ಜೈಲಿನಲ್ಲಿ ಎಸ್ಪಿ ಶಾಸಕನನ್ನು ಅಕ್ರಮವಾಗಿ ಭೇಟಿ ಮಾಡಿದ ಪತ್ನಿ ಬಂಧನ

ಲಕ್ನೋ: ಜೈಲಿನಲ್ಲಿರುವ ಎಸ್ಪಿ ಶಾಸಕ ಅಬ್ಬಾಸ್ ಅನ್ಸಾರಿಯವರನ್ನು ಅಕ್ರಮವಾಗಿ ಭೇಟಿ ಮಾಡಿದ ಆರೋಪದಲ್ಲಿ ಕೈದಿ ಪತ್ನಿ ನಿಖತ್ ಬಾನೊ ಹಾಗೂ ಆಕೆಯ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ. ದಂಪತಿ ವಿರುದ್ಧ ಎಫ್‌ಐಆರ್ ದಾಖಲಿಸಿದ್ದು, ಭೇಟಿಗೆ ಅವಕಾಶ ಮಾಡಿಕೊಟ್ಟ ಆರೋಪದಲ್ಲಿ ಚಿತ್ರಕೂಟ ಜೈಲು ಅಧೀಕ್ಷಕ ಹಾಗೂ ಏಳು ಮಂದಿಯನ್ನು ಅಮಾನತುಗೊಳಿಸಲಾಗಿದೆ.
ಜೈಲು ಅಧೀಕ್ಷಕರ ಕಚೇರಿಯ ಪಕ್ಕದ ಕೊಠಡಿಯಲ್ಲಿ ಅಬ್ಬಾಸ್ ಹಾಗೂ ನಿಖತ್ ಭೇಟಿ ಮಾಡಿದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ನಿಖತ್ ಎರಡು ಮೊಬೈಲ್ ಫೋನ್ ಹಾಗೂ ನಗದು ಒಯ್ದಿದ್ದರು ಎನ್ನಲಾಗಿದೆ. ಕಳೆದ ಹದಿನೈದು ದಿನಗಳಿಂದ ದಂಪತಿ ನಿಯತವಾಗಿ ಭೇಟಿ ಮಾಡುತ್ತಿದ್ದರು ಎನ್ನಲಾಗಿದ್ದು, ಈ ಭೇಟಿ ಬಗ್ಗೆ ಜೈಲು ದಾಖಲೆಗಳಲ್ಲಿ ಯಾವುದೇ ಉಲ್ಲೇಖ ಇರಲಿಲ್ಲ.
ಜೈಲು ಪ್ರವೇಶ ದಾಖಲೆಗಳಲ್ಲಿ ಹೆಸರು ನೋಂದಾಯಿಸದೇ ನಿಖತ್, ತಮ್ಮ ಪತಿಯನ್ನು ಭೇಟಿಯಾಗಿದ್ದಾರೆ ಎಂಬ ಬಗ್ಗೆ ಚಿತ್ರಕೂಟ ಪೊಲೀಸ್ ಮುಖ್ಯಸ್ಥೆ ವೃಂದಾ ಶುಕ್ಲಾ ಅವರಿಗೆ ದೊರೆತ ಖಚಿತ ಮಾಹಿತಿ ಆಧಾರದಲ್ಲಿ ಕ್ರಮ ಕೈಗೊಳ್ಳಲಾಗಿದೆ ಎಂದು ಹೆಚ್ಚುವರಿ ಡಿಜಿಪಿ ಭಾನುಭಾಸ್ಕರ್ ಹೇಳಿದ್ದಾರೆ.
ಪತ್ನಿಯ ಫೋನ್ ಬಳಸಿ ಅಬ್ಬಾಸ್ ತಮ್ಮ ಅಪರಾಧ ಪ್ರಕರಣಗಳ ಸಂಬಂಧ ಅಭಿಯೋಜಕ ಸಾಕ್ಷಿಗಳಿಗೆ ಬೆದರಿಕೆ ಹಾಕುತ್ತಿದ್ದರು ಎಂದು ದೂರಲಾಗಿದೆ. ತಮಗೆ ದೊರೆತ ಸುಳಿವಿನ ಬಗ್ಗೆ ಶುಕ್ಲಾ ಜಿಲ್ಲಾಧಿಕಾರಿ ಅಭಿಷೇಕ್ ಆನಂದ್ ಅವರಿಗೆ ಮಾಹಿತಿ ನೀಡಿದರು. ಉಭಯ ಅಧಿಕಾರಿಗಳು ಜೈಲಿಗೆ ದಿಢೀರ್ ಭೇಟಿ ನೀಡಿದಾಗ ಕೈದಿ ಹಾಗೂ ಪತ್ನಿ ಜೈಲು ಅಧೀಕ್ಷಕ ಅಶೋಕ್ ಸಾಗರ್ ಅವರ ಕೊಠಡಿಯ ಪಕ್ಕದ ಕೊಠಡಿಯಲ್ಲಿದ್ದರು ಎಂದು ಮೂಲಗಳು ಹೇಳಿವೆ.







