ತಮಿಳುನಾಡು ರಸ್ತೆಗಳ ದುಃಸ್ಥಿತಿ ಕುರಿತು ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಮುಖ್ಯಮಂತ್ರಿ ಸ್ಟಾಲಿನ್ ಪತ್ರ

ಚೆನ್ನೈ: ಚೆನ್ನೈ ಹಾಗೂ ರಾಣಿಪೇಟ್ ರಾಷ್ಟ್ರೀಯ ಹೆದ್ದಾರಿಯನ್ನು ಸಂಪರ್ಕಿಸುವ ರಸ್ತೆ ದುಃಸ್ಥಿತಿ ಕುರಿತು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ (Tamil Nadu Chief Minister MK Stalin)ಶನಿವಾರ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರಿಗೆ ಪತ್ರ ಬರೆದಿದ್ದಾರೆ.
ರಸ್ತೆಯ ಸ್ಥಿತಿ ತುಂಬಾ ಹದಗೆಟ್ಟಿದೆ. ಹೀಗಾಗಿ ಇತ್ತೀಚೆಗೆ ನಾನು ಕೆಲವು ಜಿಲ್ಲೆಗಳಿಗೆ ರೈಲಿನಲ್ಲಿ ಭೇಟಿ ನೀಡಬೇಕಾದ ಪರಿಸ್ಥಿತಿ ಬಂತು ಎಂದು ಸ್ಟಾಲಿನ್ ಹೇಳಿದರು.
ರಸ್ತೆ ವಿಭಾಗವು ಚೆನ್ನೈ ಹಾಗೂ ಅದರ ಬಂದರುಗಳಿಂದ ಕಾಂಚೀಪುರಂ, ವೆಲ್ಲೂರು, ರಾಣಿಪೇಟ್, ಹೊಸೂರು ಮತ್ತು ಕೃಷ್ಣಗಿರಿಯ ಕೈಗಾರಿಕಾ ಕ್ಲಸ್ಟರ್‌ಗಳಿಗೆ “ಪ್ರಮುಖ ಸಂಪರ್ಕ” ಒದಗಿಸುತ್ತದೆ ಎಂದು ಹೇಳಿದ ಸ್ಟಾಲಿನ್, ಡಿಎಂಕೆ ಸಂಸದ ದಯಾನಿಧಿ ಮಾರನ್ ಅವರ ನಿರ್ದಿಷ್ಟ ಮನವಿಗೆ ಸಂಸತ್ತಿನಲ್ಲಿ ಕೇಂದ್ರ ಸಚಿವರು ನೀಡಿದ ಉತ್ತರ "ಬಹಳ ಸಾಮಾನ್ಯ" ಮತ್ತು "ಬದ್ಧತೆರಹಿತವಾಗಿತ್ತು ಎಂದರು.
"ರಾಜ್ಯದಲ್ಲಿ ಎನ್‌ಎಚ್‌ಎಐ ಯೋಜನೆಗಳನ್ನು ಬೆಂಬಲಿಸಲು ನಮ್ಮ ಸರಕಾರ ಕೈಗೊಂಡಿರುವ ಪ್ರಯತ್ನಗಳನ್ನು ನಿಮ್ಮ ಗಮನಕ್ಕೆ ತರಲು ನಾನು ಬಯಸುತ್ತೇನೆ. ರಾಯಧನದಿಂದ ವಿನಾಯಿತಿ ನೀಡುವುದು ಸೇರಿದಂತೆ ಸಾಧ್ಯವಿರುವ ಎಲ್ಲ ಸಹಾಯವನ್ನು ವಿಸ್ತರಿಸುವ ಮೂಲಕ ಚೆನ್ನೈ ಪೋರ್ಟ್‌ನಿಂದ ಮಧುರ್‌ವಾಯಲ್ ಎಲಿವೇಟೆಡ್ ಎಕ್ಸ್‌ಪ್ರೆಸ್‌ವೇ ಯೋಜನೆಯನ್ನು ಪುನರುಜ್ಜೀವನಗೊಳಿಸಲಾಗಿದೆ'' ಎಂದರು.





