ಮಾಲಕರ ವಿರೋಧಕ್ಕೆ ಮಣಿದ ವಡೋದರಾ ನಗರಪಾಲಿಕೆ: ನಾಯಿಗಳ ಮೇಲಿನ ತೆರಿಗೆ ಇಳಿಕೆಗೆ ನಿರ್ಧಾರ

ವಡೋದರ,ಫೆ.12: ನಾಯಿಗಳನ್ನು ಸಾಕುವವರಿಂದ ಶ್ವಾನ ತೆರಿಗೆಯನ್ನು ಸಂಗ್ರಹಿಸುವ ತನ್ನ ನಡೆಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾದ ಹಿನ್ನೆಲೆಯಲ್ಲಿ ವಡೋದರ ಮಹಾನಗರ ಪಾಲಿಕೆಯು ಮುಂದಿನ ಹಣಕಾಸು ವರ್ಷದಿಂದ ತೆರಿಗೆಯ ಮೊತ್ತವನ್ನು ಕಡಿಮೆಗೊಳಿಸಲು ನಿರ್ಧರಿಸಿದೆ ಹಾಗೂ ತೆರಿಗೆ ಪಾವತಿ ಪ್ರಕ್ರಿಯೆಯನ್ನು ಸರಳೀಕರಿಸಲು ಕ್ರಮಗಳನ್ನು ಕೈಗೊಳ್ಳಲಿದೆ.
ಒಂದು ಸಾಕು ನಾಯಿಗೆ ಈವರೆಗೆ ಪ್ರತಿ ವರ್ಷ 500 ರೂ. ತೆರಿಗೆಯನ್ನು ವಿಧಿಸಲಾಗುತ್ತಿತ್ತು. ಮುಂದಿನ ಹಣಕಾಸು ವರ್ಷದಿಂದ ಆ ಮೊತ್ತವನ್ನು ಮೂರು ವರ್ಷಗಳಿಗೆ 1 ಸಾವಿರ ರೂ.ಗೆ ಇಳಿಸಲು ವಡೋದರ ನಗರಪಾಲಿಕೆ ನಿರ್ಧರಿಸಿದೆ.
ಶ್ವಾನ ತೆರಿಗೆ ಸಂಗ್ರಹಕ್ಕೆ ನಗರದ ಕೆಲವು ಶ್ವಾನ ಪಾಲಕರಿಂದ ವಿರೋಧ ವ್ಯಕ್ತವಾಗಿದೆ. ಇಂತಹ ತೆರಿಗೆ ವ್ಯವಸ್ಥೆಯಿಂದ ನಗರಪಾಲಿಕೆಯಿಂದ ಪ್ರಾಣಿಗಳಿಗೆ ಯಾವುದೇ ರೀತಿಯ ಪ್ರಯೋಜನವಿಲ್ಲವೆಂದು ಅವರು ಹೇಳುತ್ತಾರೆ.
ಸುಮಾರು 1 ಕೋಟಿ ರೂ.ಗಳನ್ನು ಶ್ವಾನತೆರಿಗೆಯಾಗಿ ಸಂಗ್ರಹಿಸುವ ಉದ್ದೇಶವನ್ನು ನಗರಪಾಲಿಕೆ ಹೊಂದಿದೆಯೆಂದು ವಡೋದರ ನಗರ ಪಾಲಿಕೆಯ ಪ್ರತಿಪಕ್ಷ ನಾಯಕ ಅಮಿ ರಾವತ್ ತಿಳಿಸಿದ್ದಾರೆ. ಸಾಕುನಾಯಿಗಳಿಗೆ ಉಚಿತ ಚಿಕಿತ್ಸಾ ಸೇವೆಯನ್ನು ಒದಗಿಸಬೇಕು ಹಾಗೂ ನಾಯಿಗಳ ಪಾಲನೆಗೆ ಸೂಕ್ತ ನಿಯಮಾವಳಿಗಳನ್ನು ರೂಪಿಸಬೇಕೆಂದು ಅವರು ಆಗ್ರಹಿಸಿದ್ದಾರೆ.
ಶ್ವಾನ ತೆರಿಗೆಯಿಂದ ಸಂಗ್ರಹವಾದ ಹಣವನ್ನು ಪ್ರಾಥಮಿಕವಾಗಿ ಬೀದಿನಾಯಿಗಳ ಪ್ರಜನನ ಸಾಮರ್ಥ್ಯವನ್ನು ನಿಷ್ಕ್ರಿಯಗೊಳಿಸಲು ಬಳಸಲಾಗುತ್ತಿತ್ತು ಎಂದು ವಿಎಂಸಿಯ ಸ್ಥಾಯಿ ಸಮಿತಿ ಅಧ್ಯಕ್ಷ ಹಿತೇಂದ್ರ ಪಟೇಲ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ವಡೋದರ ಮಹಾನಗರ ಪಾಲಿಕೆಯಲ್ಲಿ 8-9 ಸಾವಿರ ಸಾಕುನಾಯಿಗಳಿವೆ. ಆದರೆ ಕೆಲವೇ ಕೆಲವು ಮಾಲಕರು ಮಾತ್ರವೇ ಶ್ವಾನತೆರಿಗೆಯನ್ನು ಪಾವತಿಸುತ್ತಿದ್ದು, ತೆರಿಗೆ ಸಂಗ್ರಹ ತೀರಾ ನಗಣ್ಯವಾಗಿದೆ ಎಂದವರು ತಿಳಿಸಿದ್ದಾರೆ.
ಇದನ್ನುಓದಿ: ಗೃಹ ಸಚಿವ ಅಮಿತ್ ಶಾ ರಿಂದ 'ಕೇರಳ ವಿರೋಧಿ' ಭಾಷಣ: ದೇಶದ್ರೋಹ, ತುಕ್ಡೆಗ್ಯಾಂಗ್ ಎಂದ ನೆಟ್ಟಿಗರು.!







