"ಶಿವಮೊಗ್ಗ ವಿಮಾನ ನಿಲ್ದಾಣ"ಕ್ಕೆ ಕುವೆಂಪು ಅವರ ಹೆಸರನ್ನೇ ಇಡಬೇಕು: ಬಿ.ಎಸ್.ಯಡಿಯೂರಪ್ಪ

ಶಿವಮೊಗ್ಗ: ವಿಮಾನ ನಿಲ್ದಾಣಕ್ಕೆ ನನ್ನ ಹೆಸರು ಇಡುವುದು ಬೇಡ. ರಾಷ್ಟ್ರಕವಿ ಕುವೆಂಪು ಅವರ ಹೆಸರನ್ನೇ ಇಡಬೇಕು. ಈ ಕುರಿತು ಸದನದಲ್ಲಿ ವಿಷಯ ಮಂಡಿಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸ್ಪಷ್ಟಪಡಿಸಿದರು.
ತುರ್ತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಯಡಿಯೂರಪ್ಪ ಅವರು, 20ನೇ ಶತಮಾನ ಕಂಡ ಈ ದೇಶದ ಶ್ರೇಷ್ಠ ಕವಿ. ಜ್ಞಾನಪೀಠ ಪ್ರಶಸ್ತಿ ಪಡೆದವರು. ರಾಜ್ಯದ ಗೀತೆಯನ್ನು ರಚಿಸಿದ ರಾಷ್ಟ್ರಕವಿ ಕುವೆಂಪು ಅವರ ಹೆಸರನ್ನು ಇಡಲು ತೀರ್ಮಾನ ಮಾಡಿದ್ದೇವೆ. ಅಧಿವೇಶನದಲ್ಲಿ ಸರ್ವಾನುಮತದಿಂದ ತೀರ್ಮಾನ ಕೈಗೊಂಡು ಕೇಂದ್ರ ಸರ್ಕಾರಕ್ಕೆ ಶಿಫಾರಸು ಕಳುಹಿಸಲಿದ್ದೇವೆ ಎಂದರು.
ಪ್ರಧಾನಿ ನರೇಂದ್ರ ಮೋದಿ ಅವರು ವಸುದೈವ ಕುಟುಂಬಕಂ ತತ್ವ ಸಾರುವತ್ತ ಕೆಲಸ ಮಾಡುತ್ತಿದ್ದಾರೆ. ಕುವೆಂಪು ಅವರು ವಿಶ್ವಮಾನವ ಸಂದೇಶವನ್ನು ಬರವಣಿಗೆ ಮೂಲಕ ಸಾರಿದ್ದರು. ಅದನ್ನು ಕಾರ್ಯರೂಪಕ್ಕೆ ತರಲು ಪ್ರಧಾನಿ ಮೋದಿ ಅವರು ಶ್ರಮಿಸುತ್ತಿದ್ದಾರೆ. ಕುವೆಂಪು ಅವರ ಹೆಸರನ್ನು ಇಡಬೇಕು ಎಂದು ಅಧಿವೇಶನದಲ್ಲಿ ತಾವೆ ಪ್ರಸ್ತಾಪಿಸುವುದಾಗಿ ಯಡಿಯೂರಪ್ಪ ತಿಳಿಸಿದರು.
ಫೆ.27ರಂದು ನರೇಂದ್ರ ಮೋದಿ ಅವರು ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನೆಗೆ ಆಗಮಿಸುವುದು ಖಚಿತವಾಗಿದೆ. ಪ್ರಧಾನಿ ಮೋದಿ ಅವರೆ ಕುವೆಂಪು ಅವರ ಹೆಸರು ಘೋಷಣೆ ಮಾಡಬೇಕು ಎಂಬುದು ತಮ್ಮ ಅಪೇಕ್ಷ ಎಂದರು.
ಸುದ್ದಿಗೋಷ್ಠಿಯಲ್ಲಿ ಸಂಸದ ಬಿ.ವೈ.ರಾಘವೇಂದ್ರ ಉಪಸ್ಥಿತರಿದ್ದರು.







