ಜಾಮಿಯಾ ಹಿಂಸಾಚಾರ ಪ್ರಕರಣದಿಂದ ಹಿಂದೆ ಸರಿದ ನ್ಯಾಯಾಧೀಶ
ಶರ್ಜೀಲ್ ಇಮಾಮ್, ಇತರ 10 ಮಂದಿಯನ್ನು ದೋಷಮುಕ್ತಗೊಳಿಸಿದ ಬಳಿಕ ನಿರ್ಧಾರ

ಹೊಸದಿಲ್ಲಿ, ಫೆ. 11: 2019ರಲ್ಲಿ ದಿಲ್ಲಿಯ ಜಾಮಿಯಾ(Jamia) ಮಿಲಿಯ ಇಸ್ಲಾಮಿಯ ವಿಶ್ವವಿದ್ಯಾನಿಲಯದಲ್ಲಿ ನಡೆದ ಗಲಭೆಗೆ ಸಂಬಂಧಿಸಿ ಇತ್ತೀಚೆಗೆ ಸಾಮಾಜಿಕ ಹೋರಾಟಗಾರ ಶರ್ಜೀಲ್ ಇಮಾಮ್(Sharjeel Imam) ಮತ್ತು ಇತರ 10 ಮಂದಿಯನ್ನು ದೋಷಮುಕ್ತಗೊಳಿಸಿದ್ದ ದಿಲ್ಲಿಯ ವಿಚಾರಣಾ ನ್ಯಾಯಾಲಯವೊಂದರ ನ್ಯಾಯಾಧೀಶರೊಬ್ಬರು, ಇಂಥದೇ ಇನ್ನೊಂದು ಪ್ರಕರಣವೊಂದರ ವಿಚಾರಣೆಯಿಂದ ಶುಕ್ರವಾರ ಹಿಂದೆ ಸರಿದಿದ್ದಾರೆ.
ಸಾಕೇತ್ ಜಿಲ್ಲಾ ನ್ಯಾಯಾಲಯದ ಹೆಚ್ಚುವರಿ ಸೆಶನ್ಸ್ ನ್ಯಾಯಾಧೀಶ ಅರುಲ್ ವರ್ಮ(Arul Verma), ಈ ಪ್ರಕರಣವನ್ನು ಇನ್ನೋರ್ವ ನ್ಯಾಯಾಧೀಶರಿಗೆ ವಹಿಸುವಂತೆ ಮನವಿ ಮಾಡಿದ್ದಾರೆ. ಅದಕ್ಕಾಗಿ ಅವರು ವೈಯಕ್ತಿಕ ಕಾರಣಗಳನ್ನು ನೀಡಿದ್ದಾರೆ.
ಸಾಕೇತ್ ನ್ಯಾಯಾಲಯದ ಪ್ರಿನ್ಸಿಪಾಲ್ ಜಿಲ್ಲಾ ಮತ್ತು ಸೆಶನ್ಸ್ ನ್ಯಾಯಾಧೀಶರು, ಪ್ರಕರಣದ ವರ್ಗಾವಣೆಯ ಬಗ್ಗೆ ಫೆಬ್ರವರಿ 13ರಂದು ನಿರ್ಧಾರ ತೆಗೆದುಕೊಳ್ಳಲಿದ್ದಾರೆ.
ಪೌರತ್ವ (ತಿದ್ದುಪಡಿ) ಕಾಯ್ದೆ ವಿರುದ್ಧ ವಿದ್ಯಾರ್ಥಿಗಳು ನಡೆಸುತ್ತಿದ್ದ ಪ್ರತಿಭಟನೆಯ ವೇಳೆ, 2019 ಡಿಸೆಂಬರ್ 15ರಂದು ಜಾಮಿಯಾ ಮಿಲಿಯ ಇಸ್ಲಾಮಿಯ ವಿಶ್ವವಿದ್ಯಾನಿಲಯದ ಆವರಣದಲ್ಲಿ ಹಿಂಚಾಚಾರ ಸಂಭವಿಸಿತ್ತು. ಪ್ರತಿಭಟನೆಗಳನ್ನು ಹತ್ತಿಕ್ಕುವುದಕ್ಕಾಗಿ ದಿಲ್ಲಿ ಪೊಲೀಸರು ವಿಶ್ವವಿದ್ಯಾನಿಲಯದ ಆವರಣದ ಒಳಗೆ ನುಗ್ಗಿ ವಿದ್ಯಾರ್ಥಿಗಳ ಮೇಲೆ ಅಧಿಕ ಬಲಪ್ರಯೋಗ ನಡೆಸಿದ್ದಾರೆ ಎಂದು ಆರೋಪಿಸಲಾಗಿತ್ತು. ಪ್ರತಿಭಟನಕಾರರು ಪೊಲೀಸ್ ಸಿಬ್ಬಂದಿಯನ್ನು ಗಾಯಗೊಳಿಸಿದ್ದಾರೆ ಮತ್ತು ಬಸ್‌ಗಳಿಗೆ ಬೆಂಕಿ ಹಚ್ಚಿದ್ದಾರೆ ಎಂಬುದಾಗಿ ಆರೋಪಿಸಿರುವ ಪೊಲೀಸರು, ತಮ್ಮ ಕೃತ್ಯವನ್ನು ಸಮರ್ಥಿಸಿಕೊಂಡಿದ್ದರು.
ಫೆಬ್ರವರಿ 4ರಂದು ನ್ಯಾಯಾಧೀಶ ವರ್ಮ ಅವರು ಶರ್ಜೀಲ್ ಇಮಾಮ್, ಸಫೂರಾ ಝರ್ಗಾರ್, ಆಸಿಫ್ ಇಕ್ಬಾಲ್ ತನ್ಹಾ ಮತ್ತು ಇತರ 8 ಮಂದಿಯನ್ನು ದೋಷಮುಕ್ತಗೊಳಿಸಿದ್ದರು. ನಿಜವಾದ ಆರೋಪಿಗಳನ್ನು ಹಿಡಿಯಲಾಗದೆ ದಿಲ್ಲಿ ಪೊಲೀಸರು ಸಾಮಾಜಿಕ ಕಾರ್ಯಕರ್ತರನ್ನು ಬಲಿಪಶುಗಳನ್ನಾಗಿ ಮಾಡಿದ್ದಾರೆ ಎಂದು ತನ್ನ ತೀರ್ಪಿನಲ್ಲಿ ನ್ಯಾಯಾಧೀಶರು ಹೇಳಿದ್ದರು.
ಆರೋಪಿಗಳು ಹಿಂಸಾಚಾರದಲ್ಲಿ ಪಾಲ್ಗೊಂಡಿದ್ದರು, ಅವರಲ್ಲಿ ಶಸ್ತ್ರಾಸ್ತ್ರಗಳಿದ್ದವು ಅಥವಾ ಅವರು ಕಲ್ಲುಗಳನ್ನು ಎಸೆಯುತ್ತಿದ್ದರು ಎನ್ನುವುದಕ್ಕೆ ಮೇಲ್ನೋಟಕ್ಕೆ ಹೌದೆಂದು ಅನಿಸುವ ಯಾವುದೇ ಪುರಾವೆಗಳಿಲ್ಲ ಎಂದು ನ್ಯಾಯಾಧೀಶರು ಹೇಳಿದ್ದರು.
ವರ್ಮ ತನ್ನ ಆದೇಶದಲ್ಲಿಯೂ, ಭಾರತೀಯ ಸಂವಿಧಾನದ 19ನೇ ವಿಧಿಯನ್ನು ಉಲ್ಲೇಖಿಸಿ, ‘‘ಭಿನ್ನಮತವೆನ್ನುವುದು ಬೆಲೆಕಟ್ಟಲಾಗದ ಮೂಲಭೂತ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರದ ಹಕ್ಕಿನ ವಿಸ್ತರಣೆಯಾಗಿದೆ. ಹಾಗಾಗಿ, ಅದು ಕೂಡ ಒಂದು ಹಕ್ಕಾಗಿದೆ. ಅದನ್ನು ಎತ್ತಿ ಹಿಡಿಯಲು ನಾವು ಪ್ರಮಾಣವಚನ ಸ್ವೀಕರಿಸಿದ್ದೇವೆ’’ ಎಂದು ಹೇಳಿದ್ದರು.
‘‘ನಾಗರಿಕರ ಪ್ರತಿಭಟಿಸುವ ಸ್ವಾತಂತ್ರ್ಯ ದಲ್ಲಿ ಪೊಲೀಸರು ಹಸ್ತಕ್ಷೇಪ ನಡೆಸಬಾರದಾಗಿತ್ತು. ಆರೋಪಿಗಳ ವಿರುದ್ಧ ಪ್ರಾಸಿಕ್ಯೂಶನ್ ನಿರ್ಲಕ್ಷ್ಯ ಮತ್ತು ಉಡಾಫೆ ಧೋರಣೆಯಿಂದ ಮೊಕದ್ದಮೆ ನಡೆಸುತ್ತಿದೆ ಎಂಬಂತೆ ಕಾಣಿಸುತ್ತದೆ’’ ಎಂಬುದಾಗಿಯೂ ನ್ಯಾಯಾಲಯ ಹೇಳಿತ್ತು.
ಭಾವಾವೇಶಕ್ಕೊಳಗಾಗಿ ಆರೋಪಿಗಳನ್ನು ಬಿಡುಗಡೆಗೊಳಿಸಿದ ನ್ಯಾಯಾಲಯ: ದಿಲ್ಲಿ ಹೈಕೋರ್ಟ್‌ಗೆ ಪೊಲೀಸರಿಂದ ಮೇಲ್ಮನವಿ
ವಿಚಾರಣಾ ನ್ಯಾಯಾಲಯದ ತೀರ್ಪನ್ನು ದಿಲ್ಲಿ ಪೊಲೀಸರು ದಿಲ್ಲಿ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದಾರೆ. ವಿಚಾರಣಾ ನ್ಯಾಯಾಲಯವು ‘‘ಭಾವಾವೇಶಕ್ಕೊಳಗಾಗಿ’’ ಆರೋಪಿಗಳನ್ನು ಬಿಡುಗಡೆ ಮಾಡಿದೆ ಎಂದು ಎಂದು ಪೊಲೀಸರು ಮೇಲ್ಮನವಿಯಲ್ಲಿ ಅಭಿಪ್ರಾಯಪಟ್ಟಿದ್ದಾರೆ.
ಸಲ್ಲಿಸಲಾಗಿರುವ ಪುರಾವೆಗಳನ್ನು ಪರಿಶೀಲಿಸಲು ವಿಚಾರಣಾ ನ್ಯಾಯಾಲಯವು ವಿಫಲವಾಗಿದೆ ಹಾಗೂ ದೋಷಾರೋಪಣೆಯ ಹಂತದಲ್ಲೇ ಆರೋಪಿಗಳನ್ನು ಬಿಡುಗಡೆಗೊಳಿಸಿದೆ ಎಂದು ದಿಲ್ಲಿ ಪೊಲೀಸರು ಹೇಳಿದ್ದಾರೆ.
ದಿಲ್ಲಿ ಪೊಲೀಸರ ಅರ್ಜಿಯನ್ನು ದಿಲ್ಲಿ ಹೈಕೋರ್ಟ್‌ನ ನ್ಯಾಯಾಧೀಶೆ ಸ್ವರಣಾ ಕಾಂತ ಶರ್ಮ ಫೆಬ್ರವರಿ 13ರಂದು ವಿಚಾರಣೆಗೆ ಎತ್ತಿಕೊಳ್ಳಲಿದ್ದಾರೆ.







