ಎಚ್‍ಡಿಕೆ ಸಿಎಂ ಆದರೆ ಯುವಕರು, ಮಹಿಳೆಯರ ಶ್ರೇಯೋಭಿವೃದ್ಧಿ: ಟಿ.ಎ. ಶರವಣ

ಬೆಂಗಳೂರು: ಮುಂಬರಲಿರುವ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರ ಸ್ವಾಮಿ ಮುಖ್ಯಮಂತ್ರಿಯಾಗಲಿದ್ದು, ಇದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ’ ಎಂದು ಪರಿಷತ್ ಸದಸ್ಯ ಟಿ.ಎ. ಶರವಣ ಹೇಳಿದ್ದಾರೆ.
ರವಿವಾರ ನಗರದಲ್ಲಿ ಜೆಡಿಎಸ್ ಉಪಾಧ್ಯಕ್ಷರಾಗಿ ಡಾ.ಬಿ.ಎಂ. ಉಮೇಶ್ ಕುಮಾರ್ ನೇಮಿಸಿರುವ ಹಿನ್ನೆಲೆಯಲ್ಲಿ ವಿಶ್ವಕರ್ಮ ಸಮಾಜದ ಮುಖಂಡರು ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಎಚ್‍ಡಿಕೆ ಸಿಎಂ ಆದರೆ ಯುವ ಸಮೂಹಕ್ಕೆ ಹೆಚ್ಚಿನ ಅವಕಾಶ ಕಲ್ಪಿಸಲಿದ್ದು, ರೈತರು, ಕೂಲಿ ಕಾರ್ಮಿಕರು, ಮಹಿಳೆಯರ ಶ್ರೇಯೋಭಿವೃದ್ಧಿಗೆ ಶ್ರಮಿಸಲಿದ್ದಾರೆ ಎಂದು ನುಡಿದರು.
‘ಆಡಳಿತಾರೂಢ ಬಿಜೆಪಿ ಹಾಗೂ ಅಧಿಕೃತ ವಿಪಕ್ಷ ಕಾಂಗ್ರೆಸ್ ಸೇರಿ ಎರಡು ರಾಷ್ಟ್ರೀಯ ಪಕ್ಷಗಳನ್ನು ಜನ ತಿರಸ್ಕಾರ ಮಾಡಲಿದ್ದು, ದೇವೇಗೌಡರ ಕೊನೆಯ ಆಸೆಯಂತೆ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡಲಿದ್ದಾರೆ ಎಂದು ಶರವಣ ಇದೇ ಸಂದರ್ಭದಲ್ಲಿ ಭರವಸೆ ವ್ಯಕ್ತಪಡಿಸಿದರು.
ವಿಶ್ವಕರ್ಮ ಪೀಠದ ಶಿವಸುಜ್ಞಾನ ತೀರ್ಥ ಸ್ವಾಮಿ ಮಾತನಾಡಿ, ಸಮಾಜಕ್ಕೆ ಒಳ್ಳೆಯದು ಮಾಡುವ ರಾಜಕೀಯ ಪಕ್ಷಗಳನ್ನು ನಾವು ಬೆಂಬಲಿಸುತ್ತೇವೆ. ನಮ್ಮ ಸಮಾಜಕ್ಕೆ ರಾಜಕೀಯವಾಗಿ ಹೆಚ್ಚು ಪ್ರಾತಿನಿಧ್ಯ ದೊರೆಯಬೇಕು ಎಂದು ನುಡಿದರು.
ಕಾರ್ಯಕ್ರಮದಲ್ಲಿ ವೈದ್ಯಕೀಯ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಕೆ.ಎಸ್.ಪ್ರಭಾಕರ್, ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ವ್ಯವಸ್ಥಾಪಕ ನಿರ್ದೇಶಕ ಬಿ.ಎಲ್.ವೇದಮೂರ್ತಿ, ವಾಣಿಜ್ಯ ತೆರಿಗೆ ಇಲಾಖೆ ಜಂಟಿ ಆಯುಕ್ತ ಎಸ್.ಮಾಳಿಗಾಚಾರ್ ಉಪಸ್ಥಿತರಿದ್ದರು.







