ಸಿರಿಯಾ ಭೂಕಂಪಪೀಡಿತ ಪ್ರದೇಶದಿಂದ ಒಂದೇ ಕುಟುಂಬದ ಐವರ ರಕ್ಷಣೆ: ಗೋಗರೆತದ ನಡುವೆ ಆನಂದ ಕಣ್ಣೀರು
ಇದ್ಲಿಬ್: ಸಿರಿಯಾ ಮತ್ತು ಟರ್ಕಿಯಲ್ಲಿ ಸಂಭವಿಸಿದ ಭಾರಿ ಭೂಕಂಪದಿಂದ ಧರೆಗುರುಳಿರುವ ಕಟ್ಟಡಗಳ ಅವಶೇಷಗಳಡಿ ಸಿಲುಕಿರುವ ಸಂತ್ರಸ್ತರನ್ನು ರಕ್ಷಿಸುವ ಕಾರ್ಯಾಚರಣೆಯಲ್ಲಿ ಸಾವಿರಾರು ರಕ್ಷಣಾ ಸಿಬ್ಬಂದಿ ಭಾಗವಹಿಸಿದ್ದು, ಈ ನಡುವೆ ಪವಾಡಸದೃಶವಾಗಿ ಪಾರಾಗಿರುವ ಪ್ರಕರಣಗಳು ವರದಿಯಾಗತೊಡಗಿವೆ. ಇಂತಹುದೇ ಒಂದು ಪ್ರಕರಣದಲ್ಲಿ ಪಶ್ಚಿಮ ಸಿರಿಯಾದ ಇದ್ಲಿಬ್ ಪ್ರಾಂತ್ಯದಲ್ಲಿ ಒಂದೇ ಕುಟುಂಬದ ಎಲ್ಲ ಸದಸ್ಯರನ್ನು ರಕ್ಷಿಸಿರುವ ಘಟನೆ ಈ ವಾರಾರಂಭದಲ್ಲಿ ನಡೆದಿದೆ ಎಂದು ndtv.com ವರದಿ ಮಾಡಿದೆ.
ಈ ರಕ್ಷಣಾ ಕಾರ್ಯಾಚರಣೆಯಲ್ಲಿ ಒಂದೇ ಕುಟುಂಬದ ಮೂವರು ಮಕ್ಕಳು ಹಾಗೂ ಇಬ್ಬರು ವಯಸ್ಕರನ್ನು ರಕ್ಷಿಸಲಾಗಿದ್ದು, ಈ ಸಂದರ್ಭದಲ್ಲಿ ರಕ್ಷಣಾ ಕಾರ್ಯಾಚರಣೆ ಪ್ರದೇಶದಲ್ಲಿ ನೆರೆದಿದ್ದ ಜನಸಮೂಹವು ಸಂಭ್ರಮ ವ್ಯಕ್ತಪಡಿಸಿ, "ದೇವರು ದೊಡ್ಡವನು" ಎಂಬ ಘೋಷಣೆ ಕೂಗಿತು. ಈ ವಿಡಿಯೊವನ್ನು ಸಿರಿಯಾ ನಾಗರಿಕ ರಕ್ಷಣಾ ಸ್ವಯಂಸೇವಕರ ಸಂಘಟನೆಯಾದ 'The White Helmets' ಹಂಚಿಕೊಂಡಿದೆ.
ಈ ಕುರಿತು, "ನಿಜವಾದ ಪವಾಡ.. ಸಂತಸದ ಧ್ವನಿಗಳು ಆಕಾಶವನ್ನು ಮುಟ್ಟುತ್ತಿವೆ.. ನಂಬಿಕೆಯನ್ನೂ ಮೀರಿದ ಸಂತಸ. ಫೆಬ್ರವರಿ 7, ಮಂಗಳವಾರ ಮಧ್ಯಾಹ್ನದಂದು ಸಿರಿಯಾದ ಪಶ್ಚಿಮ ಇದ್ಲಿಬ್‌ನ ಬಿಸ್ನಿಯಾ ಗ್ರಾಮದಲ್ಲಿನ ಮನೆಯ ಅವಶೇಷಗಳಡಿಯಲ್ಲಿ ಸಿಲುಕಿದ್ದ ಸಂಪೂರ್ಣ ಕುಟುಂಬವನ್ನು ರಕ್ಷಿಸಲಾಗಿದೆ" ಎಂದು #Idlib, #Syria, #earthquake ಹ್ಯಾಶ್ ಟ್ಯಾಗ್ ಬಳಸಿ The White Helmet ಟ್ವೀಟ್ ಮಾಡಿದೆ.
ಈ ವಿಡಿಯೊದಲ್ಲಿ ರಕ್ಷಣಾ ಕಾರ್ಯಕರ್ತರು ಮಕ್ಕಳನ್ನು ಆ್ಯಂಬುಲೆನ್ಸ್ ಒಂದಕ್ಕೆ ಕರೆ ತರುತ್ತಿದ್ದಾರೆ. ಹಾಗೆಯೇ ವಯಸ್ಕರನ್ನು ಪತನಗೊಂಡಿರುವ ಕಟ್ಟಡದಡಿಯಿಂದ ಸ್ಟ್ರೆಚರ್‌ಗಳಲ್ಲಿ ಹೊರ ತರುತ್ತಿರುವುದು ಸೆರೆಯಾಗಿದೆ. ಈ ರಕ್ಷಣಾ ಕಾರ್ಯಾಚರಣೆಯು ನೆರೆದಿದ್ದ ಜನಸಮೂಹದಲ್ಲಿ ಭಾರಿ ಸಂಭ್ರಮಕ್ಕೆ ಕಾರಣವಾಯಿತು. ಕಳೆದ ಸೋಮವಾರ 7.8 ಕಂಪನಾಂಕ ತೀವ್ರತೆಯೊಂದಿಗೆ ಸಂಭವಿಸಿದ್ದ ಭೂಕಂಪದಲ್ಲಿ ಈವರೆಗೆ 28,000 ಮಂದಿ ಮೃತಪಟ್ಟಿದ್ದು, ಲಕ್ಷಾಂತರ ಮಂದಿ ನಿರ್ವಸತಿಗರಾಗಿದ್ದಾರೆ.
A true miracle...the sounds of joy embrace the sky... joy beyond belief.
— The White Helmets (@SyriaCivilDef) February 7, 2023
An entire family was rescued from under the rubble of their house this afternoon, Tuesday, February 7, in the village of Bisnia, west of #Idlib.#Syria #earthquake pic.twitter.com/Cb7kXLiMjT