ಬೆಂಗಳೂರಿನಲ್ಲಿ ಏರ್ ಶೋ-2023 | ಲೋಹ ಹಕ್ಕಿಗಳ ಅಂತಿಮ ಹಂತದ ತಾಲೀಮು, ಫೆ.13ರಂದು ಪ್ರಧಾನಿ ಉದ್ಘಾಟನೆ

ಬೆಂಗಳೂರು, ಫೆ. 11: ಹದಿನಾಲ್ಕನೆಯ ಆವೃತ್ತಿಯ ಏಷ್ಯಾದ ಅತಿದೊಡ್ಡ ವೈಮಾನಿಕ ಪ್ರದರ್ಶನ ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ಫೆ.13ರಿಂದ ಆರಂಭವಾಗಲಿದ್ದು, ಲೋಹ ಹಕ್ಕಿಗಳ ಅಂತಿಮ ಹಂತದ ಅಭ್ಯಾಸ ನೋಡುಗರ ಗಮನ ಸೆಳೆಯಿತು.
ಶನಿವಾರ ಯಲಹಂಕ ಏರೋ ಇಂಡಿಯಾ ವೈಮಾನಿಕ ಪ್ರದರ್ಶನಕ್ಕೆ ಪೂರ್ವಭಾವಿಯಾಗಿ ಯುದ್ಧ ವಿಮಾನಗಳು, ಹೆಲಿಕಾಪ್ಟರ್‍ಗಳು ನೀಲಾಕಾಶದಲ್ಲಿ ಪೂರ್ಣ ರೀತಿಯ ಪೂರ್ವಾಭ್ಯಾಸ ನಡೆಸಿದ ದೃಶ್ಯ ಸಾಮಾನ್ಯವಾಗಿತ್ತು. ಈ ವೇಳೆ ವಾಯುಪಡೆ, ನೌಕಾಪಡೆ, ಸೇನಾಪಡೆ ಹಾಗೂ ಮಾಧ್ಯಮ ಹಾಗೂ ಅವರ ಕುಟುಂಬದವರಿಗೆ ವೈಮಾನಿಕ ಕಸರತ್ತು ವೀಕ್ಷಿಸಲು ಅನುವು ಮಾಡಿಕೊಡಲಾಗಿತ್ತು.
ಬೆಳಗ್ಗೆ 9:30ರಿಂದಲೇ ಪೂರ್ಣರೂಪದ ಪೂರ್ವಸಿದ್ಧತಾ ವೈಮಾನಿಕ ಪ್ರದರ್ಶನ ಆರಂಭವಾಗಿ 12 ಗಂಟೆಯ ವರೆಗೆ ನಡೆಯಿತು. ‘ಆತ್ಮ ನಿರ್ಭರ್ ಭಾರತ್’ ಪರಿಕಲ್ಪನೆಯಲ್ಲಿ ಎಚ್‍ಎಎಲ್ ನಿರ್ಮಿತ 15 ಹೆಲಿಕಾಪ್ಟರ್ ಯಲಹಂಕ ವಾಯುನೆಲೆಯಲ್ಲಿ ನಡೆಸಿದ ವ್ಯವಸ್ಥಿತ ಹಾರಾಟ ವಿಶೇಷವಾಗಿತ್ತು.
ಹೆಲಿಕಾಪ್ಟರ್ ಪ್ರದರ್ಶನ: ತಲಾ 6 ಸುಧಾರಿತ ಹಗುರ ಹೆಲಿಕಾಪ್ಟರ್, ಹಗುರ ಉಪಯೋಗಿ ಹೆಲಿಕಾಪ್ಟರ್ ಹಾಗೂ ಮೂರು ಹಗುರ ಯುದ್ಧ ಹೆಲಿಕಾಪ್ಟರ್ ಬಾನಲ್ಲಿ ತಮ್ಮ ವೈಮಾನಿಕ ಕಸರತ್ತು ಪ್ರದರ್ಶಿಸಿದವು. ಅದೇ ರೀತಿ, ಅಮೆರಿಕ ನಿರ್ಮಿತ ಗ್ಲೋಬ್ ಮಾಸ್ಟರ್ ದೇಶೀಯ ರಕ್ಷಣಾಪಡೆಗೆ ಸೇರ್ಪಡೆಯಾಗಿದ್ದು, ಸೂರ್ಯ ಕಿರಣ್ ಜೊತೆ ರಾಜ ಗಾಂಭೀರ್ಯದಲ್ಲಿ ಹಾರಾಟ ನಡೆಸಿತು.
ತೇಜಸ್: ಈ ಬಾರಿಯೂ ತೇಜಸ್ ಯುದ್ಧ ವಿಮಾನ ಶಬ್ದಾತೀತವಾಗಿ ಮೇಲ್ಮುಖ, ಕೆಳಮುಖವಾಗಿ ವೇಗವಾಗಿ ಸಾಗುತ್ತಿದ್ದರೆ, ವೈಮಾನಿಕ ಪ್ರದರ್ಶನ ಸ್ಥಳದಲ್ಲಿದ್ದು ಅಗಸದತ್ತ ನೋಟ ಹರಿಸಿದವರು ತುದಿಗಾಲಲ್ಲಿ ನಿಲ್ಲುವಂತೆ ಮಾಡಿತ್ತು. ಸುಧಾರಿತ ಯುದ್ಧ ವಿಮಾನಕ್ಕೆ ಸಮರ್ಥ ಪೈಲೆಟ್ ಗಳನ್ನು ತಯಾರು ಮಾಡಲು ತರಬೇತಿ ನೀಡುವ ರಫಲ್ ಯುದ್ಧ ವಿಮಾನ ಪ್ರದರ್ಶನದ ಆರಂಭದಲ್ಲಿ ಹಾಗೂ ಅಂತ್ಯದಲ್ಲಿ ಹಾರಿತು.
ಇನ್ನೂ, ಏರ್ ಶೊನಲ್ಲಿ 74 ವರ್ಷಗಳ ಹಿಂದಿನ ಡಕೋಟಾ ಡಿಸಿ-3 ಯುದ್ಧ ವಿಮಾನ ಪೂರ್ವಸಿದ್ಧತಾ ಹಾರಾಟ ನಡೆಸಿದಾಗ, ದೇಶದ ಅತ್ಯಂತ ಹಳೆಯ ವಿಮಾನವನ್ನು ಕಂಡು ನೋಡುಗರು ಪುಳಕಿತರಾದರು. 1947ರಿಂದ 1971ರ ವರೆಗೆ ನಾಲ್ಕು ದಶಕಗಳ ಕಾಲ ಭಾರತ ಮಾತೆಗೆ ಸೇವೆ ಸಲ್ಲಿಸಿದ್ದ ಡಕೋಟಾ ಡಿ.ಸಿ.3 ಯುದ್ಧ ವಿಮಾನ ಹಾರಾಟಕ್ಕೆ ಅಸಮರ್ಥವಾಗಿ ಗುಜರಿಗೆ ಸೇರಿತ್ತು. ಈ ವಿಮಾನ ಬ್ರಿಟನ್‍ನಲ್ಲಿರುವುದನ್ನು ಅರಿತು ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಅವರು 2011ರಿಂದ ಏಳು ವರ್ಷಗಳ ಕಾಲ ಅಲ್ಲೆ ಅದನ್ನು ದುರಸ್ತಿ ಮಾಡಿಸಿದರು.
ನಂತರ ಬ್ರಿಟನ್‍ನಿಂದ ಒಂಬತ್ತು ದಿನಗಳ ಕಾಲ ಹಾರಾಟ ಮಾಡಿ ಕಳೆದ ವರ್ಷ ಭಾರತದ ನೆಲಕ್ಕೆ ಮುತ್ತಿಟ್ಟಈ ವಿಮಾನವನ್ನು ರಾಜೀವ್ ಚಂದ್ರಶೇಖರ್ ಅವರು 2018ರ ಫೆಬ್ರವರಿಯಲ್ಲಿ ಭಾರತೀಯ ವಾಯುಸೇನೆಗೆ (ಐಎಎಫ್) ಕಾಣಿಕೆಯಾಗಿ ಹಸ್ತಾಂತರಿಸಿದರು.
ಮಕ್ಕಳು ಭಾಗಿ: ಮೊದಲ ಬಾರಿ ನೇರವಾಗಿ ಕಂಡ ದೇವನಹಳ್ಳಿ ಕುಂದಾಣ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಮಕ್ಕಳು ಬಹಳ ಖುಷಿಪಟ್ಟರು. ಈ ಪೂರ್ವಸಿದ್ಧತಾ ವೈಮಾನಿಕ ಪ್ರದರ್ಶನದಲ್ಲಿ ಸರಕಾರಿ ಶಾಲಾ ಮಕ್ಕಳು ಪಾಲ್ಗೊಳ್ಳಲು ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಕ್ಯಾಪ್ಟನ್ ಪಿ.ಮಣಿವಣ್ಣನ್ ವಿಶೇಷ ಮುತುವರ್ಜಿ ವಹಿಸಿ ಸರ್ಕಾರಿ ಶಾಲಾ ಮಕ್ಕಳು ಈ ಮಹತ್ವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ವ್ಯವಸ್ಥೆ ಕಲ್ಪಿಸಿದ್ದರು.
ಸಂಚಾರ ದಟ್ಟಣೆ, ಸಾಲು ಸಾಲು ವಾಹನಗಳು..!: ಏರ್ ಶೋ ಹಿನ್ನಲೆಯಲ್ಲಿ ವಾಯುನೆಲೆಯ ಮುಖ್ಯ ಪ್ರವೇಶದ್ವಾರ ಬಳಿ ರಕ್ಷಣಾ ಪಡೆಯ ವಾಹನಗಳು ಓಡಾಡಲು ಪ್ರತ್ಯೇಕ ಬ್ಯಾರಿಕೇಡ್ ಅಳವಡಿಸಿದ ಕಾರಣ ಬೆಳಗ್ಗೆಯಿಂದಲೇ ಈ ಭಾಗದಲ್ಲಿ ಸಂಚಾರ ದಟ್ಟಣೆ ಸಮಸ್ಯೆ ಕಂಡುಬಂದಿತು.ಹೆಬ್ಬಾಳದಿಂದ ಯಲಹಂಕ ವಾಯುನೆಲೆ ದಾಟಿದರೂ ಎರಡೂ ಬದಿಯಲ್ಲೂ ವಾಹನ ದಟ್ಟಣೆ ಕಂಡಿತು.
ಜನ ದಟ್ಟಣೆ..!: ಬೆಳಗ್ಗೆಯಿಂದಲೇ ಬಿಸಿಲ ಝಳವಿದ್ದರೂ ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿದ್ದ ಲೋಹದಹಕ್ಕಿಗಳ ಪ್ರೇಮಿಗಳು, ಆಕಾಶದತ್ತ ನೋಟ ಹರಿಸಿ ಕ್ಷಣ ಕ್ಷಣಕ್ಕೂ ತರಹೇವಾರಿ ಹೆಲಿಕಾಪ್ಟರ್ ಹಾಗೂ ವಿಮಾನಗಳ ಪ್ರದರ್ಶನವನ್ನು ನೋಡುತ್ತಾ ತಮ್ಮನ್ನೇ ತಾವು ಮರೆತಿದ್ದರು. ಹಲವರು ತಮ್ಮ ಮೊಬೈಲ್‍ನಲ್ಲಿ ವೈಮಾನಿಕ ಪ್ರದರ್ಶನವನ್ನು ಸೆರೆಹಿಡಿದಿದ್ದರು.
ಬಿಎಂಟಿಸಿ ಸೇವೆ..!: ಯಲಹಂಕ ವಾಯುನೆಲೆಯಲ್ಲಿ ನಡೆಯಲಿರುವ ಏರ್ ಶೋಗೆ ಬಿಎಂಟಿಸಿಯಿಂದ ಹೆಚ್ಚುವರಿ ವಿಶೇಷ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ. ಫೆ.13 ರಿಂದ 17 ರವರೆಗೆ ಏರ್ ಶೋ ನಡೆಯಲಿದೆ. ಏರ್ ಶೋ ವೀಕ್ಷಿಸಲು ಹೆಚ್ಚಿನ ಜನದಟ್ಟಣೆ ಆಗಮಿಸುವುದರಿಂದ 10 ಹೆಚ್ಚುವರಿ ಬಸ್ ಬಿಡಲು ಬಿಎಂಟಿಸಿ ಮುಂದಾಗಿದೆ.
ಪ್ರಧಾನಿ ಉದ್ಘಾಟನೆ: ಫೆ.13 ರಿಂದ ಆರಂಭವಾಗಲಿರುವ ದೇಶ ವಿದೇಶಗಳ ಲೋಹದ ಹಕ್ಕಿಗಳ ವೈಮಾನಿಕ ನರ್ತನಕ್ಕೆ ಪ್ರಧಾನಿ ಮೋದಿ ಸಾಕ್ಷಿಯಾಗಲಿದ್ದಾರೆ. ಪ್ರಧಾನಿ ಮೋದಿ ಅವರು ಯಲಹಂಕದ ವಾಯುನೆಲೆಯಲ್ಲಿ ಏರೋ ಇಂಡಿಯಾ 2023ರ 14ನೆ ಆವೃತ್ತಿಯನ್ನು ಉದ್ಘಾಟಿಸಲಿದ್ದು, ಬಿಗಿಭದ್ರತೆ ಒದಗಿಸಲಾಗಿದೆ.






.jpg)
.jpg)
.jpg)
.jpg)
.jpg)
.jpg)
.jpg)

