ನಮ್ಮ ರಾಜ್ಯದಲ್ಲಿ ಹುಟ್ಟಿ ಬೆಳೆದಿದ್ದರೂ, ಜಯಲಲಿತಾ ಕಾವೇರಿ ವಿಚಾರದಲ್ಲಿ ವಿರೋಧಿ: ಎಸ್.ಎಂ. ಕೃಷ್ಣ

ಬೆಂಗಳೂರು: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರು ನಮ್ಮ ರಾಜ್ಯದಲ್ಲಿ ಹುಟ್ಟಿ ಬೆಳೆದಿದ್ದರೂ, ತಮಿಳುನಾಡಿನಲ್ಲಿ ನೆಲಸಿರುವ ಕಾರಣದಿಂದ ಕಾವೇರಿ ವಿಚಾರದಲ್ಲಿ ತಮ್ಮನ್ನು ವಿರೋಧಿಸುತ್ತಿದ್ದರು ಎಂದು ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಹೇಳಿದರು.
ರವಿವಾರ ನಗರದ ಚಿತ್ರಕಲಾ ಪರಿಷತ್ತಿನ ಸಭಾಂಗಣದಲ್ಲಿ ‘ಕಾವೇರಿ ವಿವಾದ ಒಂದು ಚಾರಿತ್ರಿಕ ಹಿನ್ನೋಟ’ ಆಂಗ್ಲ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಕರುಣಾನಿಧಿ ಅವರ ಜೊತೆಯಲ್ಲಿ ಕಾವೇರಿ ನದಿ ನೀರು ಬಗ್ಗೆ ಚರ್ಚೆ ಮಾಡಿದ್ದೆ, ಅವರ ಬಹಳ ತಾಳ್ಮೆಯಿಂದ ಉಪಾಯ ಹೇಳಿಕೊಡುತ್ತಿದ್ದರು. ಆದರೆ, ಇದೇ ವಿಚಾರವಾಗಿ ಜಯಲಲಿತಾ ಅವರೊಂದಿಗೆ ಮಾತುಕತೆ ನಡೆಸಿದಾಗ ಕರ್ನಾಟಕವನ್ನು ವಿರೋಧಿಸಲೇ ಬರುತ್ತಿದ್ದರು ಎಂದರು.
ಕಾವೇರಿ ಜಲ ವಿವಾದವನ್ನು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಚಾಣಕ್ಷ್ಯ, ನಿಪಕ್ಷಪಾತದಿಂದ ಸಂಧಾನ ಮಾಡಿದರು. ಜತೆಗೆ, ನನ್ನ ಮತ್ತು ಜಯಲಲಿತಾ ಅವರ ನಡುವೆ ಮಧ್ಯಸ್ಥಿಕೆ ವಹಿಸಿದ್ದರು. ಆದರೂ, ಜಯಲಲಿತಾ ಅವರು ಯಾವುದೇ ಕಾರಣಕ್ಕೂ ಒಪ್ಪುತ್ತಿರಲಿಲ್ಲ. ಇದರಿಂದ ಸುಪ್ರಿಂಕೋರ್ಟ್ ಮೆಟ್ಟಲು ಹತ್ತಬೇಕಾಯಿತು ಎಂದರು.
ನಿವೃತ್ತ ಐಎಎಸ್ ಅಧಿಕಾರಿ ಚಿರಂಜೀವಿ ಸಿಂಗ್ ಮಾತನಾಡಿ, ಕಾವೇರಿ ವಿವಾದ ಬಗ್ಗೆ ಲೇಖಕ ಚಂದ್ರಶೇಖರ್ ಆಳವಾಗಿ ಅಧ್ಯಯನ ಮಾಡಿ ಬರೆದಿದ್ದಾರೆ. ಜತೆಗೆ, ಕಾವೇರಿ ವಿವಾದ ಎಸ್.ಎಂ.ಕೃಷ್ಣರವರು ಹತ್ತಿರದಿಂದ ಬಲ್ಲವರು. ಈಗ ಜನಸಂಖ್ಯೆ ಹೆಚ್ಚಳವಾಗಿದೆ, ನೀರು ಲಭ್ಯತೆ ಕಡಿಮೆ ಇದೆ. ನೀರು ಸದ್ಬಳಕೆ ಮತ್ತು ಸಂಗ್ರಹದ ಬಗ್ಗೆ ಚಿಂತನೆ ಮಾಡಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಕೃತಿಯ ಲೇಖಕ, ನಿವೃತ ಐಪಿಎಸ್ ಅಧಿಕಾರಿ ಸಿ.ಚಂದ್ರಶೇಖರ್, ಪತ್ರಕರ್ತ ಶೇಷ ಚಂದ್ರಿಕಾ, ರೊನಾಲ್ಡೊ ಆನಿಲ್ ಫೆರ್ನಾಂಡಿಸ್, ಕಾಡು ಮಲ್ಲೇಶ್ವರ ಗೆಳಯರ ಬಳಗ ಅಧ್ಯಕ್ಷ ಬಿ.ಕೆ.ಶಿವರಾಂ ಸೇರಿದಂತೆ ಪ್ರಮುಖರಿದ್ದರು.







