ಈ ವಾರ
ಬ್ರಾಹ್ಮಣರ ತಕರಾರು

ಬ್ರಾಹ್ಮಣರ ಕುರಿತ ಎರಡು ಹೇಳಿಕೆಗಳು ತೀವ್ರ ವಿವಾದಕ್ಕೆ ಕಾರಣವಾದವು. ಮೊದಲನೆಯದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆ. ‘‘ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರನ್ನು ರಾಜ್ಯದ ಮುಂದಿನ ಮುಖ್ಯಮಂತ್ರಿ ಮಾಡಲು ಆರೆಸ್ಸೆಸ್ ಪ್ರಯತ್ನಿಸುತ್ತಿದೆ. ಜೋಶಿ ಸಮಾಜವನ್ನು ಒಡೆಯುವ ಅಸಂಸ್ಕೃತ ಬ್ರಾಹ್ಮಣರ ಪಂಗಡಕ್ಕೆ ಸೇರಿದವರು. ಗಾಂಧಿಯನ್ನು ಹತ್ಯೆ ಮಾಡಿದ ಪಂಗಡಕ್ಕೆ ಸೇರಿದವರು’’ ಎಂದು ಕುಮಾರಸ್ವಾಮಿ ಹೇಳಿದ್ದರು. ಇದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಯಿತು. ಪ್ರತಿಭಟನೆಗಳೂ ನಡೆದವು. ಗೋಕರ್ಣದಲ್ಲಂತೂ ಈಗಲೇ ಸ್ಪಷ್ಟನೆ ಕೊಡಿ ಎಂದು ಅರ್ಚಕರೇ ಪಟ್ಟುಹಿಡಿದರು. ತಮ್ಮ ಹೇಳಿಕೆ ವ್ಯಕ್ತಿಗತ ಟೀಕೆಯೇ ಹೊರತು ಬ್ರಾಹ್ಮಣ ಸಮುದಾಯವನ್ನು ಅವಹೇಳನ ಮಾಡಿಲ್ಲ ಎಂದು ಎಚ್‌ಡಿಕೆ ಸ್ಪಷ್ಟನೆ ನೀಡಿದ್ದಾರೆ.
ಇನ್ನೊಂದೆಡೆ, ಆರೆಸ್ಸೆಸ್ ಮುಖಂಡ ಮೋಹನ್ ಭಾಗವತ್, ಜಾತಿಯನ್ನು ದೇವರು ಸೃಷ್ಟಿಸಲಿಲ್ಲ, ಪಂಡಿತರು ತಮ್ಮ ಸ್ವಂತ ಲಾಭಕ್ಕಾಗಿ ಸಮಾಜ ವಿಭಜಿಸಿದ್ದರು ಎಂದಿದ್ದು ಕೂಡ ಬ್ರಾಹ್ಮಣರನ್ನು ಕೆರಳಿಸಿತು. ಇದರ ವಿರುದ್ಧ ಕೇಸ್ ಕೂಡ ದಾಖಲಾಗಿದೆ. ಇಲ್ಲಿ ಗಮನಿಸಬೇಕಿರುವ ಒಂದು ಸಂಗತಿಯೆಂದರೆ, ಎಚ್‌ಡಿಕೆ ಹೇಳಿಕೆಯಾಗಲೀ ಭಾಗತ್ ಹೇಳಿಕೆಯಾಗಲೀ ರಾಜಕೀಯ ಉದ್ದೇಶದವೇ ಹೊರತು ಸಾಮಾಜಿಕ ಕಾಳಜಿಯ ಹಿನ್ನೆಲೆಯಲ್ಲಿ ವ್ಯಕ್ತವಾದವುಗಳಲ್ಲ ಎಂಬುದು. ಎಚ್‌ಡಿಕೆ ಹೇಳಿಕೆ ಬಳಿಕ ರಾಜ್ಯ ಬಿಜೆಪಿ ಪ್ರತಿಕ್ರಿಯಿಸಿದ ರೀತಿಯಲ್ಲೂ ಅದು ಸಾಬೀತಾಯಿತು. ಗಲಿಬಿಲಿಗೊಂಡಂತಾದ ಬಿಜೆಪಿ ಬಿ.ವೈ. ವಿಜಯೇಂದ್ರ ಹಾಗೂ ಸಿ. ಸಿ. ಪಾಟೀಲ್ ಅವರಿಗೆ ತರಾತುರಿಯಲ್ಲಿ ಒಂದೊಂದು ಪ್ರಮುಖ ಸ್ಥಾನ ನೀಡಿ ಮೊದಲೇ ಪಕ್ಷದ ಮೇಲೆ ಸಿಟ್ಟಿಗೆದ್ದಿರುವ ಲಿಂಗಾಯತರನ್ನು ಸಮಾಧಾನಪಡಿಸಲು ಪ್ರಯತ್ನಿಸಿತು. ಇಲ್ಲಿ ಒಂದು ವಿಚಾರವಂತೂ ಸ್ಪಷ್ಟ. ತಮ್ಮ ಕುರಿತ ಒಂದೇ ಒಂದು ಹೇಳಿಕೆಗೆ ಬ್ರಾಹ್ಮಣರು ಹೇಗೆ ತೀರಾ ಆಕ್ರಮಣಕಾರಿಯಾಗಿ ಪ್ರತಿಕ್ರಿಯಿಸಬಲ್ಲರು ಎಂಬುದು ಮತ್ತೊಮ್ಮೆ ಗೊತ್ತಾಯಿತು. ಇತರ ಸಮುದಾಯದವರ ವಿಚಾರದಲ್ಲಿ, ಇಂಥದೇ ಕಳಕಳಿಯನ್ನು ಅವರು ತೋರಬಲ್ಲರೇ?
‘ಹೆಲಿಕಾಪ್ಟರ್’ ಮಾತು

ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯಕ್ಕೆ ಮೋದಿ ಪ್ರವಾಸ ಸರಣಿ ಮುಂದುವರಿದಿದೆ. ಸೋಮವಾರ ಪುನಃ ಅವರು ರಾಜ್ಯಕ್ಕೆ ಒಂದು ದಿನದ ಪ್ರವಾಸ ಕೈಗೊಂಡಿದ್ದರು. ಏಶ್ಯದಲ್ಲಿಯೇ ದೊಡ್ಡದೆನ್ನಲಾದ ಎಚ್‌ಎಎಲ್ ಹೆಲಿಕಾಪ್ಟರ್ ಉತ್ಪಾದನಾ ಘಟಕವನ್ನು ತುಮಕೂರಿನ ಗುಬ್ಬಿಯಲ್ಲಿ ಉದ್ಘಾಟಿಸಿದರು. ಈ ಸಂದರ್ಭವನ್ನು ರಾಜಕೀಯವಾಗಿ ಕುಟುಕುವುದಕ್ಕೆ ಬಳಸಿಕೊಂಡ ಮೋದಿ, ‘‘ರಫೇಲ್ ಯುದ್ಧವಿಮಾನ ವಿಚಾರದಲ್ಲಿ ಕೇಂದ್ರದ ಮೇಲೆ ಸುಳ್ಳು ಆರೋಪ ಮಾಡಲಾಗಿತ್ತು’’ ಎಂದರು. ‘‘ಈ ಹೆಲಿಕಾಪ್ಟರ್ ಘಟಕ ಅಂತಹ ಆರೋಪಗಳಿಗೆ ಉತ್ತರ. ಕರ್ನಾಟಕದೆಡೆಗೆ ವಿಶ್ವವೇ ನೋಡಲಿದೆ’’ ಎಂದರು. ‘‘ಕರ್ನಾಟಕದತ್ತ ವಿಶ್ವವೇ ನೋಡುವುದು 2024ರ ಲೋಕಸಭೆ ಚುನಾವಣೆ ಮುಗಿಯುವವರೆಗೋ ಅಥವಾ ಆಮೇಲೆಯೂ ನೋಡಲಿದೆಯಾ ಎಂಬುದನ್ನು ಕಾದುನೋಡಬೇಕಾಗಿದೆ. ರಾಜ್ಯಕ್ಕೆ ಕೇಂದ್ರದಿಂದ ಸಿಗಬೇಕಾದ ತೆರಿಗೆ ಪಾಲು ಸಿಗದೆ ಇರುವುದು, ಕನ್ನಡದ ಅವಗಣನೆ, ಹಿಂದಿ ಹೇರಿಕೆ ಯತ್ನ, ರಾಜ್ಯದ ಬೇಡಿಕೆಗಳ ಬಗ್ಗೆ ಇಲ್ಲದ ಸ್ಪಂದನೆ ಇವುಗಳ ಬಗ್ಗೆ ಮೋದಿ ಚಕಾರ ಎತ್ತುತ್ತಿಲ್ಲ. ಬಿಜೆಪಿ ನಾಯಕರಿಗೂ ಅವರಲ್ಲಿ ಅದನ್ನು ಕೇಳುವ ಧೈರ್ಯ ಇಲ್ಲ. ಮೋದಿ ರಾಜ್ಯ ಭೇಟಿ ಖೊಖೊ ಆಟದಂತಾಗಿದೆ’’ ಎಂಬ ಎಚ್‌ಡಿಕೆ ಟೀಕೆ ಒಪ್ಪುವಂತಿದೆ.
ತೇಜಸ್ವಿ ಲೆಕ್ಕ

ರೈತರ ಸಾಲ ಮನ್ನಾ ಮಾಡುವುದರಿಂದ ದೇಶಕ್ಕೆ ಉಪಯೋಗವಾಗುವುದಿಲ್ಲ ಎಂದು ಮಂಗಳೂರಿನಲ್ಲಿ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ನೀಡಿದ್ದ ಹೇಳಿಕೆ ವಿವಾದವೆಬ್ಬಿಸಿದೆ. ಮೋದಿ ಸರಕಾರ ದೇಶಕ್ಕೆ ನಷ್ಟ ಆಗುವ ರೈತರ ಸಾಲ ಮನ್ನಾ ಮಾಡಲಿಲ್ಲ. ಅದರ ಬದಲು 10 ಲಕ್ಷ ಕೋಟಿ ರೂ. ಮೂಲಭೂತ ಸೌಲಭ್ಯ ಅಭಿವೃದ್ಧಿಗೆ ಹೂಡಿಕೆ ಮಾಡಿ 30 ಲಕ್ಷ ಕೋಟಿ ರೂ. ಆದಾಯ ತರಲಿದೆ ಎಂದರು. ರೈತರ ಒಂದಿಷ್ಟು ಸಾಲ ಮನ್ನಾ ಮಾಡಿದರೆ ದೇಶದ ಅಭಿವೃದ್ಧಿಗೆ ದೊಡ್ಡ ತೊಂದರೆ ಎನ್ನುವ ತೇಜಸ್ವಿ ಸೂರ್ಯ, ದೇಶದ ಟಾಪ್ ಸಾಲಗಾರರ ಲಕ್ಷಾಂತರ ಕೋಟಿ ಸಾಲವನ್ನು ರೈಟ್ ಆಫ್ ಮಾಡಿರುವುದರ ಬಗ್ಗೆ ಯಾಕೆ ಮಾತನಾಡುತ್ತಿಲ್ಲ? ರೈತರ ಆದಾಯ ದುಪ್ಪಟ್ಟು ಮಾಡುತ್ತೇವೆ ಎಂದು ಹೇಳಿದ್ದ ಇವರದೇ ಸರಕಾರ ಅದನ್ನಾದರೂ ಮಾಡಿದೆಯೆ? ಬದಲಿಗೆ ರೈತರ ಆದಾಯದಲ್ಲಿ ಕುಸಿತವಾಗಿದೆ. ಗ್ರಾಮೀಣ ಕೃಷಿ ಆದಾಯವೂ ಕುಸಿದಿದೆ. ಇನ್ನು 10 ಲಕ್ಷ ಕೋಟಿ ರೂ. ಮೂಲಸೌಲಭ್ಯಕ್ಕೆ ಹೂಡಿದರೆ 30 ಲಕ್ಷ ಕೋಟಿ ರೂ. ಲಾಭ ಬರುವುದು ಹೇಗೆಂದು ಅವರೇ ವಿವರಿಸಬೇಕು.
ಏನನ್ನು ನಿರೀಕ್ಷಿಸಲು ಸಾಧ್ಯ?
ರಾಜ್ಯ ವಿಧಾನಮಂಡಲ ಅಧಿವೇಶನ ಶುಕ್ರವಾರದಿಂದ ಆರಂಭವಾಗಿದ್ದು, ಜಂಟಿ ಸದನವನ್ನುದ್ದೇಶಿಸಿ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಭಾಷಣ ಮಾಡಿದ್ದಾರೆ. ರಾಜ್ಯಪಾಲರಿಂದ ಹಸಿ ಸುಳ್ಳು ಹೇಳಿಸಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಟೀಕಿಸಿದ್ದಾರೆ. ಸಾಮಾನ್ಯವಾಗಿ ಅಧಿವೇಶನ ತಪ್ಪಿಸದ ವಿರೋಧಪಕ್ಷ ನಾಯಕ ಸಿದ್ದರಾಮಯ್ಯ ಈ ಬಾರಿ ಪ್ರಜಾಧ್ವನಿ ಯಾತ್ರೆ ಹಿನ್ನೆಲೆಯಲ್ಲಿ ಹಾಜರಾಗಿಲ್ಲವೆನ್ನಲಾಗಿದೆ. ಪಂಚರತ್ನ ಯಾತ್ರೆಯಲ್ಲಿರುವ ಜೆಡಿಎಸ್ ನಾಯಕ ಕುಮಾರಸ್ವಾಮಿ ಕೂಡ ಹಾಜರಾಗಿಲ್ಲ. ಜನರ ಪರವಾಗಿ ಮಾತನಾಡಬೇಕಾದವರು ಪಕ್ಷದ ಕೆಲಸದ ಮೇಲೆ ಅಧಿವೇಶನದಿಂದ ದೂರವುಳಿಯುತ್ತಾರೆ. ಆಳುವವರಿಗೂ, ಅವರನ್ನು ಹಿಡಿದು ಕೇಳಬೇಕಾದವರಿಗೂ ಇಚ್ಛಾಶಕ್ತಿ ಇಲ್ಲದೆ ಹೋದಾಗ ಅಧಿವೇಶನದಂತಹ ಮಹತ್ವದ ಕಾರ್ಯಕ್ರಮವೂ ಕೇವಲ ಹೆಸರಿಗೆ ಮಾತ್ರ ನಡೆಯುವಂತಾಗುತ್ತದೆ. ಹೀಗಾದರೆ ಜನರು ಅಧಿವೇಶನದಿಂದ ಹೆಚ್ಚೇನು ನಿರೀಕ್ಷಿಸಲು ಸಾಧ್ಯ?
ರಾಹುಲ್ ಪ್ರಶ್ನೆಗಳು

ಅದಾನಿ ಹಗರಣ ಬಯಲಿಗೆ ಬಂದಿರುವ ಬೆನ್ನಿಗೇ ಮೋದಿ ಮತ್ತು ಅದಾನಿ ಸಂಬಂಧವೇನು ಎಂಬ ನೇರ ಪ್ರಶ್ನೆಯನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಲೋಕಸಭೆಯಲ್ಲಿ ಎತ್ತಿದರು. ಮೋದಿ ವಿದೇಶಕ್ಕೆ ಹೋದಾಗಲೆಲ್ಲ ಅಲ್ಲಿ ಅದಾನಿಗೆ ಗುತ್ತಿಗೆ ಸಿಗುವುದರ ಬಗ್ಗೆ ಪ್ರಸ್ತಾಪಿಸಿದ ರಾಹುಲ್, ‘‘ಎಷ್ಟು ಬಾರಿ ಅದಾನಿ ಜೊತೆ ವಿದೇಶ ಪ್ರವಾಸ ಕೈಗೊಂಡಿದ್ದೀರಿ’’ ಎಂದೂ ಪ್ರಧಾನಿಯನ್ನು ಪ್ರಶ್ನಿಸಿದರು. ಕಳೆದ 20 ವರ್ಷಗಳಲ್ಲಿ ಅದಾನಿ ಬಿಜೆಪಿಗೆ ಎಷ್ಟು ದುಡ್ಡು ಕೊಟ್ಟಿದ್ದಾರೆ ಎಂಬ ಗಂಭೀರ ಪ್ರಶ್ನೆಯನ್ನೂ ಎತ್ತಿದರು. ಅದಾನಿ ಸಮೂಹದ ಷೇರುಗಳು ಕುಸಿಯುತ್ತಿದ್ದು, ಅದರಲ್ಲಿ ಎಲ್‌ಐಸಿ ಹೂಡಿಕೆ ಮಾಡಿರುವ ಜನರ ದುಡ್ಡು ಅಪಾಯದಲ್ಲಿರುವ ಹೊತ್ತಲ್ಲಿಯೂ ಮಾತನಾಡದ ಪ್ರಧಾನಿ ಈಗ ರಾಹುಲ್ ಎತ್ತಿರುವ ಪ್ರಶ್ನೆಗಳ ವಿಚಾರದಲ್ಲಿಯೂ ಮೌನವಹಿಸಿದ್ದಾರೆ. ರಾಜ್ಯಸಭೆಯಲ್ಲಿ ಮಾತನಾಡಿ ಸರಕಾರದ ಸಾಧನೆಗಳ ಬಗ್ಗೆ ಬಣ್ಣಿಸಿರುವ ಅವರು, ದೇಶದ ಜನರ ಪ್ರಶ್ನೆಯಂತಿರುವ ಪ್ರತಿಪಕ್ಷದ ಪ್ರಶ್ನೆಗೆ ಉತ್ತರಿಸಿಲ್ಲ. ಕೆಲವರ ವರ್ತನೆ ಮತ್ತು ಭಾಷೆಯಿಂದ ದೇಶಕ್ಕೆ ನಿರಾಸೆಯಾಗಿದೆ ಎಂದಿದ್ದಾರೆ. ನೇರ ಪ್ರಶ್ನೆಗೆ ನೇರ ಉತ್ತರ ಕೊಡದೆ ಎಂದಿನಂತೆ ಭಾವನಾತ್ಮಕ ಮಾತುಗಳ ಮೊರೆ ಹೋಗಿದ್ದಾರೆ.
ಕೊಲ್ಲುವ ಮಾತು

ದಿಲ್ಲಿಯ ಜಂತರ್ ಮಂತರ್‌ನಲ್ಲಿ ಹಿಂದುತ್ವ ಗುಂಪುಗಳು ಸೇರಿದ್ದ ಕಾರ್ಯಕ್ರಮದಲ್ಲಿ ಮತ್ತೆ ಕ್ರೈಸ್ತರು ಹಾಗೂ ಮುಸಲ್ಮಾನರ ಹತ್ಯಾಕಾಂಡಕ್ಕೆ ಕರೆ ಕೊಡಲಾಗಿದೆ. ಕಾವಿಧಾರಿಯೊಬ್ಬ ನೀವು ಯಾವಾಗ ಮುಸ್ಲಿಮರನ್ನೂ, ಕ್ರಿಶ್ಚಿಯನ್ನರನ್ನೂ ಕೊಲ್ಲುತ್ತೀರಿ ಎಂದು ಹಿಂದೂಗಳನ್ನು ನೇರವಾಗಿ ಕೇಳಿದ್ದಾನೆ. ತಲವಾರು, ಕತ್ತಿ, ಬಂದೂಕುಗಳನ್ನು ಮನೆಮನೆಗಳಲ್ಲೂ ಶೇಖರಿಸಿ ಎಂದೂ ಆತ ಕರೆಕೊಟ್ಟಿದ್ದಾನೆ. ತಮಾಷೆಯೆಂದರೆ, ದಿಲ್ಲಿ ಪೊಲೀಸರು ಮಾತ್ರ ಈ ಭಾಷಣ ವರದಿ ಮಾಡಿದ ಪೋರ್ಟಲ್ ಒಂದಕ್ಕೆ ನೋಟಿಸ್ ಕೊಟ್ಟು, ಪ್ರಚೋದನಾಕಾರಿ ಪೋಸ್ಟ್ ಹಾಕಿದರೆ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ. ಇವೆಲ್ಲವೂ ಸರಕಾರಕ್ಕೆ ಗೊತ್ತಿಲ್ಲದೆ ಇರುತ್ತದೆಯೆ? ನ್ಯಾಯಕ್ಕಾಗಿ ಹೋರಾಡುವವರನ್ನು, ಸೌಹಾರ್ದದ ಕರೆ ಕೊಡುವವರನ್ನು ಜೈಲಿಗಟ್ಟುವ ಸರಕಾರ, ಇಂತಹ ಹಿಂಸಾತ್ಮಕ ಭಾಷಣದ ಬಗ್ಗೆ ಮೌನವಹಿಸಿರುವುದೇಕೆ? ಹಾಗಾದರೆ ಈ ಸರಕಾರ ನಿಜವಾಗಿ ಏನು ಬಯಸುತ್ತಿದೆ? ರಾಷ್ಟ್ರ ರಾಜಧಾನಿಯಲ್ಲಿ ಹಾಡಹಗಲೇ ಹತ್ಯಾಕಾಂಡಕ್ಕೆ ಕರೆಕೊಟ್ಟವರ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ನಮ್ಮ ದೇಶ ವಿಶ್ವಗುರು ಆಗುತ್ತದೆಯೇ? ಆಳುವವರೇ ಇದಕ್ಕೆ ಉತ್ತರಿಸಬೇಕಾಗಿದೆ.
ಟರ್ಕಿ ಭೂಕಂಪ

ದಶಕದಲ್ಲೇ ಕಂಡಿರದಂತಹ ಭೀಕರ ಭೂಕಂಪಕ್ಕೆ ಟರ್ಕಿ ಮತ್ತು ಸಿರಿಯಾ ತತ್ತರಿಸಿವೆ. ಸಾವಿನ ಸಂಖ್ಯೆ 21,000 ದಾಟಿದೆ. ಅಲ್ಲಿನ ವಿನಾಶದ ದೃಶ್ಯಗಳನ್ನು ನೋಡಿದರೆ ಎಂತಹ ಕಲ್ಲು ಹೃದಯವೂ ಕರಗಿ ಹೋಗುತ್ತದೆ. ಭಾರತ ಸೇರಿದಂತೆ ವಿಶ್ವದ ಬಹುತೇಕ ರಾಷ್ಟ್ರಗಳು ನೆರವಿಗೆ ಧಾವಿಸಿವೆ. ಕೇರಳ ರಾಜ್ಯವೂ 10 ಕೋಟಿ ರೂ. ನೆರವು ಘೋಷಿಸಿದೆ. ಉದ್ಯಮ ಪ್ರವಾಸಕ್ಕೆ ತರೆಳಿದ್ದ ಬೆಂಗಳೂರು ಮೂಲದ ಕಂಪೆನಿಯ ಸಿಬ್ಬಂದಿಯೊಬ್ಬರು ಕಾಣೆಯಾಗಿದ್ದಾರೆ. ಭೂಕಂಪವಾದ ಬಳಿಕ ಸಿರಿಯಾದಲ್ಲಿ ಜನಿಸಿದ ಮಗುವೊಂದು ಅಚ್ಚರಿಯೆಂಬಂತೆ ಬದುಕುಳಿದಿದೆ. ತಾಯಿತಂದೆ ಮತ್ತು ಒಡಹುಟ್ಟಿದವರನ್ನು ಮಗು ಕಳೆದುಕೊಂಡಿದೆ. ಈ ಮಹಾ ವಿಪತ್ತಿನ ಸಂತ್ರಸ್ತರ ಬದುಕನ್ನು ಮತ್ತೆ ಕಟ್ಟಿ ನಿಲ್ಲಿಸುವ ಬಹುದೊಡ್ಡ ಸವಾಲು ಟರ್ಕಿ ಹಾಗೂ ಸಿರಿಯಾ ಮುಂದಿದೆ. ರಾಜಕೀಯ ಬದಿಗಿಟ್ಟು ಈ ಕೆಲಸ ನಡೆಯಬೇಕಾಗಿದೆ.
ಮುಷರಫ್,ವಾಣಿ ಜಯರಾಂ ನಿಧನ

ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ದೀರ್ಘ ಕಾಲದ ಅಸ್ವಸ್ಥತೆ ಬಳಿಕ ನಿಧನರಾದರು. 1999ರಲ್ಲಿ ಆಗಿನ ಪ್ರಧಾನಿ ನವಾಜ್ ಷರೀಫ್ ಅವರನ್ನು ಪದಚ್ಯುತಗೊಳಿಸಿ ಪಾಕಿಸ್ತಾನದ ಆಡಳಿತ ಚುಕ್ಕಾಣಿ ಹಿಡಿದಿದ್ದ ಮುಷರಫ್, 2013ರಲ್ಲಿ ಷರೀಫ್ ವಿರುದ್ಧವೇ ಸೋಲಬೇಕಾಯಿತು. ದೇಶದ್ರೋಹ ಪ್ರಕರಣದಲ್ಲಿ 2019ರಲ್ಲಿ ಅವರಿಗೆ ಮರಣದಂಡನೆ ಶಿಕ್ಷೆ ಘೋಷಿಸಲಾಯಿತಾದರೂ ಕಡೆಗೆ ನ್ಯಾಯಾಲಯವೇ ರದ್ದುಗೊಳಿಸಿತ್ತು. ಮೂರು ಬಾರಿ ಅವರ ಹತ್ಯೆ ಯತ್ನಗಳು ನಡೆದಿದ್ದವೆನ್ನಲಾಗುತ್ತದೆ. 2016ರಿಂದ ಚಿಕಿತ್ಸೆಗಾಗಿ ದುಬೈನಲ್ಲಿ ನೆಲೆಸಿದ್ದ ಅವರು, ಅಲ್ಲಿಯೇ ಕೊನೆಯುಸಿರೆಳೆದರು. ದಿಲ್ಲಿಯಲ್ಲಿ 1943ರಲ್ಲಿ ಜನಿಸಿದ್ದರು. ಅವರ ಕುಟುಂಬ 1947ರಲ್ಲಿ ಕರಾಚಿಗೆ ವಲಸೆ ಹೋಗಿತ್ತು. 1964ರಲ್ಲಿ ಮುಷರಫ್ ಪಾಕ್ ಸೇನೆ ಸೇರಿದ್ದರು. 1999ರ ಕಾರ್ಗಿಲ್ ಅತಿಕ್ರಮಣದ ಹಿಂದಿದ್ದವರು ಇದೇ ಮುಷರಫ್. ಅಂತಹ ಸೇನಾ ದಂಡನಾಯಕ ಬಳಿಕ ಆ ದೇಶದ ಸರ್ವಾಧಿಕಾರಿಯೇ ಆದರು. ಆದರೆ ಕೊನೆಗೆ ಬೇರೊಂದು ದೇಶದಲ್ಲಿ ಅನಾಮಿಕರಂತೆ ಕೊನೆಯುಸಿರೆಳೆದರು. ಪದ್ಮಭೂಷಣ ಪುರಸ್ಕೃತ ಖ್ಯಾತ ಗಾಯಕಿ ವಾಣಿ ಜಯರಾಂ ಚೆನ್ನೈನ ನಿವಾಸದಲ್ಲಿ ನಿಧನರಾದರು. ಮೂಲತಃ ತಮಿಳುನಾಡಿನ ವಾಣಿ ಜಯರಾಮ್ ಅವರು ತಮ್ಮ ಐದು ದಶಕಗಳ ವೃತ್ತಿ ಬದುಕಿನಲ್ಲಿ ಕನ್ನಡವೂ ಸೇರಿದಂತೆ 19 ಭಾಷೆಗಳ ಸಾವಿರಕ್ಕೂ ಹೆಚ್ಚು ಸಿನೆಮಾಗಳಿಗೆ 10 ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ. ಅವರ ಪತಿ 2018ರಲ್ಲಿ ತೀರಿಕೊಂಡಿದ್ದು, ಒಬ್ಬರೇ ವಾಸಿಸುತ್ತಿದ್ದ ಅವರು ಕೋಣೆಯೊಳಗೆ ಮಲಗಿದ್ದಲ್ಲಿಯೇ ಸಾವನ್ನಪ್ಪಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.







