ದೇಶದಲ್ಲೀಗ ವಾಕ್ ಸ್ವಾತಂತ್ರ್ಯವಿಲ್ಲ: ಮಲ್ಲಿಕಾರ್ಜುನ ಖರ್ಗೆ

ರಾಂಚಿ,ಫೆ.11: ಬಿಜೆಪಿ ನೇತೃತ್ವದ ಕೇಂದ್ರ ಸರಕಾರದ ವಿರುದ್ಧ ಶನಿವಾರ ತೀವ್ರ ವಾಗ್ದಾಳಿ ನಡೆಸಿದ ಕಾಂಗ್ರೆಸ್ ಮಲ್ಲಿಕಾರ್ಜುನ ಖರ್ಗೆ(Mallikarjun Kharge) ಅವರು ದೇಶದಲ್ಲಿ ಈಗ ವಾಕ್‌ಸ್ವಾತಂತ್ರ್ಯವಿಲ್ಲವೆಂದು ಆಪಾದಿಸಿದ್ದಾರೆ.
ಜಾರ್ಖಂಡ್‌ನ ಸಾಹೇಬ್‌ಗಂಜ್ ಜಿಲ್ಲೆಯಲ್ಲಿ ನಡೆದ ಕಾಂಗ್ರೆಸ್ ಪಕ್ಷದ ರ್ಯಾಲಿಯಲ್ಲಿ ಮಾತನಾಡಿದ ಅವರು, ಸಂಸತ್‌ನಲ್ಲಿ ತಾನು ಮಾಡಿದ ಭಾಷಣದ ಕೆಲವು ಭಾಗಗಳನ್ನು ಕಡತದಿಂದ ತೆಗೆದುಹಾಕಲಾಗಿದೆಯೆಂದು ಆಕ್ರೋಶ ವ್ಯಕ್ತಪಡಿಸಿದರು. ಸಂಸತ್‌ನೊಳಗಾಗಲಿ ಅಥವಾ ಹೊರಗಾಗಲಿ ಈಗ ವಾಕ್‌ಸ್ವಾತಂತ್ರವಿಲ್ಲ’’ ಎಂದವರು ಹೇಳಿದ್ದಾರೆ.
ಒಂದು ವೇಳೆ ಯಾರಾದರೂ ಸತ್ಯ ಹೇಳಿದಲ್ಲಿ, ಇಲ್ಲವೇ ಬರೆದಲ್ಲಿ, ಆನಂತರ ಅವರನ್ನು ಬಿಜೆಪಿ(BJP) ಯು ಜೈಲಿಗೆ ಕಳುಹಿಸುತ್ತದೆಯೆಂದವರು ಹೇಳಿದ್ದಾರೆ.
ಪಾಕೂರ್ ನಗರದ ಗುಮಾನಿ ಮೈದಾನದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಪಕ್ಷದ 60 ದಿನಗಳ ‘ಹಾತ್ ಸೆ ಹಾತ್ ಜೋಡೋ’ ಜನಸಂಪರ್ಕ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.
‘‘ಪ್ರಧಾನಿಯವರನ್ನು ಬಣ್ಣಿಸಲು ನಾನು ಯಾವುದೇ ಅಸಂವಿಧಾನಿಕ ಪದ ಅಥವಾ ಭಾಷೆಯನ್ನು ಬಳಸಿಲ್ಲ. ಅಟಲ್ ಬಿಹಾರಿ ವಾಜಪೇಯಿ(Atal Bihari Vajpayee)ಯವರು ಮಾಜಿ ಪ್ರಧಾನಿ ಪಿ.ವಿ.ನರಸಿಂಹ ರಾವ್ ಹಾಗೂ ಪಿ.ವಿ.ನರಸಿಂಹರಾವ್ ಅವರಿಗೆ ಹಾಗೂ ಬಿಜೆಪಿ ಸಂಸದರು ಮಾಜಿ ಪ್ರಧಾನಿ ಮನಮೋಹನ್‌ಸಿಂಗ್(Manmohan Singh) ಅವರಿಗೆ ಬಳಸಿದ್ದಂತಹ ಅಭಿವ್ಯಕ್ತಿಯನ್ನೇ ನಾನು ಕೂಡಾ ಬಳಸಿದ್ದೆ’’ ಎಂದು ಖರ್ಗೆ ಹೇಳಿದರು.
ಆದಾನಿ ವಿವಾದಕ್ಕೆ ಸಂಬಂಧಿಸಿ ಕಾಂಗ್ರೆಸ್ ಅಧ್ಯಕ್ಷರು ತನ್ನ ಭಾಷಣದಲ್ಲಿ ಬಿಜೆಪಿಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ‘‘ ಪ್ರಧಾನಿ ನರೇಂದ್ರ ಮೋದಿಯವರ ಸ್ನೇಹಿತನಾದ ಅದಾನಿ(Adani) ಅವರ ಆವರ ಸಂಪತ್ತು 2019ರಲ್ಲಿ 1 ಲಕ್ಷ ಕೋಟಿ ರೂ. ಆಗಿತ್ತು. ಈಗ ಅವರು 13 ಲಕ್ಷ ಕೋಟಿ ರೂ. ಸಂಪತ್ತಿಗೆ ಒಡೆಯರಾಗಿದ್ದಾರೆ ಎಂದರು.
ಪ್ರಧಾನಿಯವರು ಆದಾನಿಗಾಗಿ ಕೆಲಸ ಮಾಡುತ್ತಿದ್ದಾರೆಯೇ ಹೊರತು ಬಡವರಿಗಾಗಿ ಅಲ್ಲವೆಂದು ಖರ್ಗೆ ಆರೋಪಿಸಿದರು. ಆದಾನಿ ಗ್ರೂಪ್‌ಗೆ ಎಲ್‌ಐಸಿಯು 16 ಸಾವಿರ ಕೋಟಿ ರೂ. ಹಾಗೂ ಭಾರತೀಯ ಸ್ಟೇಟ್ ಬ್ಯಾಂಕ್ 82 ಸಾವಿರ ಕೋಟಿ ರೂ. ನೀಡಿದೆ ಎಂದವರು ಹೇಳಿದರು.
ಈ ವಿಷಯವನ್ನು ರಾಹುಲ್ ಅವರು ಸದನದಲ್ಲಿ ಪ್ರಸ್ತಾವಿಸಿದಾಗ, ಅದನ್ನು ಕೂಡಾ ಕಡತದಿಂದ ತೆಗೆದುಹಾಕಲಾಯಿತು ಎಂದು ಖರ್ಗೆ ಹೇಳಿದರು.
ಇ.ಡಿ. ಐಟಿ, ಸಿಬಿಐ ಪ್ರಕರಣಗಳನ್ನು ಎದುರಿಸುತ್ತಿರುವ ಹಲವು ಶಾಸಕರನ್ನು ಬಿದೆಪಿ ತನ್ನೆಡೆಗೆ ಸೆಳೆದುಕೊಂಡಿದೆ ಎಂದವರು ಹೇಳಿದರು. ‘‘ ಮೋದಿ ಹಾಗೂ ಶಾ ಅವರು ವಾಶಿಂಗ್‌ಮೆಶಿನ್ ಒಂದನ್ನು ಖರೀದಿಸಿದ್ದು, ಆ ಯಂತ್ರದಲ್ಲಿ ಕಳಂಕಿತ ಶಾಸಕರನ್ನು ಅವರು ತೊಳೆದುಹಾಕುತ್ತಾರೆ. ಆ ಮೂಲಕ ಈ ಶಾಸಕರು ಸ್ವಚ್ಛವಾಗಿ ಹೊರಬರುತ್ತಾರೆ’’ ಎಂದವರು ಅಣಕವಾಡಿದರು.
ಚುನಾಯಿತ ಸರಕಾರಗಳನ್ನು ಪತನಗೊಳಿಸುವಲ್ಲಿ ನಿಪುಣರಾಗಿರುವ ಮೋದಿ ಹಾಗೂ ಅಮಿತ್ ಶಾ ಅವರು ಪ್ರಜಾಪ್ರಭುತ್ವದ ಬಗ್ಗೆ ಮಾತನಾಡುವುದು ವಿಪರ್ಯಾಸ ಎಂದು ಖರ್ಗೆ ಲೇವಡಿ ಮಾಡಿದರು.
ದೇಶದ ಸ್ವಾತಂತ್ರಕ್ಕೆ ಹೋರಾಟ ನಡೆಸಿರುವುದು ಹಾಗೂ ದೇಶದ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಪಡಿಸಿರುವುದು ಕಾಂಗ್ರೆಸ್ ಸರಕಾರವಾಗಿದೆ ಎಂದರು.
‘ಹಾಥ್ ಸೆ ಹಾತ್ ಜೋಡೋ’ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮನೆಮನೆಗೆ ತೆರಳಿ ಕೇಂದ್ರ ಸರಕಾರದ ‘ಜನ ವಿರೋಧಿ’ ಕಾರ್ಯಕ್ರಮಗಳ ವಿರುದ್ಧ ಜಾಗೃತಿ ಮೂಡಿಸಲಿದ್ದಾರೆಂದು ಪಕ್ಷದ ಮೂಲಗಳು ತಿಳಿಸಿವೆ.







