ಫೋನ್ ಕದ್ದಾಲಿಕೆ ಪ್ರಕರಣ: ಅಶೋಕ್ ಗೆಹ್ಲೋಟ್ ಸಹಾಯಕನಿಗೆ ದಿಲ್ಲಿ ಪೊಲೀಸರ ಬುಲಾವ್

ಹೊಸದಿಲ್ಲಿ,ಫೆ.12: ದಿಲ್ಲಿ ಪೊಲೀಸರು ಜುಲೈ 2020ರ ರಾಜಕೀಯ ಬಿಕ್ಕಟ್ಟಿನ ಸಂದರ್ಭದಲ್ಲಿಯ ಫೋನ್ ಕದ್ದಾಲಿಕೆ ಪ್ರಕರಣದಲ್ಲಿ ಸೋಮವಾರ ತಮ್ಮ ಮುಂದೆ ವಿಚಾರಣೆಗೆ ಹಾಜರಾಗುವಂತೆ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರ ವಿಶೇಷ ಕರ್ತವ್ಯಾಧಿಕಾರಿ ಲೋಕೇಶ್ ಶರ್ಮಾ ಅವರಿಗೆ ನೋಟಿಸ್ ಜಾರಿಗೊಳಿಸಿದ್ದಾರೆ.
ಶರ್ಮಾ ವಿರುದ್ಧ ಬಲವಂತದ ಕ್ರಮಕ್ಕೆ ಮಧ್ಯಂತರ ತಡೆಯಾಜ್ಞೆಯನ್ನು ತೆರವುಗೊಳಿಸುವಂತೆ ಕೋರಿ ದಿಲ್ಲಿ ಪೊಲೀಸ್ನ ಕ್ರೈಂ ಬ್ರಾಂಚ್ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ದಿಲ್ಲಿ ಉಚ್ಚ ನ್ಯಾಯಾಲಯವು ಫೆ.20ರಂದು ಕೈಗೆತ್ತಿಕೊಳ್ಳಲಿದ್ದು, ಅದಕ್ಕೂ ಮುನ್ನ ಈ ನೋಟಿಸ್ ಅನ್ನು ಜಾರಿಗೊಳಿಸಲಾಗಿದೆ. ಶರ್ಮಾ ಕೂಡ ಉಚ್ಚ ನ್ಯಾಯಾಲಯಕ್ಕೆ ಅರ್ಜಿಯನ್ನು ಸಲ್ಲಿಸಿದ್ದಾರೆ.
ಜೋಧಪುರದ ಬಿಜೆಪಿ ಸಂಸದ ಹಾಗೂ ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರು ಸಲ್ಲಿಸಿದ್ದ ದೂರಿನ ಮೇರೆಗೆ ದಿಲ್ಲಿ ಪೊಲೀಸರು 2021,ಮಾ.5ರಂದು ಶರ್ಮಾ ವಿರುದ್ಧ ಕ್ರಿಮಿನಲ್ ಒಳಸಂಚು ಮತ್ತು ಫೋನ್ ಕದ್ದಾಲಿಕೆ ಆರೋಪದಲ್ಲಿ ಎಫ್ಐಆರ್ ದಾಖಲಿಸಿಕೊಂಡಿದ್ದರು.
ತನ್ನ ವಿರುದ್ಧದ ಎಫ್ಐಆರ್ ಅನ್ನು ರದ್ದುಗೊಳಿಸುವಂತೆ ಕೋರಿ ಶರ್ಮಾ ಉಚ್ಚ ನ್ಯಾಯಾಲಯದ ಮೆಟ್ಟಿಲನ್ನೇರಿದ್ದು, 2021,ಜೂ.3ರಂದು ಅವರ ವಿರುದ್ಧ ಬಲವಂತದ ಕ್ರಮಕ್ಕೆ ತಡೆಯಾಜ್ಞೆಯನ್ನು ನೀಡಲಾಗಿತ್ತು.
ಇದು ಶರ್ಮಾಗೆ ದಿಲ್ಲಿ ಪೊಲೀಸರು ಜಾರಿಗೊಳಿಸಿರುವ ಆರನೇ ನೋಟಿಸ್ ಆಗಿದೆ ಎಂದು ಬಲ್ಲ ಮೂಲಗಳು ತಿಳಿಸಿವೆ.
2021,ಡಿ.6ರಂದು ಮತ್ತು 2022,ಮೇ 14ರಂದು ಎರಡು ಬಾರಿ ಪೊಲೀಸರ ವಿಚಾರಣೆಗೆ ಹಾಜರಾಗಿದ್ದ ಶರ್ಮಾ ಇತರ ಮೂರು ದಿನಾಂಕಗಳಲ್ಲಿ ತನ್ನ ಗೈರುಹಾಜರಿಗೆ ಕಾರಣಗಳನ್ನು ಸಲ್ಲಿಸಿದ್ದರು.
ಇದನ್ನುಓದಿ: ಗೃಹ ಸಚಿವ ಅಮಿತ್ ಶಾ ರಿಂದ 'ಕೇರಳ ವಿರೋಧಿ' ಭಾಷಣ: ದೇಶದ್ರೋಹ, ತುಕ್ಡೆಗ್ಯಾಂಗ್ ಎಂದ ನೆಟ್ಟಿಗರು.!







