ಯಾವುದೇ ಕ್ಷೇತ್ರದಲ್ಲಿ ಸ್ಪರ್ಧಿಸಿದರೂ ಗೆಲ್ಲುವೆ: ಸಿದ್ದರಾಮಯ್ಯ ವಿಶ್ವಾಸ
"ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಕುಮಾರಸ್ವಾಮಿ ಕಾರಣ"

ಬೆಂಗಳೂರು: ‘ಬಿಜೆಪಿವರಿಗೆ ನನ್ನನ್ನು ಕಂಡರೆ ಭಯ, ನಾನು ಎಲ್ಲಿ ನಿಂತರೂ ನಿಶ್ಚಿತವಾಗಿಯೂ ಗೆಲ್ಲುತ್ತೇನೆ. ಬಾದಾಮಿ ಅಥವಾ ಕೋಲಾರದಲ್ಲಿ ನಿಂತರೂ ಗೆಲ್ಲುತ್ತೇನೆ’ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ರವಿವಾರ ರಾಯಚೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಮೈಸೂರಿನ ವರುಣ ಕ್ಷೇತ್ರದಲ್ಲಿ ಸ್ಪರ್ಧಿಸುವಂತೆ ನನ್ನ ಪುತ್ರ ಶಾಸಕ ಯತೀಂದ್ರ ಒತ್ತಾಯ ಮಾಡುತ್ತಿದ್ದಾನೆ. ವರಿಷ್ಠರು ಸೂಚಿಸುವ ಕ್ಷೇತ್ರದಲ್ಲಿ ನಾನು ಸ್ಪರ್ಧಿಸುವ ತೀರ್ಮಾನ ಮಾಡಿದ್ದೇನೆ. ಬಿಜೆಪಿಯವರು ಭಯದಿಂದಲೇ ನನ್ನ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆಂದು ದೂರಿದರು.
ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಕಾರಣ ಕುಮಾರಸ್ವಾಮಿ. 2006ರಲ್ಲಿ ಬಿಜೆಪಿ ಜೊತೆ ಸೇರಿಕೊಂಡು ಸರಕಾರ ಮಾಡಿದರು. ಇದೀಗ ಅವರೇ ಸುಳ್ಳು ಹೇಳುತ್ತಿದ್ದಾರೆ. ಕಾಂಗ್ರೆಸ್, ಬಿಜೆಪಿಯ ‘ಬಿ ಟೀಮ್’ ಎಂದು ಪ್ರಚಾರ ಮಾಡುವ ಕುಮಾರಸ್ವಾಮಿಗೆ ನಾಚಿಕೆ ಆಗಬೇಕು. ಇವರಿಗೆ ಮಾನ-ಮಾರ್ಯಾದೆ ಇಲ್ಲ ಎಂದು ವಾಗ್ದಾಳಿ ನಡೆಸಿದರು.
ವಿಧಾನಸಭೆ ಚುನಾವಣೆಯಲ್ಲಿ ಗೆಲ್ಲುವ ಅಭ್ಯರ್ಥಿಗಳಿಗೆ ಟಿಕೆಟ್ ನೀಡುತ್ತೇವೆ. ಇನ್ನೂ 15 ದಿನಗಳಲ್ಲಿ ಎಲ್ಲ ಗೊಂದಲಕ್ಕೆ ತೆರೆ ಎಳೆಯುತ್ತೇವೆ. ಅರಸಿಕೇರೆ ಶಾಸಕ ಶಿವಲಿಂಗೇಗೌಡ ಕಾಂಗ್ರೆಸ್ ಸೇರ್ಪಡೆಯಾಗಲಿದ್ದು, ಅವರು 100ಕ್ಕೆ ನೂರರಷ್ಟು ಗೆದ್ದು ಬರುತ್ತಾರೆ. ನಿಮಗೆ ಯಾವುದೇ ಅನುಮಾನ ಬೇಡ. ಈ ಅಧಿವೇಶನ ಬಳಿಕ ಅವರು ಪಕ್ಷಕ್ಕೆ ಸೇರ್ಪಡೆ ಆಗಬಹುದು ಎಂದು ಸ್ಪಷ್ಟಣೆ ನೀಡಿದರು.
ಇದನ್ನೂ ಓದಿ: ಗುಜರಾತಿನವರು ದಕ್ಷಿಣ ಕನ್ನಡದವರ ಬ್ಯಾಂಕುಗಳನ್ನು ನುಂಗಿ ನೀರು ಕುಡಿದರು: ಅಮಿತ್ ಶಾ ಹೇಳಿಕೆಗೆ ಸಿದ್ದರಾಮಯ್ಯ ತಿರುಗೇಟು







