ನನ್ನ ತಂದೆಯ ಕಾಳಜಿ ವಹಿಸಿ: ಲಾಲೂಗೆ ಕಿಡ್ನಿ ದಾನ ಮಾಡಿದ ಪುತ್ರಿಯ ಭಾವನಾತ್ಮಕ ಪತ್ರ

ಹೊಸದಿಲ್ಲಿ: ಕಳೆದ ವರ್ಷ ಡಿಸೆಂಬರ್‌ನಲ್ಲಿ ಸಿಂಗಾಪುರದಲ್ಲಿ ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ರಾಷ್ಟ್ರೀಯ ಜನತಾ ದಳ (RJD) ಅಧ್ಯಕ್ಷ ಲಾಲು ಪ್ರಸಾದ್ ಯಾದವ್(Lalu Prasad Yadav) ಅವರು ಶನಿವಾರ ಭಾರತಕ್ಕೆ ಮರಳಿದ್ದಾರೆ.
ತನ್ನ ತಂದೆಗೆ ಕಿಡ್ನಿ ದಾನ ಮಾಡಿದ ಲಾಲು ಪುತ್ರಿ ರೋಹಿಣಿ ಆಚಾರ್ಯ(Rohini Yadav) ಟ್ವಿಟರ್‌ನಲ್ಲಿ ಭಾವನಾತ್ಮಕ ಪೋಸ್ಟ್ ಅನ್ನು ಹಂಚಿಕೊಂಡಿದ್ದು, ಆರ್‌ಜೆಡಿ ಮುಖ್ಯಸ್ಥರು ಶನಿವಾರ ಭಾರತಕ್ಕೆ ತೆರಳಲಿದ್ದಾರೆ ಎಂದು ಹೇಳಿದ್ದಾರೆ.
"ಒಂದು ಮುಖ್ಯವಾದ ವಿಷಯ ಹೇಳಬೇಕು. ಈ ಪ್ರಮುಖ ವಿಷಯ ನಮ್ಮ ನಾಯಕ ಲಾಲು ಜಿ ಅವರ ಆರೋಗ್ಯದ ಬಗ್ಗೆ. ಪಪ್ಪ ಫೆಬ್ರವರಿ 11 ರಂದು ಸಿಂಗಾಪುರದಿಂದ ಭಾರತಕ್ಕೆ ಹೋಗುತ್ತಿದ್ದಾರೆ. ನಾನು ಮಗಳಾಗಿ ನನ್ನ ಕರ್ತವ್ಯವನ್ನು ಮಾಡುತ್ತಿದ್ದೇನೆ. ನನ್ನ ತಂದೆಯನ್ನು ನಿಮ್ಮೆ ಬಳಿಗೆ ಕಳುಹಿಸುತ್ತಿದ್ದೇನೆ. ಈಗ ನೀವೆಲ್ಲರೂ ನನ್ನ ತಂದೆಯನ್ನು ನೋಡಿಕೊಳ್ಳುತ್ತೀರಿ (ಎಂದು ಭಾವಿಸುತ್ತೇನೆ)" ಎಂದು ರೋಹಿಣಿ ಆಚಾರ್ಯ ಟ್ವೀಟ್ ಮಾಡಿದ್ದಾರೆ.
ಲಾಲು ಯಾದವ್ ಅವರು ಕಳೆದ ವರ್ಷ ಡಿಸೆಂಬರ್‌ನಲ್ಲಿ ಸಿಂಗಾಪುರದ ಆಸ್ಪತ್ರೆಯಲ್ಲಿ ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.
74 ವರ್ಷದ ಲಾಲು ಅವರು ಕೆಲವು ಸಮಯದಿಂದ ತೀವ್ರ ಮೂತ್ರಪಿಂಡದ ತೊಂದರೆಯಿಂದ ಬಳಲುತ್ತಿದ್ದರು. ವೈದ್ಯರು ಅವರಿಗೆ ಮೂತ್ರಪಿಂಡ ಕಸಿ ಮಾಡಲು ಸಲಹೆ ನೀಡಿದ್ದರು. ಈ ವೇಳೆ ಅವರ ಮಗಳು ರೋಹಿಣಿ ಅವರ ಕಿಡ್ನಿ ದಾನಿಯಾಗಲು ಮುಂದೆ ಬಂದಿದ್ದರು. ಆಕೆಯ ಒತ್ತಾಯದ ಮೇರೆಗೆ, ಕುಟುಂಬವು ಶಸ್ತ್ರಚಿಕಿತ್ಸೆಗಾಗಿ ಸಿಂಗಾಪುರವನ್ನು ಆಯ್ಕೆ ಮಾಡಿತ್ತು. ರೋಹಿಣಿ ಆಚಾರ್ಯ ಅವರು ತಮ್ಮ ಪತಿ ರಾವ್ ಸಮರೇಶ್ ಸಿಂಗ್ ಹಾಗೂ ಮಕ್ಕಳೊಂದಿಗೆ ಸಿಂಗಾಪುರದಲ್ಲಿ ವಾಸಿಸುತ್ತಿರುವುದರಿಂದ ಶಸ್ತ್ರಚಿಕಿತೆಯನ್ನು ಅಲ್ಲೇ ಮಾಡಲಾಗಿತ್ತು.







