ನೂತನ ಮಾಹಿತಿ ರಕ್ಷಣೆ ಮಸೂದೆಯು ಸರ್ಕಾರದ ಹಿತಾಸಕ್ತಿಗಳಿಗೆ ಅನುಗುಣವಾಗಿ ಕಾರ್ಯನಿರ್ವಹಿಸುತ್ತದೆ: ಎಫ್‌ಎಸ್‌ಎಂಕೆ

ಬೆಂಗಳೂರು: ‘ಡಿಜಿಟಲ್ ವೈಯಕ್ತಿಕ ದತ್ತಾಂಶ ಸಂರಕ್ಷಣಾ ಮಸೂದೆ-2022ರ ಕರಡನ್ನು ಕೇಂದ್ರ ಸರಕಾರ ಸಿದ್ಧಪಡಿಸಿದ್ದು, ವೆಬ್‍ಸೈಟ್‍ನಲ್ಲಿ ಪ್ರಕಟಿಸಲಾಗಿದೆ. ಇದು ಖಾಸಗಿ ಕಂಪೆನಿಗಳಿಗೆ ಅನುಕೂಲ ಮಾಡಲಿದ್ದು, ಸಾರ್ವಜನಿಕರಿಗೆ ಮಾರಕವಾಗಲಿದೆ’ ಎಂದು ಕರ್ನಾಟಕ ಸ್ವತಂತ್ರ ತಂತ್ರಾಂಶ ಅಂದೋಲನ (ಎಫ್‍ಎಸ್‍ಎಂಕೆ) ವಿರೋಧ ವ್ಯಕ್ತಪಡಿಸಿದೆ.
ರವಿವಾರ ಕೋರಮಂಗಲದಲ್ಲಿರುವ ವೈಡಬ್ಲ್ಯೂಸಿಎ ಹಾಲ್‍ನಲ್ಲಿ ಡಿಜಿಟಲ್ ವೈಯಕ್ತಿಕ ದತ್ತಾಂಶ ಸಂರಕ್ಷಣಾ ಮಸೂದೆ-2022 ಕುರಿತು ಆಯೋಜಿಸಿದ್ದ ಸಂವಾದದಲ್ಲಿ ಸಂಶೋಧಕ ಶ್ರೀನಿವಾಸ್ ಕೊಡಾಲಿ ಮಾತನಾಡಿ, ‘2016ರಲ್ಲಿ ಪುಟ್ಟಸ್ವಾಮಿ ಪ್ರಕರಣದಲ್ಲಿ ದತ್ತಾಂಶ ಸಂರಕ್ಷಣೆ ಮಾಡುವಂತೆ ಸುಪ್ರಿಂ ಕೋರ್ಟ್ ತೀರ್ಪು ನೀಡಿದೆ. ಈ ತೀರ್ಪನ್ನು ಅಪ್ರಸ್ತುತಗೊಳಿಸಲು ಡಿಜಿಟಲ್ ವೈಯಕ್ತಿಕ ದತ್ತಾಂಶ ಸಂರಕ್ಷಣಾ ಮಸೂದೆಯನ್ನು ಜಾರಿ ಮಾಡಲು ಕೇಂದ್ರ ಸರಕಾರ ಹವಣಿಸುತ್ತಿದೆ ಎಂದು ದೂರಿದರು.
ಕೇಂದ್ರ ಸರಕಾರವು ದತ್ತಾಂಶ ಸಂರಕ್ಷಣೆಯ ಕುರಿತು ಶ್ರೀಕೃಷ್ಣ ಕಮಿಟಿಯನ್ನು ಮಾಡಿತ್ತು. ಕಮಿಟಿಯು ದತ್ತಾಂಶ ಸಂರಕ್ಷಣೆಯೊಂದಿಗೆ ಗೌಪ್ಯತೆಯನ್ನು ಮಸೂದೆಯಲ್ಲಿ ಸೇರಿಸಬೇಕು ಎಂದು ಶಿಫಾರಸ್ಸು ಮಾಡಿತ್ತು. ಆದರೆ ಜಂಟಿ ಸಂಸದೀಯ ಸಮಿತಿಯನ್ನು ನೇಮಕ ಮಾಡಿ ಖಾಸಗಿ ಕಂಪೆನಿಗಳಿಗೆ ಅನುಕೂಲವಾಗುವಂತೆ ಮಾಡಿದೆ ಎಂದು ಅವರು ಆರೋಪಿಸಿದರು.
ಎಫ್‍ಎಸ್‍ಎಂಕೆಯ ಪ್ರಧಾನ ಕಾರ್ಯದರ್ಶಿ ನವೀನ್ ಮುದುನೂರು ಮಾತನಾಡಿ, ಕೇಂದ್ರ ಸರಕಾರವು 2017ರಲ್ಲಿ ಈ ಮಸೂದೆಗೆ ಕರಡನ್ನು ರೂಪಿಸಿತ್ತು. ಆದರೆ ಸತತ ಐದು ವರ್ಷಗಳ ಕಾಲ ಮಸೂದೆಯನ್ನು ಪರಿಷ್ಕರಿಸಿ ನಾಲ್ಕು ಅವೃತ್ತಿಯಲ್ಲಿ ಪ್ರಕಟಿಸುತ್ತಿದೆ. ಡಿಜಿಟಲ್ ವೈಯಕ್ತಿಕ ದತ್ತಾಂಶ ಸಂರಕ್ಷಣಾ ಮಸೂದೆ-2022 ನಾಲ್ಕನೆ ಆವೃತ್ತಿ ಆಗಿದೆ ಎಂದರು.
ಹಿಂದಿನ ಮಸೂದೆಗಳಲ್ಲಿ ಉಲ್ಲೇಖಿಸಿದಂತೆ ದತ್ತಾಂಶ ಸಂರಕ್ಷಣಾ ಮಂಡಳಿಯು ದತ್ತಾಂಶಗಳ ಕುರಿತು ದೂರುಗಳು ಬಂದಾಗ ಪರಿಶೀಲಿಸಬಹುದಿತ್ತು. ಆದರೆ ಈಗ ಪ್ರಕಟವಾಗಿರುವ ಮಸೂದೆಯ ಅನ್ವಯ ಸರಕಾರದ ಆದೇಶ ಮುಖ್ಯವಾಗುತ್ತದೆ. ಈ ಮಸೂದೆಯು 2000ರ ಮಾಹಿತಿ ತಂತ್ರಜ್ಞಾನ ಕಾಯ್ದೆಯನ್ನು ಪರಿಗಣಿಸಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಕರ್ನಾಟಕ ಸೇರಿ ಇತರೆ ರಾಜ್ಯಗಳಲ್ಲಿ ಡಿಜಿಟಲ್ ರೂಪದ ಹೊರತಾಗಿ ಮಾಹಿತಿಯನ್ನು ಸಂಗ್ರಹಿಸಲಾಗಿದೆ. ಮತದಾರರ ಮಾಹಿತಿ ಕಳವು ಹಗರಣಗಳ ಹೊರಬಿದ್ದಿವೆ. ಇದನ್ನು ಆನ್‍ಲೈನ್ ಮೂಲಕ ಮಾಡಿಲ್ಲ. ಮನೆ-ಮನೆಯಿಂದ ಮತದಾರರ ಮಾಹಿತಿಯನ್ನು ನೇರವಾಗಿ ಆಫ್‍ಲೈನ್ ಮೂಲಕ ಸಂಗ್ರಹಿಸಿದ್ದಾರೆ. ಇದು ಸಂಪೂರ್ಣ ಕಾನೂನುಬಾಹಿರವಾಗಿದ್ದು, ಮಸೂದೆಯಲ್ಲಿಮ ಚರ್ಚೆ ನಡೆಸಿಲ್ಲ. ಹಾಗಾಗಿ ದತ್ತಾಂಶಗಳ ಗೌಪ್ಯತೆಯನ್ನು ಕಾಪಾಡುವಲ್ಲಿ ಮಸೂದೆ ವಿಫಲವಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.
ಒಂದು ವೇಳೆ ಮಸೂದೆಯು ಜಾರಿಯಾದರೆ, ಜನರ ವೈಯಕ್ತಿಕ ದತ್ತಾಂಶದ ಮಾಲಕತ್ವವು ಸಂಪೂರ್ಣವಾಗಿ ಸರಕಾರಕ್ಕೆ ಹೋಗುತ್ತದೆ. ಸರಕಾರ ಆ ದತ್ತಾಂಶವನ್ನು ಬಳಸಲು ಜನರ ಅನುಮತಿಯನ್ನು ಪಡೆಯುವ ಅಗತ್ಯ ಇರುವುದಿಲ್ಲ. ಮಾಹಿತಿಯನ್ನು ತನಗೆ ಇಷ್ಟ ಬಂದಂತೆ ಬಳಕೆ ಮಾಡಿಕೊಳ್ಳಲು ಮಸೂದೆಯು ನೆರವು ನೀಡುತ್ತದೆ ಎಂದು ಅವರು ವಿವರಿಸಿದರು.
ಈ ಮಸೂದೆಯು ಮಾಹಿತಿ ಹಕ್ಕು ಕಾಯ್ದೆಯಲ್ಲಿ ಹಸ್ತಕ್ಷೇಪ ಮಾಡುತ್ತದೆ. ಕಾಯ್ದೆಯ ಸೆಕ್ಷನ್ 8(ಜೆ)(1)ನ್ನು ಈ ಮಸೂದೆಯು ತೆಗೆದು ಹಾಕುವಂತೆ ತಿಳಿಸಿದೆ. ಇದರಿಂದ ವೈಯಕ್ತಿಕ ದತ್ತಾಂಶಗಳ ಗೌಪ್ಯತೆಯನ್ನು ರಕ್ಷಿಸಲು ಸಾಧ್ಯವಾಗುದಿಲ್ಲ. ಅಲ್ಲದೆ ಸರಕಾರ ಕರ್ತವ್ಯದಿಂದ ತಪ್ಪಿಸಿಕೊಳ್ಳಲು ಇದು ಸಹಾಯ ಮಾಡುತ್ತದೆ. ದತ್ತಾಂಶ ಸೋರಿಕೆಯ ಕುರಿತು ಸರಕಾರ ಆಗಲೀ, ನ್ಯಾಯಾಲಯ ಆಗಲೀ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ ಎಂದು ಅವರು ಹೇಳಿದರು.
ಕೇಂದ್ರ ಸರಕಾರವು ಇಂಡಿಯಾ-0.2 ಎಂಬ ಪಾಲಿಸಿಯನ್ನು ಜಾರಿ ಮಾಡುತ್ತಿದೆ. ಆಧಾರ್ ಕಾರ್ಡ್ ಅನ್ನು ಒಳಗೊಂಡಿದ್ದು, ಸಂಯೋಜಿತ ವ್ಯವಸ್ಥೆಯನ್ನು ಇದು ಒಳಗೊಂಡಿದೆ. ಇದಕ್ಕೆ ಕೃತಕ ಬುದ್ಧಿಶಕ್ತಿಯನ್ನು ಅಳವಡಿಸಲಾಗುತ್ತದೆ. ಇದರಿಂದ ಜನರಿಗೆ ತೊಂದರೆ ಆಗುತ್ತದೆ. ಯೋಜನೆಯನ್ನು ಪಡೆದುಕೊಳ್ಳಲು ಅರ್ಹರನ್ನು ಜನರು ನಿರ್ಧರಿಸುವುದಕ್ಕೂ, ಕೃತಕ ಬುದ್ಧಿಮತ್ತೆಯುಳ್ಳ ವ್ಯವಸ್ಥೆ ನಿರ್ಧರಿಸುವುದಕ್ಕೆ ವ್ಯತ್ಯಾಸ ಇದೆ ಎಂದರು ಅವರು ತಿಳಿಸಿದರು.
‘ಆಧಾರ್ ಕಾರ್ಡ್ ಅನುಷ್ಟಾನವನ್ನು ಪ್ರಶ್ನಿಸಿ ಸುಪ್ರಿಂ ಕೋರ್ಟ್‍ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಆದರೆ ಕೋರ್ಟ್ ಅರ್ಜಿ ವಜಾ ಮಾಡಿತು. ಸುಪ್ರೀಂ ತೀರ್ಪು ಬಂದ ಬಳಿಕ ಟಿಲಿಕಾಮ್ ಕಂಪೆನಿಗಳು ಆಧಾರ್ ಕಾರ್ಡ್ ಅನ್ನು ಪಡೆಯುವುದು ಕಡ್ಡಾಯ ಮಾಡಿವೆ. ವಿಳಾಸಕ್ಕಾಗಿ ಮತದಾರರ ಗುರುತಿನ ಚೀಟಿ ಸಾಕಾಗುತ್ತದೆ. ಆದರೆ ಆಧಾರ್ ಸಂಖ್ಯೆಯನ್ನು ಪಡೆಯುತ್ತಿವೆ. ಅಲ್ಲದೆ, ಮತದಾರರ ಗುರುತಿನ ಚೀಟಿ ಆಧಾರ್ ಅನ್ನು ಲಿಂಕ್ ಮಾಡಿ ಕೆಲ ಭಾಗಗಳಲ್ಲಿ ಮತದಾರರ ಪಟ್ಟಿಯಿಂದ ಹೆಸರುಗಳನ್ನು ತೆಗೆದಿದ್ದಾರೆ’
-ನವೀನ್ ಮುದುನೂರು, ಎಫ್‍ಎಸ್‍ಎಂಕೆಯ ಪ್ರಧಾನ ಕಾರ್ಯದರ್ಶಿ







