ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ನ್ಯಾಯ ಸಿಗಲು ಜಾತಿ ವ್ಯವಸ್ಥೆಯಿಂದ ಹೊರ ಬರಬೇಕು: ಸ್ಟ್ಯಾನ್ಲಿ ಕರೆ

ಬೆಂಗಳೂರು, ಫೆ.11: ನಾವೆಲ್ಲರೂ ಧರ್ಮ, ಜಾತಿ ವ್ಯವಸ್ಥೆಯ ಆಲೋಚನೆಗಳಿಂದ ಹೊರಬರುವುದಿಲ್ಲವೋ, ಅಲ್ಲಿಯ ವರೆಗೆ ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ನ್ಯಾಯ ಸಿಗುವುದೂ ಇಲ್ಲ ಎಂದು ಒಡನಾಡಿ ಸಂಸ್ಥೆ ಸಂಸ್ಥಾಪಕ ಸ್ಟ್ಯಾನ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶನಿವಾರ ನಗರದ ಸೇಂಟ್ ಜೋಸೆಫ್ ಕಾಲೇಜಿನಲ್ಲಿ ನಡೆದ ‘ಅತ್ಯಾಚಾರದ ರಾಜಕೀಯ: ನ್ಯಾಯ, ಹೊಣೆಗಾರಿಗೆ ಹಾಗೂ ಪುನಃಶ್ಚೇತನ’ ಸಂವಾದದಲ್ಲಿ ಮಾತನಾಡಿದ ಅವರು, ದೇಶದಲ್ಲಿ ಧರ್ಮ, ರಾಜಕೀಯ ಹಾಗೂ ಆರ್ಥಿಕತೆ ಈ ಮೂರು ತ್ರಿವಳಿ ಸಹೋದರರಂತೆ ಬಿಂಬಿಸಲಾಗುತ್ತಿದೆ. ಈ ಮೂರರಲ್ಲಿ ಒಬ್ಬರನ್ನು ಕಾಪಾಡಲು ಇನ್ನಿಬ್ಬರು ನಿಕಟ ಬೆಂಬಲ ನೀಡುತ್ತಿದ್ದಾರೆ. ದೇಶದ ಜನರು ಇದರ ಕುರಿತು ಪರಿಪೂರ್ಣ ಪ್ರಜ್ಞೆಯನ್ನು ಹೊಂದಿರಬೇಕು ಎಂದರು.
200ಕ್ಕೂ ಹೆಚ್ಚು ಮಕ್ಕಳು ಚಿತ್ರದುರ್ಗದ ಮುರುಘಾಶ್ರೀಯ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದಾರೆ. ಹೀಗೆ ದೌರ್ಜನ್ಯಕ್ಕೆ ಒಳಗಾದವರಲ್ಲಿ ಎಷ್ಟೋ ಮಂದಿ ಮಕ್ಕಳು ಗರ್ಭಚೀಲ ಕಳೆದುಕೊಂಡಿದ್ದಾರೆ ಎಂದ ಅವರು, ದೇಶದಲ್ಲಿ ಬಿಲ್ಕಿಸ್ ಬಾನೂ, ಮುರುಘಾಶ್ರಿ ಪ್ರಕರಣಗಳು ಕೇವಲ ಕ್ಯಾನ್ಸರ್ ಗಡ್ಡೆಯ ಲಕ್ಷಣಗಳಂತೆ ಉಳಿದುಕೊಂಡಿವೆ. ಆದರೆ ಇಂತಹ ಹಲವಾರು ಪ್ರಕರಣಗಳು ಬಹುಬೇಗ ಕಣ್ಮರೆಯಾಗುತ್ತವೆ ಎಂದು ತಿಳಿಸಿದರು.
ಸುಪ್ರೀಂ ಕೋರ್ಟ್ ನ್ಯಾಯವಾದಿ ಬೃಂದಾ ಗ್ರೋವರ್ ಮಾತನಾಡಿ, ಬಾಲ್ಯ ವಿವಾಹಗಳ ಸಂಖ್ಯೆ ಇಂದು ಕಡಿಮೆಯಾಗಿದ್ದರೆ, ಅದಕ್ಕೆ ಕಾರಣ ಸಂಘಟನೆಗಳು ಸಮಾಜದಲ್ಲಿ ಮೂಡಿಸಿರುವ ಜಾಗೃತಿ, ಹೆಣ್ಣುಮಕ್ಕಳಿಗೆ ಸಿಕ್ಕಿರುವ ಶಿಕ್ಷಣ, ಹೋರಾಟಗಳು ಮತ್ತು ಜೀವನೋಪಾಯದ ಅವಕಾಶಗಳು ಹೊರತು, ನ್ಯಾಯಾಲಯ ಅಥವಾ ಕಾನೂನು ಅಲ್ಲ ಎಂದು ತಿಳಿಸಿದರು.
ಅತ್ಯಾಚಾರಿ ಒಂದು ಸಮುದಾಯದವನಿದ್ದರೆ ಮರಣದಂಡನೆಯನ್ನು ಕೊಡಲಾಗುತ್ತದೆ, ಇನ್ನೊಂದು ಪ್ರಕರಣದಲ್ಲಿ ಅವರನ್ನು ಗೌರವದಿಂದ ಬಿಡುಗಡೆ ಮಾಡಲಾಗುತ್ತದೆ. ಹೊರತು ಯಾವ ಪ್ರಕರಣದಲ್ಲಿಯೂ ಮಹಿಳೆಗೆ ನ್ಯಾಯ ಸಿಗುತ್ತಿಲ್ಲ ಎಂದ ಅವರು, ಸಾಮೂಹಿಕ ಹತ್ಯೆಗಳಲ್ಲಿ ಒಂದೇ ಒಂದು ಪ್ರಕರಣವನ್ನೂ ದಾಖಲು ಮಾಡದಂತಹ ಸರಕಾರ ಮುಸ್ಲಿಂ ಮಹಿಳೆಯ ಮೇಲೆ ಆಗುವ ಅತ್ಯಾಚಾರ ಪ್ರಕರಣದಲ್ಲಿ ನ್ಯಾಯ ಕೊಡಬಲ್ಲದೇ ಎಂದು ಪ್ರಶ್ನಿಸಿದರು.
ಅಖಿಲ ಭಾರತ ಜನವಾದಿ ಸಂಘಟನೆಯ ಮೀನಾಕ್ಷಿ ಬಾಳಿ ಮಾತನಾಡಿ, ಧಾರ್ಮಿಕ ಮುಖಂಡರು ಮಹಿಳೆಯರ ಮೇಲಿನ ಅತ್ಯಾಚಾರವನ್ನು ಕಾನೂನುಬದ್ಧ ಗೊಳಿಸಿಕೊಂಡಿದ್ದಾರೆ. ಕೆಳವರ್ಗದ ಹೆಣ್ಣುಮಕ್ಕಳನ್ನು ಭೋಗಿಸಲೆಂದೇ ಮೇಲ್ವರ್ಗದ ಮಂದಿ ದೇವದಾಸಿ ಪದ್ಧತಿಯನ್ನೇ ಮಾಡಿಕೊಂಡಿದ್ದರು ಎಂದರು.
ನಿತ್ಯಾನಂದ, ರಾಮ್ ರಹೀಂ, ಅಸಾರಾಂ, ರಾಮಚಂದ್ರಾಪುರದ ಸ್ವಾಮಿಗಳ ಅತ್ಯಾಚಾರದ ಆರೋಪದಲ್ಲಿ ಸಿಲುಕಿದ್ದರು. ಎಲ್ಲರೂ ಜೈಲಿಗೆ ಹೋದರೆ ರಾಮಚಂದ್ರಾಪುರದ ಸ್ವಾಮಿಯನ್ನು ಯಾವ ಅಧಿಕಾರಿಗಳೂ ಮುಟ್ಟಿಲ್ಲ. ಹತ್ತು ಮಂದಿ ನ್ಯಾಯಾಧೀಶರು ತನಿಖೆಯಿಂದ ಹಿಂದೆ ಸರಿದರು ಎಂದು ಅವರು ಹೇಳಿದರು.
‘2002ರಲ್ಲಿ ಪಿಂಪ್ ಆಗಿ ಕೆಲಸ ಮಾಡುತ್ತಿದ್ದ ಸ್ಯಾಂಟ್ರೊ ರವಿಯನ್ನು ಹಲವು ಬಾರಿ ಪೆÇಲೀಸರಿಗೆ ಹಿಡಿದುಕೊಟ್ಟಿದ್ದೆವು. ಆ ಸಮಯದಲ್ಲಿ ಒಂದು ವರ್ಷ ಆತ ಜೈಲಿನಲ್ಲಿದ್ದ. ಅನಂತರ ಅವನು ಇಷ್ಟು ವೇಗವಾಗಿ ಬೆಳೆದಿದ್ದಾನೆ. ಇದಕ್ಕೆ ಆತನ ಹಿಂದಿರುವ ರಾಜಕೀಯ ವ್ಯಕ್ತಿಗಳೇ ಕಾರಣ ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕು’
-ಸ್ಟ್ಯಾನ್ಲಿ, ಒಡನಾಡಿ ಸಂಸ್ಥೆ ಸಂಸ್ಥಾಪಕ







