ಆರೆಸ್ಸೆಸ್ ಮೆರವಣಿಗೆಗೆ ಅನುಮತಿ ನೀಡಿ: ತಮಿಳುನಾಡು ಪೊಲೀಸರಿಗೆ ಮದ್ರಾಸ್ ಹೈಕೋರ್ಟ್ ಆದೇಶ

ಚೆನ್ನೈ, ಫೆ. 11: ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರೆಸ್ಸೆಸ್)ದ ಮೆರವಣಿಗೆಗೆ ಅನುಮತಿ ನೀಡುವಂತೆ ಮದ್ರಾಸ್ ಹೈಕೋರ್ಟ್(Madras High Court) ಶುಕ್ರವಾರ ತಮಿಳುನಾಡು ಸರಕಾರಕ್ಕೆ ಆದೇಶ ನೀಡಿದೆ ಹಾಗೂ ನಾಗರಿಕರ ವಾಕ್ ಸ್ವಾತಂತ್ರದ ಹಕ್ಕನ್ನು ಸರಕಾರ ಎತ್ತಿಹಿಡಿಯಬೇಕು ಎಂದು ಅದು ಅಭಿಪ್ರಾಯಪಟ್ಟಿದೆ.
ಮೆರವಣಿಗೆಯನ್ನು ಒಳಾಂಗಣದಲ್ಲಿ ನಡೆಸುವಂತೆ ನವೆಂಬರ್ 4ರಂದು ಅದೇ ನ್ಯಾಯಾಲಯದ ನ್ಯಾಯಾಧೀಶ ಜಿ.ಕೆ. ಇಳಂತಿರಯ್ಯನ್(G.K. Ilanthiraiyan) ಆರೆಸ್ಸೆಸ್ ಗೆ ಹೇಳಿದ್ದರು.
ಶುಕ್ರವಾರ ನ್ಯಾಯಮೂರ್ತಿಗಳಾದ ಆರ್. ಮಹಾದೇವನ್(R. Mahadevan) ಮತ್ತು ಮುಹಮ್ಮದ್ ಶಫೀಕ್(Muhammad Shafiq) ಅವರನ್ನೊಳಗೊಂಡ ವಿಭಾಗ ಪೀಠವು ಏಕ ಸದಸ್ಯ ಪೀಠದ ಆದೇಶವನ್ನು ತಳ್ಳಿಹಾಕಿತು. ಮೆರವಣಿಗೆ ನಡೆಸಬಹುದಾದ ಮೂರು ದಿನಾಂಕಗಳನ್ನು ಸೂಚಿಸಿ ಹೊಸದಾಗಿ ಅರ್ಜಿ ಸಲ್ಲಿಸುವಂತೆ ನ್ಯಾಯಪೀಠವು ಆರೆಸ್ಸೆಸ್ ಗೆ ಸೂಚಿಸಿತು ಹಾಗೂ ಆ ದಿನಾಂಕಗಳ ಪೈಕಿ ಯಾವುದಾದರೂ ಒಂದು ದಿನ ಮೆರವಣಿಗೆ ನಡೆಸಲು ಅನುಮತಿ ನೀಡುವಂತೆ ಪೊಲೀಸರಿಗೆ ನಿರ್ದೇಶನ ನೀಡಿತು.
ಮೆರವಣಿಗೆಯ ವೇಳೆ ಆರೆಸ್ಸೆಸ್ ಶಿಸ್ತಿನಿಂದ ವರ್ತಿಸಬೇಕು ಹಾಗೂ ಪ್ರಚೋದನಾತ್ಮಕವಾಗಿ ವರ್ತಿಸಬಾರದು ಎಂದು ಹೈಕೋರ್ಟ್ ಹೇಳಿತು.
ಆರೋಗ್ಯಯುತ ಪ್ರಜಾಪ್ರಭುತ್ವಕ್ಕೆ ಪ್ರತಿಭಟನೆಗಳು ಮತ್ತು ಮೆರವಣಿಗೆಗಳು ಅವಶ್ಯಕ ಎಂದು ಪೀಠ ಹೇಳಿತು.
‘‘ನಾಗರಿಕರ ವಾಕ್ ಸ್ವಾತಂತ್ರ ಮತ್ತು ಅಭಿವ್ಯಕ್ತಿ ಸ್ವಾತಂತ್ರದ ಹಕ್ಕುಗಳನ್ನು ಎತ್ತಿಹಿಡಿಯುವ ರೀತಿಯಲ್ಲಿ ರಾಜ್ಯದ ಅಧಿಕಾರಿಗಳು ಕೆಲಸ ಮಾಡಬೇಕು ಎನ್ನುವುದು ನಮ್ಮ ಅಭಿಪ್ರಾಯ. ಜನರ ಹಿತವನ್ನು ಬಯಸುವ ದೇಶಗಳಲ್ಲಿ ನಾಗರಿಕರ ಹಕ್ಕುಗಳಿಗೆ ಸಂಬಂಧಿಸಿ ಪ್ರಭುತ್ವದ ನಿಲುವು ಯಾವತ್ತೂ ಅವರಿಗೆ ಪ್ರತಿಕೂಲವಾಗುವಂತಿಲ್ಲ’’ ಎಂದು ನ್ಯಾಯಾಲಯ ಹೇಳಿತು.







