ಶಿವಾಜಿ ಬಗ್ಗೆ ಹೇಳಿಕೆಗಳ ಕುರಿತು ವಿವಾದದ ಬಳಿಕ ಮಹಾರಾಷ್ಟ್ರ ರಾಜ್ಯಪಾಲ ಹುದ್ದೆ ತೊರೆದ ಬಿ.ಸಿ.ಕೋಶ್ಯಾರಿ
ನೂತನ ರಾಜ್ಯಪಾಲರಾಗಿ ರಮೇಶ್ ಬೈಸ್ ನೇಮಕ

ಹೊಸದಿಲ್ಲಿ,ಫೆ.12: ಜಾರ್ಖಂಡ್ ರಾಜ್ಯಪಾಲರಾಗಿದ್ದ ರಮೇಶ್ ಬೈಸ್ ಅವರನ್ನು ಮಹಾರಾಷ್ಟ್ರದ ನೂತನ ರಾಜ್ಯಪಾಲರಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ರವಿವಾರ ನೇಮಕಗೊಳಿಸಿದ್ದಾರೆ.
ಮಹಾರಾಷ್ಟ್ರದ ರಾಜ್ಯಪಾಲರಾಗಿದ್ದ ಭಗತಸಿಂಗ್ ಕೋಶ್ಯಾರಿ ಅವರು ಹುದ್ದೆಗೆ ಸಲ್ಲಿಸಿದ್ದ ರಾಜೀನಾಮೆಯನ್ನು ರಾಷ್ಟ್ರಪತಿಗಳು ಅಂಗೀಕರಿಸಿದ್ದಾರೆ. ಕೋಶ್ಯಾರಿ ಮಹಾನ್ ನಾಯಕರ ಕುರಿತು ತನ್ನ ವಿವಾದಾತ್ಮಕ ಹೇಳಿಕೆಗಳಿಂದ ಮರಾಠರ ಭಾವನೆಗಳಿಗೆ ಧಕ್ಕೆಯನ್ನುಂಟು ಮಾಡಿದ್ದಾರೆ ಎಂದು ಆರೋಪಿಸಿದ್ದ ಪ್ರತಿಪಕ್ಷಗಳ ನಾಯಕರು ರಾಜಭವನದಿಂದ ಅವರ ನಿರ್ಗಮನವನ್ನು ಸ್ವಾಗತಿಸಿದ್ದಾರೆ.
80 ಹರೆಯದ ಕೋಶ್ಯಾರಿ ತಾನು ರಾಜ್ಯಪಾಲ ಹುದ್ದೆಯಿಂದ ಕೆಳಗಿಳಿಯಲು ಬಯಸಿರುವುದಾಗಿ ಕಳೆದ ತಿಂಗಳು ಪ್ರಧಾನಿ ನರೇಂದ್ರ ಮೋದಿಯವರಿಗೆ ತಿಳಿಸಿದ್ದರು.
ರಾಜ್ಯಪಾಲ ಕೋಶ್ಯಾರಿ ಅವರು ತನ್ನ ಉಳಿದ ಜೀವನವನ್ನು ಓದಲು,ಬರೆಯಲು ಮತ್ತು ವಿರಾಮದ ಚಟುವಟಿಕೆಗಳಲ್ಲಿ ಕಳೆಯಲು ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ ಎಂದು ರಾಜಭವನವು ಹೇಳಿಕೆಯಲ್ಲಿ ತಿಳಿಸಿದೆ.
ಹಿರಿಯ ಆರೆಸ್ಸೆಸ್ ನಾಯಕ ಕೋಶ್ಯಾರಿ ಮುಖ್ಯಮಂತ್ರಿಯಾಗಿ ಮತ್ತು ಸಂಸತ್ತಿನ ಉಭಯ ಸದನಗಳ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. 2019ರಲ್ಲಿ ಮಹಾರಾಷ್ಟ್ರದ ರಾಜ್ಯಪಾಲರಾಗಿ ನೇಮಕಗೊಂಡಿದ್ದ ಅವರು ತನ್ನ ಅಧಿಕಾರಾವಧಿಯಲ್ಲಿ ಉದ್ಧವ್ ಠಾಕ್ರೆ ಸರಕಾರದ ಜೊತೆಗೆ ಹಲವಾರು ಕಿತ್ತಾಟಗಳು ಮತ್ತು ತನ್ನ ವಿವಾದಾತ್ಮಕ ಹೇಳಿಕೆಗಳಿಂದ ಆಗಾಗ್ಗೆ ಸುದ್ದಿಯಾಗುತ್ತಲೇ ಇದ್ದರು.
ಕೋವಿಡ್ ಸಾಂಕ್ರಾಮಿಕದ ಬಳಿಕ ದೇವಸ್ಥಾನಗಳ ಪುನರಾರಂಭ, ಡೆಹ್ರಾಡೂನ್ ಭೇಟಿಗೆ ತನಗೆ ಸರಕಾರಿ ವಿಮಾನ ಒದಗಿಸಲು ನಿರಾಕರಣೆ ಮತ್ತು ಮುಂಬೈನ ಸಾಕಿನಾಕಾದಲ್ಲಿ ಮಹಿಳೆಯ ಅತ್ಯಾಚಾರ ಮತ್ತು ಹತ್ಯೆ ಬಳಿಕ ವಿಶೇಷ ವಿಧಾನಸಭಾ ಅಧಿವೇಶನ ಸೇರಿದಂತೆ ಹಲವರು ವಿಷಯಗಳಲ್ಲಿ ಉದ್ಧವ್ ಠಾಕ್ರೆ ನೇತೃತ್ವದ ಸರಕಾರ ಮತ್ತು ರಾಜಭವನದ ನಡುವೆ ಸಂಘರ್ಷಗಳು ನಡೆದಿದ್ದವು.
ಕೋಶ್ಯಾರಿ ಕಳೆದ ವರ್ಷದ ನವಂಬರ್ನಲ್ಲಿ ಛತ್ರಪತಿ ಶಿವಾಜಿ ಮಹಾರಾಜರು ‘ಹಳೆಯ ಕಾಲದ ಐಕಾನ್ ’ಆಗಿದ್ದಾರೆ ಎಂಬ ಹೇಳಿಕೆಯನ್ನು ನೀಡುವ ಮೂಲಕ ವಿವಾದದ ಕಿಡಿಯನ್ನು ಹೊತ್ತಿಸಿದ್ದರು. ರಾಜ್ಯಪಾಲರು ಮರಾಠಾ ನಾಯಕನನ್ನು ಅವಮಾನಿಸಿದ್ದಾರೆ ಎಂದು ಪ್ರತಿಪಕ್ಷಗಳು ಆಕ್ರೋಶ ವ್ಯಕ್ತಪಡಿಸಿದಾಗ ಬಿಕ್ಕಟ್ಟು ಶಮನಿಸಲು ಹಿರಿಯ ಬಿಜೆಪಿ ನಾಯಕರು ರಂಗಪ್ರವೇಶ ಮಾಡುವಂತಾಗಿತ್ತು. ಅದಕ್ಕೂ ಮುನ್ನ ಗುಜರಾತಿಗಳು ಮತ್ತು ರಾಜಸ್ಥಾನಿಗಳು ಮಹಾರಾಷ್ಟ್ರದಿಂದ ನಿರ್ಗಮಿಸಿದರೆ ರಾಜ್ಯದಲ್ಲಿ ಹಣವೇ ಇರುವುದಿಲ್ಲ ಎಂದು ಹೇಳುವ ಮೂಲಕ ಕೋಶ್ಯಾರಿ ಇನ್ನೊಂದು ವಿವಾದಕ್ಕೆ ಕಾರಣರಾಗಿದ್ದರು.
ನೂತನ ರಾಜ್ಯಪಾಲರ ನೇಮಕವನ್ನು ಸ್ವಾಗತಿಸಿರುವ ಮಾಜಿ ಮಹಾರಾಷ್ಟ್ರ ಸಚಿವ ಹಾಗೂ ಶಿವಸೇನೆಯ ಠಾಕ್ರೆ ಬಣದ ನಾಯಕ ಆದಿತ್ಯ ಠಾಕ್ರೆಯವರು,ಇದು ಮಹಾರಾಷ್ಟ್ರಕ್ಕೆ ಸಿಕ್ಕಿರುವ ‘ದೊಡ್ಡ ಗೆಲುವು ’ಆಗಿದೆ ಎಂದು ಬಣ್ಣಿಸಿದ್ದಾರೆ. ಕೋಶ್ಯಾರಿಯವರ ನಿರ್ಗಮನವನ್ನು ಶರದ ಪವಾರ್ ಅವರ ಎನ್ಸಿಪಿಯೂ ಸ್ವಾಗತಿಸಿದೆ.







