ಗುಜರಾತ್ ಜನರು ಅಡಿಕೆ ತಿಂದರೆ, ದಕ್ಷಿಣ ಕನ್ನಡದ ಜನರು ಅಡಿಕೆ ಬೆಳೆಯುತ್ತಾರೆ: ಅಮಿತ್ ಶಾ

ಪುತ್ತೂರು: 'ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಡಿಕೆ, ತೆಂಗು, ರಬ್ಬರ್, ಭತ್ತ ಸೇರಿದಂತೆ ಹಲವು ಬೆಳೆಗಳನ್ನು ಬೆಳೆಯಲಾಗುತ್ತದೆ. ನಾವು ಗುಜರಾತಿ ಜನರು ಅಡಿಕೆ ತಿನ್ನುವಾಗ ಯಾವಾಗಲೂ ಮಂಗಳೂರಿನ ಜನರನ್ನು ನೆನೆಪಿಸಿಕೊಳ್ಳುತ್ತೇವೆ. ಗುಜರಾತ್ ಜನರು ಅಡಿಕೆ ತಿಂದರೆ, ದಕ್ಷಿಣ ಕನ್ನಡದ ಜನರು ಅಡಿಕೆ ಬೆಳೆಯುತ್ತಾರೆ' ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಅವರು ಇಂದು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ತೆಂಕಿಲದಲ್ಲಿರುವ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಆವರಣದಲ್ಲಿ ಕ್ಯಾಂಪ್ಕೋದ ಸುವರ್ಣ ಮಹೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
'ಪರಶುರಾಮ ಸೃಷ್ಟಿಯ ನಾಡು ಎಂದೇ ವಿಶ್ವದಲ್ಲಿ ಪ್ರಸಿದ್ಧಿಯಾದ ಸ್ಥಳವಿದು. ರಾಣಿ ಅಬ್ಬಕ್ಕ, ಮಂಗಳಾದೇವಿ, ಕದ್ರಿ ಮಂಜುನಾಥ, ಮಹಾಲಿಂಗೇಶ್ವರ ದೇವರಿಗೆ ನನ್ನ ಪ್ರಣಾಮಗಳು. ಧಾರ್ಮಿಕ, ಸಾಂಸ್ಕೃತಿಕ ಪರಂಪರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಾಸುಹೊಕ್ಕಿದೆ' ಎಂದು ಹೇಳಿದರು.
ಕ್ಯಾಂಪ್ಕೊ ಅಡಿಕೆ ಬೆಳೆಗಾರರ ಸಂಕಷ್ಟದ ಕಾಲದಲ್ಲಿ ಅವರಿಗೆ ಸಹಾಯ ಮಾಡಿದ ಸಂಸ್ಥೆ, ರಬ್ಬರ್, ಕೋಕೊ ಬೆಳೆಗಾರರು ಮತ್ತು ಈಗ ತೆಂಗಿನ ಬೆಳೆಗಾರರಿಗೆ ನೆರವು ನೀಡಲು ಹೊರಟಿದೆ. ಸಂಸ್ಥೆ 50ನೆ ವರ್ಷಾಚರಣೆ ಮಾಡುತ್ತಿರುವುದೇ ಅದರ ಪ್ರಾಮಾಣಿಕ ಸೇವೆಗೆ ನೀಡಿದ ಪ್ರಮಾಣ ಪತ್ರ. 3000 ಕೋಟಿ ರೂಪಾಯಿಗಳ ಆರ್ಥಿಕ ವ್ಯವಹಾರ ಮಾಡುವ ಕ್ಯಾಂಪ್ಕೊ ಒಂದೇ ಸೂರಿನಡಿ ಕೃಷಿ ಉಪಕರಣಗಳು, ಕೀಟ ನಾಶಕ, ರಸಗೊಬ್ಬರ ಸೇರಿದಂತೆ ಕೃಷಿ ಸಲಕರಣೆಗಳ, ಉತ್ಪನ್ನಗಳ ಮಾಲ್ ಆರಂಭಿಸುವ ಯೋಜನೆ, ತೆಂಗಿನಕಾಯಿ ಉತ್ಪನ್ನ ಕಲ್ಪ, ಭದ್ರಾವತಿಯಲ್ಲಿ ಗೋದಾಮು ರಚನೆ, ಸೋಲಾರ್ ಅಳವಡಿಕೆ, ಗಾಳಿಯಂತ್ರದ ಬಳಕೆಯ ಮಾದರಿ ಸಹಕಾರಿ ಸಂಸ್ಥೆ ವಾರಣಾಸಿ ಸುಬ್ರಾಯ ಭಟ್ ರವರ ಮೂಲಕ ಬೆಳೆದು ಬಂದಿರುವುದಕ್ಕಾಗಿ ತಾನು ಅಭಿನಂದಿಸುವುದಾಗಿ ತಿಳಿಸಿದರು.
ಕಾಂಗ್ರೆಸ್-ಜೆಡಿಎಸ್ ವಿರುದ್ಧ ಅಮಿತ್ ಶಾ ವಾಗ್ದಾಳಿ: ಕರ್ನಾಟಕದ ಸುರಕ್ಷತೆಗಾಗಿ ಮುಂದಿನ ಚುನಾವಣೆಯಲ್ಲಿ ಮೋದಿಯನ್ನು, ಬೊಮ್ಮಾಯಿಯವರನ್ನು ಮತ್ತು ಬಿಜೆಪಿಯನ್ನು ಬೆಂಬಲಿಬೇಕು ಎಂದು ಅಮಿತ್ ಶಾ ಮನವಿ ಮಾಡಿದರು.
ಟಿಪ್ಪುವನ್ನು ಬೆಂಬಲಿಸುವ ಕಾಂಗ್ರೆಸ್-ಜೆಡಿಎಸ್ ಗೆ ಮತ ನೀಡುತ್ತಿರಾ ಅಥವಾ ಅಬ್ಬಕ್ಕನನ್ನು ಗೌರವಿಸುವ ಬಿಜೆಪಿಗೆ ಮತ ನೀಡುತ್ತೀರಾ ಎಂದು ಅಮಿತ್ ಶಾ ಪ್ರಶ್ನಿಸಿದರು.