ಶಿವರಾಯ ಹೆಗಡೆ ವೇದಿಕೆಯಲ್ಲಿ ಗೋಷ್ಠಿಗಳ ಉದ್ಘಾಟನೆ ನೆರವೇರಿಸಿ ದಿಕ್ಸೂಚಿ ಭಾಷಣ ಮಾಡಿದರು.
ಯಕ್ಷಗಾನ ಕಲೆಯನ್ನು ಒಡೆಯುವ ಹುನ್ನಾರ ವ್ಯವಸ್ಥಿತವಾಗಿ ನಡೆಯುತ್ತಿದೆ. ಯಕ್ಷಗಾನ ಬ್ರಾಹ್ಮಣರ ಕಲೆ ಎಂಬುದಾಗಿ ಕೆಲವರು, ಇನ್ನು ಕೆಲವರು ಇದು ಅಬ್ರಾಹ್ಮಣರ ಕಲೆ ಎಂದು ವಾದಿಸುತ್ತಿದ್ದಾರೆ. ಆದರೆ ಯಕ್ಷಗಾನವು ಜಾತಿ ಶ್ರೇಣಿಕೃತ ವ್ಯವಸ್ಥೆ ಹುಟ್ಟುವುದಕ್ಕಿಂತ ಮೊದಲೇ ಇದ್ದ ಕಲೆ. ಆದುದರಿಂದ ಇದರಲ್ಲಿ ಬ್ರಾಹ್ಮಣರು, ಅಬ್ರಾಹ್ಮಣರು ಎಂಬ ಚಿಂತನೆ ಮಾಡುವುದೇ ತಪ್ಪು. ಇದು ಯಾವುದೇ ಜಾತಿ, ಕುಲ, ಪಂಥಕ್ಕೆ ಸೇರದ ಶುದ್ಧವಾದ ಕಲೆ. ಇದನ್ನು ಅರ್ಥ ಮಾಡಿದರೆ ವಿಘಟಕ ಶಕ್ತಿಯನ್ನು ದೂರ ಇಡುವ ಎಚ್ಚರ ನಮ್ಮಲ್ಲಿ ಬರುತ್ತದೆ. ಇಲ್ಲದಿದ್ದರೆ ಯಕ್ಷಗಾನ ರಂಗದೊಳಗೆ ವಿಭಜನೆ ಆಗುವ ಸಾಧ್ಯತೆ ಇರುತ್ತದೆ ಎಂದು ರೋಹಿತ್ ಚಕ್ರತೀರ್ಥ ಹೇಳಿದರು.
ನಾಗರಿಕತೆ ಹುಟ್ಟುತ್ತಿರುವ ಸಮಯ, ಕಲೆ ರೂಪುಗೊಳ್ಳುತ್ತಿದ್ದ ಸಮಯದಲ್ಲಿ ಜನರಿಗೆ ಮನರಂಜನೆಯ ದಾರಿಯಾಗಿ ಬಂದಿರುವುದೇ ಯಕ್ಷಗಾನ ಕಲೆ. ಸಾಂಸ್ಕೃತಿಕ ನಾಗರಿಕತೆ, ಮಾನಸಿಕ ಸಂಸ್ಕಾರವನ್ನು ಮನುಷ್ಯ ಕಂಡುಕೊಳ್ಳುವ ಸಮಯದಲ್ಲಿ ಹುಟ್ಟಿದ ಕಲೆ ಇದು. ನಾಗರಿಕತೆಯ ಜೀವಂತ ಕಲೆ ಆಗಿರುವ ಯಕ್ಷಗಾನದಂತಹ ದೀರ್ಘಕಾಲಿಕ ಇತಿಹಾಸ ಬೇರೆ ಯಾವುದೇ ಕಲೆಗೂ ಇಲ್ಲ. ಈ ಕಲೆಯ ಬಗ್ಗೆ ಹೆಮ್ಮೆಯ ಜೊತೆಯ ಎಚ್ಚರ ಕೂಡ ಅಗತ್ಯ. ಆಗ ಮಾತ್ರ ಈ ಕಲೆಯನ್ನು ಬದಲಾಯಿಸುವಾಗ ನಾವು ಎಚ್ಚರದ ಹೆಜ್ಜೆ ಇಡಲು ಸಾಧ್ಯವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ಯಕ್ಷಗಾನ ಪ್ರಸಂಗಗಳನ್ನು ಬರೆಯಲು ಪುರಾಣಗಳು ಬೇಕಾಗಿಲ್ಲ ಎಂಬ ವಿಚಾರವನ್ನು ಕೆಲವರು ಹೇಳುತ್ತಿದ್ದಾರೆ. ಆದರೆ ಭಾರತೀಯ ಸಂಸ್ಕೃತಿಯ ಮೂವರು ಮಕ್ಕಳು ಅಂದರೆ ವೇದ, ಮಹಾಕಾವ್ಯಗಳು ಹಾಗೂ ಪುರಾಣಗಳು. ಸೋಕಾಲ್ಡ್ ಬುದ್ದಿಜೀವಿಗಳಿಗೆ ವೇದ, ಮಹಾಕಾವ್ಯಗಳನ್ನು ವಿರೋಧಿಸಲು ಆಗದೆ ಈಗ ಪುರಾಣಗಳ ವಿರುದ್ಧ ವ್ಯವಸ್ಥಿತ ಹುನ್ನಾರ ನಡೆಸುತ್ತಿದ್ದಾರೆ. ಈ ದೇಶದಲ್ಲಿ ಪುರಾಣವನ್ನು ಜನರಿಗೆ ತಲುಪಿಸಿದ ಮಾಧ್ಯಮ ಯಕ್ಷಗಾನ. ಹಾಗಾಗಿ ಪುರಾಣಗಳ ಮೌಲ್ಯ ಬದುಕಿನಲ್ಲಿ ಅಳವಡಿಸಿಕೊಳ್ಳಲು ಯಕ್ಷಗಾನ ಉಳಿಯಬೇಕಾಗಿದೆ ಎಂದು ರೋಹಿತ್ ಚಕ್ರತೀರ್ಥ ತಿಳಿಸಿದರು.
ಈ ಸಂದರ್ಭದಲ್ಲಿ ಸಮ್ಮೇಳನಾಧ್ಯಕ್ಷ ಡಾ.ಪ್ರಭಾಕರ ಜೋಷಿ, ಕಾರ್ಯಾಧ್ಯಕ್ಷ ಡಾ.ಜಿ.ಎಲ್.ಹೆಗಡೆ ಉಪಸ್ಥಿತರಿದ್ದರು. ನಾರಾಯಣ ಹೆಗಡೆ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.







