ಆಂಧ್ರಪ್ರದೇಶದ ನೂತನ ರಾಜ್ಯಪಾಲರಾಗಿ ನೇಮಕಗೊಂಡ ಕನ್ನಡಿಗ ನ್ಯಾ. ಎಸ್. ಅಬ್ದುಲ್ ನಝೀರ್ ಪರಿಚಯ

ಸುಪ್ರೀಂ ಕೋರ್ಟ್ ನ ನಿವೃತ್ತ ನ್ಯಾಯಾಧೀಶ, ಕನ್ನಡಿಗ, ನ್ಯಾಯಮೂರ್ತಿ ಎಸ್. ಅಬ್ದುಲ್ ನಝೀರ್ ಅವರನ್ನು ಆಂಧ್ರಪ್ರದೇಶದ ನೂತನ ರಾಜ್ಯಪಾಲರನ್ನಾಗಿ ರಾಷ್ರಪತಿ ದ್ರೌಪದಿ ಮುರ್ಮು ರವಿವಾರ ನೇಮಿಸಿದ್ದಾರೆ. 6 ವರ್ಷಗಳ ಸೇವೆಯ ಬಳಿಕ ಇದೇ ವರ್ಷ ವರ್ಷ ಜನವರಿ 4 ರಂದು ನ್ಯಾ. ಅಬ್ದುಲ್ ನಝೀರ್ ಅವರು ಸುಪ್ರೀಂ ಕೋರ್ಟ್ ನಿಂದ ನಿವೃತ್ತರಾಗಿದ್ದರು. ಈ ಅವಧಿಯಲ್ಲಿ ಅವರು 458 ಪೀಠಗಳ ಭಾಗವಾಗಿ 93 ತೀರ್ಪುಗಳನ್ನು ನೀಡಿದ್ದರು.
ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆ ಸಮೀಪದ ಕಾನ ಗ್ರಾಮದ ಜಸ್ಟಿಸ್ ಎಸ್. ಅಬ್ದುಲ್ ನಝೀರ್ ಅವರು ಜನವರಿ 5 , 1958 ರಂದು ಫಕೀರ್ ಸಾಬ್ ಹಾಗು ಹಮೀದಾಬಿ ದಂಪತಿಯ ಪುತ್ರನಾಗಿ ಜನಿಸಿದರು. ಇವರಿಗೆ ನಾಲ್ಕು ಸೋದರರು, ಒಬ್ಬರು ಸೋದರಿ. ಮೂಡುಬಿದಿರೆಯ ಅಲಂಗಾರಿನ ಸಂತ ಥೋಮಸ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ಜೈನ್ ಹೈಸ್ಕೂಲ್ ನಲ್ಲಿ ಪ್ರೌಢ ಶಿಕ್ಷಣ ಹಾಗು ಮಹಾವೀರ ಕಾಲೇಜಿನಲ್ಲಿ ಪದವಿ ಪಡೆದ ಅವರು ಮಂಗಳೂರಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿ ಪಡೆದರು.
ನ್ಯಾ.ನಝೀರ್ ಅವರು 1983 ರಲ್ಲಿ ಕರ್ನಾಟಕ ಹೈಕೋರ್ಟ್‌ನಲ್ಲಿ ವಕೀಲಿಕೆ ಆರಂಭಿಸಿದರು. ಎರಡು ದಶಕಗಳ ಕಾಲ ವಕೀಲರಾಗಿ ಸೇವೆ ಸಲ್ಲಿಸಿದ ಅವರು ಮೇ 2003 ರಲ್ಲಿ, ಕರ್ನಾಟಕ ಹೈಕೋರ್ಟ್ ನ ಹೆಚ್ಚುವರಿ ನ್ಯಾಯಾಧೀಶರಾಗಿ ನೇಮಕವಾದರು. ಒಂದು ವರ್ಷದ ಬಳಿಕ ಹೈಕೋರ್ಟ್ ನ ಖಾಯಂ ನ್ಯಾಯಾಧೀಶರಾದರು.
ಫೆಬ್ರವರಿ 2017 ರಲ್ಲಿ, ಅವರು ಸುಪ್ರೀಂಕೋರ್ಟ್ ನ್ಯಾಯಾಧೀಶರಾಗಿ ಪದೋನ್ನತಿ ಪಡೆದರು. ಹೈಕೋರ್ಟ್‌ನ ಮುಖ್ಯ ನ್ಯಾಯಾಧೀಶರಾಗದೆಯೇ ಸುಪ್ರೀಂ ಕೋರ್ಟ್ ಗೆ ಪದೋನ್ನತಿ ಪಡೆದ ಕೇವಲ ಮೂರನೇ ನ್ಯಾಯಾಧೀಶ ನ್ಯಾ. ನಝೀರ್ .
ಸುಪ್ರೀಂ ಕೋರ್ಟ್‌ನಲ್ಲಿ ಹಲವು ಮಹತ್ವದ ಪ್ರಕರಣಗಳ ತೀರ್ಪು ನೀಡಿದ ಪೀಠದ ಭಾಗವಾಗಿ ನ್ಯಾ. ನಝೀರ್ ಅವರು ಸುದ್ದಿಯಾಗಿದ್ದರು. ಆ ಪೈಕಿ ತ್ರಿವಳಿ ತಲಾಖ್ ಅಸಂವಿಧಾನಿಕ ಎಂದ ತೀರ್ಪು , ಅಯೋಧ್ಯೆ-ಬಾಬರಿ ಮಸೀದಿ ವಿವಾದದ ತೀರ್ಪು , ನೋಟು ನಿಷೇಧ ಕ್ರಮವನ್ನು ಎತ್ತಿ ಹಿಡಿದ ತೀರ್ಪು, ಖಾಸಗಿತನ ಮೂಲಭೂತ ಹಕ್ಕು ಎಂದ ತೀರ್ಪುಗಳು ಪ್ರಮುಖವಾದವುಗಳು. ಅವರು ನಿವೃತ್ತರಾಗುವ ಮೊದಲು ಅವರ ನೇತೃತ್ವದ ಸಾಂವಿಧಾನಿಕ ಪೀಠ 2016 ರ ಕೇಂದ್ರ ಸರಕಾರದ ನೋಟು ರದ್ದತಿ ತೀರ್ಮಾನವನ್ನು ಎತ್ತಿ ಹಿಡಿದಿತ್ತು.
ಗ್ರಾಮೀಣ ಪ್ರದೇಶದ ಸಾಮಾನ್ಯ ಕುಟುಂಬದಿಂದ ಬಂದ ನ್ಯಾ. ನಝೀರ್ ಅವರು ವಕೀಲರಾಗಿ ವೃತ್ತಿ ಜೀವನ ಆರಂಭಿಸಿ ಹಂತಹಂತವಾಗಿ ಮೇಲೇರುತ್ತಾ ನ್ಯಾಯಾಂಗದಲ್ಲಿ ಉನ್ನತ ಸ್ಥಾನಕ್ಕೆ ತಲುಪಿದವರು. ಅವರು ನಿವೃತ್ತರಾಗುವಾಗ ಸುಪ್ರೀಂ ಕೋರ್ಟ್ ನ ಮೂರನೇ ಅತ್ಯಂತ ಹಿರಿಯ ಜಡ್ಜ್ ಹಾಗು ಪ್ರತಿಷ್ಠಿತ ಸುಪ್ರೀಂ ಕೋರ್ಟ್ ಕೊಲಿಜಿಯಂ ನ ಸದಸ್ಯರಾಗಿದ್ದರು. ನ್ಯಾಯಾಂಗದಲ್ಲಿ ತಾನು ಕ್ರಮಿಸಿದ ಹಾದಿಯನ್ನು " ಒಂದು ಕನಸನ್ನೇ ಜೀವಿಸಿದ ಹಾಗೆ " ಎಂದವರು ನಿವೃತ್ತರಾಗುವಾಗ ಬಣ್ಣಿಸಿದ್ದರು.
ಅವರನ್ನು ಸುಪ್ರೀಂ ಕೋರ್ಟ್ ನಿಂದ ಬೀಳ್ಕೊಡುವಾಗ ದೇಶದ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಅವರು " ನ್ಯಾ. ಅಬ್ದುಲ್ ನಝೀರ್ ಅವರು ಅತ್ಯಂತ ಸರಳ ವ್ಯಕ್ತಿತ್ವದವರು. ತೀರಾ ಇತ್ತೀಚಿನವರೆಗೂ ಡ್ರೈವಿಂಗ್ ಲೈಸೆನ್ಸ್ ಹಾಗು ನ್ಯಾಯಾಧೀಶರ ಗುರುತಿನ ಚೀಟಿಗಳೇ ಅವರಿಗೆ ಐಡಿಗಳಾಗಿದ್ದವು. ಅವರು ಪಾಸ್ ಪೋರ್ಟ್ ಮಾಡಿದ್ದೇ 2019 ರಲ್ಲಿ. ಕೆಲವು ವಾರಗಳ ಹಿಂದೆ ಮಾಸ್ಕೊಗೆ ಹೋಗಿದ್ದೇ ಅವರ ಮೊದಲ ವಿದೇಶ ಪ್ರವಾಸ " ಎಂದು ಬಣ್ಣಿಸಿದ್ದರು.
ನಿವೃತ್ತರಾದ ಬಳಿಕ ಪತ್ನಿ ಸಮೀರಾ ಜೊತೆ ಬೆಂಗಳೂರಿನಲ್ಲಿ ವಾಸವಿದ್ದ ಅವರನ್ನು ಇದೀಗ ಆಂಧ್ರ ಪ್ರದೇಶದ ರಾಜ್ಯಪಾಲ ಹುದ್ದೆ ಅರಸಿಕೊಂಡು ಬಂದಿದೆ. ಈ ಹಿಂದೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಪಿ. ಸದಾಶಿವಂ ಅವರನ್ನು ಕೇರಳ ನ್ಯಾಯಾಧೀಶರಾಗಿ ನೇಮಿಸಲಾಗಿತ್ತು. ಅದಕ್ಕೂ ಮೊದಲು ಸುಪ್ರೀಂ ಕೋರ್ಟ್ ನ್ಯಾಯಾಧೀಶರಾಗಿ ನಿವೃತ್ತರಾದ ಫಾತಿಮಾ ಬೀವಿ ಅವರು ರಾಜ್ಯಪಾಲರಾಗಿ ನೇಮಕಗೊಂಡಿದ್ದರು.
ನ್ಯಾ. ನಝೀರ್ ಅವರ ಪುತ್ರ ಅಖಿಲ್ ಹಾಗು ಪುತ್ರಿ ಇರ್ಫಾನ ಕರ್ನಾಟಕ ಹೈಕೋರ್ಟ್ ನಲ್ಲಿ ವಕೀಲರಾಗಿದ್ದಾರೆ.







