ಬೆಂಗಳೂರು | ಗೋಡೆ ಕುಸಿತ: ಇಬ್ಬರು ಕಟ್ಟಡ ಕಾರ್ಮಿಕರು ಮೃತ್ಯು

ಬೆಂಗಳೂರು, ಫೆ.11: ಹಳೆಯ ಕಟ್ಟಡವನ್ನು ಕೆಡವುವ ವೇಳೆ ಕುಸಿಯುತ್ತಿದ್ದ ಗೋಡೆಯೊಳಗೆ ಸಿಲುಕಿ ಇಬ್ಬರು ಕೂಲಿ ಕಾರ್ಮಿಕರು ಸಾವನ್ನಪ್ಪಿದ ದುರ್ಘಟನೆ ಮಹಾಲಕ್ಷ್ಮೀ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಶನಿವಾರ ಇಲ್ಲಿನ ಮಹಾಲಕ್ಷ್ಮೀ ಲೇಔಟ್ ಹತ್ತನೆ ಕ್ರಾಸ್ ಬಳಿ ಈ ಘಟನೆ ನಡೆದಿದ್ದು, ಪಶ್ಚಿಮ ಬಂಗಾಳ ಮೂಲದ ಇನಾಮ್, ಸಿರಾಝುವುಲ್ಲಾ ಮೃತ ದುರ್ದೈವಿಗಳೆಂದು ತಿಳಿದುಬಂದಿದೆ.
ಹಳೆ ಕಟ್ಟಡ ತೆರವುಗೊಳಿಸುವ ವೇಳೆ ಅವಘಡ ಸಂಭವಿಸಿದೆ. ಒಂದು ವಾರದಿಂದ. ಆರು ಮಂದಿ ಕಾರ್ಮಿಕರು ಕಟ್ಟಡ ತೆರವು ಮಾಡುತ್ತಿದ್ದರು. ಆದರೆ, ಸೂಕ್ತ ಮುಂಜಾಗ್ರತೆ ತೆಗೆದುಕೊಳ್ಳದೆ ಕಟ್ಟಡ ತೆರವು ಮಾಡುತ್ತಿದ್ದರು ಎಂದು ಸ್ಥಳೀಯರು ಹೇಳಿದ್ದಾರೆ.
ಸೂಕ್ತ ಮುಂಜಾಗ್ರತಾ ಕ್ರಮ ಕೈಗೊಳ್ಳದೇ ಕಟ್ಟಡ ತೆರವು ಕಾರ್ಯ ಮಾಡುತ್ತಿದ್ದರಿಂದ ಇಬ್ಬರು ಕಾರ್ಮಿಕರು ಸಾವನ್ನಪ್ಪಿದ್ದಾರೆ. ಸಂಜೆ ವೇಳೆಗೆ ಕಾರ್ಮಿಕರ ಮೃತ ದೇಹಗಳನ್ನು ಕಟ್ಟಡದ ಅವಶೇಷಗಳಿಂದ ಹೊರತೆಗೆದು ರಾಮಯ್ಯ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಘಟನಾ ಸ್ಥಳಕ್ಕೆ ಮಹಾಲಕ್ಷ್ಮೀ ಲೇಔಟ್ ಪೊಲೀಸರು ಭೇಟಿ ಪರಿಶೀಲನೆ ಮಾಡಿದ್ದಾರೆ.





