ರಾಹುಲ್ ಗಾಂಧಿ ಮೊಣಕಾಲು ನೋವಿನಿಂದಾಗಿ ಭಾರತ್ ಜೋಡೊ ಯಾತ್ರೆ ತ್ಯಜಿಸಲು ಮುಂದಾಗಿದ್ದರು: ಕೆ.ಸಿ. ವೇಣುಗೋಪಾಲ್

ತಿರುವನಂತಪುರ: ರಾಹುಲ್ ಗಾಂಧಿ ಅವರ ದೃಢಸಂಕಲ್ಪವನ್ನು ಶ್ಲಾಘಿಸಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಅವರು ಭಾರತ್ ಜೋಡೊ ಯಾತ್ರೆಯ ಆರಂಭಿಕ ದಿನಗಳಲ್ಲಿ, ಕಾಂಗ್ರೆಸ್ ಮಾಜಿ ಅಧ್ಯಕ್ಷರು ತೀವ್ರ ಮೊಣಕಾಲು ನೋವು ಎದುರಿಸಿದ್ದರು. ಆಗ ಅವರು ಯಾತ್ರೆಯನ್ನು ತ್ಯಜಿಸಲು ಯೋಚಿಸಿದ್ದರು ಎಂದು ಹೇಳಿದ್ದಾರೆ.
" ಕನ್ಯಾಕುಮಾರಿಯಿಂದ ಆರಂಭವಾದ ಯಾತ್ರೆಯು ಮೂರನೇ ದಿನ ಕೇರಳವನ್ನು ಪ್ರವೇಶಿಸಿದಾಗ ರಾಹುಲ್ ಅವರ ಮೊಣಕಾಲು ನೋವು ಉಲ್ಬಣಗೊಂಡಿತು. ಒಂದು ರಾತ್ರಿ, ಅವರು ಮೊಣಕಾಲು ನೋವಿನ ತೀವ್ರತೆಯ ಬಗ್ಗೆ ಹೇಳಲು ನನಗೆ ಕರೆ ಮಾಡಿದರು ಹಾಗೂ ಅವರ ಬದಲಿಗೆ ಬೇರೊಬ್ಬ ನಾಯಕ ಯಾತ್ರೆ ಕೈಗೊಳ್ಳಲು ರಾಹುಲ್ ಗಾಂಧಿ ಸೂಚಿಸಿದರು. ಪ್ರಿಯಾಂಕಾ ಗಾಂಧಿ ಕೂಡ ಕಾಂಗ್ರೆಸ್ ನ ಹಿರಿಯ ನಾಯಕರು ಯಾತ್ರೆ ಮುಂದುವರಿಸಲಿ ಎಂದು ಸಲಹೆ ನೀಡಿದ್ದರು. ಆದರೆ ರಾಹುಲ್ ಇಲ್ಲದ ಯಾತ್ರೆಯು ಕಾಂಗ್ರೆಸ್ ಕಾರ್ಯಕರ್ತರು ಹಾಗೂ ನಾಯಕರಿಗೆ ಊಹಿಸಲು ಅಸಾಧ್ಯವಾಗಿತ್ತು'' ಎಂದರು.
"ಅಂತಿಮವಾಗಿ, ರಾಹುಲ್ ಗಾಂಧಿ ಸೂಚಿಸಿದ ಫಿಸಿಯೋಥೆರಪಿಸ್ಟ್ ಅವರ ವೈದ್ಯಕೀಯ ತಂಡವನ್ನು ಸೇರಿಕೊಂಡು ಅವರಿಗೆ ಚಿಕಿತ್ಸೆ ನೀಡಿದರು. ದೇವರ ದಯೆಯಿಂದ ಅವರ ನೋವು ವಾಸಿಯಾಗಿದೆ" ಎಂದು ಕೇರಳ ಕಾಂಗ್ರೆಸ್ ಕಚೇರಿಯಲ್ಲಿ ಕೇರಳದ ಭಾರತ್ ಜೋಡೊ ಯಾತ್ರಿಗಳನ್ನು ಗೌರವಿಸಲು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿಗೆ ಆಪ್ತರಾಗಿರುವ ವೇಣುಗೋಪಾಲ್ ಹೇಳಿದರು.





