ವಿಶ್ವದಾದ್ಯಂತ ತೀವ್ರಗತಿಯಲ್ಲಿ ಉಲ್ಬಣಿಸುತ್ತಿರುವ ಹಕ್ಕಿ ಜ್ವರ: ವರದಿ

ನ್ಯೂಯಾರ್ಕ್, ಫೆ.12: ವಿಶ್ವದಾದ್ಯಂತ ಹಕ್ಕಿಜ್ವರದ ಪ್ರಕರಣ ಏಕಾಏಕಿ ಏರಿಕೆಯಾಗುತ್ತಿದ್ದು, ರೋಗದ ಪ್ರಭಾವ ಮತ್ತು ಇದು ಮನುಷ್ಯರಿಗೆ ಹರಡಬಹುದೇ ಎಂಬ ಬಗ್ಗೆ ಆರೋಗ್ಯ ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ ಎಂದು `USA Today' ವರದಿ ಮಾಡಿದೆ.
ಹಕ್ಕಿಜ್ವರದಿಂದ ಪ್ರಸ್ತುತ ಏನಾಗುತ್ತಿದೆ ಮತ್ತು ಭವಿಷ್ಯದಲ್ಲಿ ಏನಾಗಬಹುದು ಎಂಬುದರ ಕುರಿತು ಅಪಾರ ಪ್ರಮಾಣದ ಅನಿಶ್ಚಿತತೆಯಿದೆ ಎಂದು `ಕಾರ್ಮೆಲ್ ಯುನಿವರ್ಸಿಟೀಸ್ ಸೆಂಟರ್ ಫಾರ್ ಪ್ಯಾಂಡೆಮಿಕ್ ಪ್ರಿವೆನ್ಷನ್ ಆ್ಯಂಡ್ ರೆಸ್ಪಾನ್ಸ್'ನ ನಿರ್ದೇಶಕ ಡಾ. ಜಯ್ ವರ್ಮರನ್ನು ಪತ್ರಿಕೆ ಉಲ್ಲೇಖಿಸಿದೆ.
1990ರಿಂದಲೂ ಹಕ್ಕಿಜ್ವರದ ಪ್ರಕರಣ ವರದಿಯಾಗುತ್ತಿದ್ದು ಪ್ರಸ್ತುತ ಉಲ್ಬಣಿಸಿರುವ ತಳಿಯನ್ನು ಎಚ್5ಎನ್1 ಸೋಂಕು ಎಂದು ಹೆಸರಿಸಲಾಗಿದೆ. ಇವು 2020ರಲ್ಲಿ ಪ್ರಥಮ ಬಾರಿಗೆ ಕಂಡುಬಂದ ಬಳಿಕ ವಲಸೆ ಹಕ್ಕಿಗಳ ಮೂಲಕ ಆಫ್ರಿಕಾ, ಏಶ್ಯಾ ಮತ್ತು ಯುರೋಪ್ಗೆ ಹರಡಿದ್ದು 2021ರ ಅಂತ್ಯದಲ್ಲಿ ಉತ್ತರ ಅಮೆರಿಕಕ್ಕೆ ಹರಡಿದೆ ಎಂದು ವಿಶ್ವಸಂಸ್ಥೆ ಹೇಳಿದೆ.
ಅಮೆರಿಕದ 47 ರಾಜ್ಯಗಳಲ್ಲಿ 58 ದಶಲಕ್ಷಕ್ಕೂ ಅಧಿಕ ಕೋಳಿಗಳಿಗೆ ಸೋಂಕು ಬಾಧಿಸಿದ್ದು ಈ ವಾರದಲ್ಲೇ ಸುಮಾರು 6,200 ಕೋಳಿಗಳು ರೋಗಪೀಡಿತವಾಗಿವೆ ಎಂದು ಅಮೆರಿಕದ ಕೃಷಿ ಇಲಾಖೆಯ ವರದಿ ಉಲ್ಲೇಖಿಸಿದೆ. ಇದುವರೆಗೆ ಸ್ಕಂಕ್(ಒಂದು ವಿಧದ ಮಾಂಸಾಹಾರಿ ಪ್ರಾಣಿ), ನರಿಗಳು, ರಕೂನ್, ಕರಡಿಗಳು, ಪರ್ವತ ಸಿಂಹಗಳು ಮತ್ತು ಡಾಲ್ಫಿನ್ಗಳು ಸೇರಿದಂತೆ ವಿವಿಧ ಪ್ರಾಣಿಗಳಲ್ಲಿ ಕಂಡುಬಂದಿದೆ. ಆದರೆ ಹಕ್ಕಿಗಳ ಮೂಲಕ ಅತ್ಯಂತ ಸುಲಭವಾಗಿ ಹರಡುತ್ತದೆ ಎಂದು ವರದಿ ಹೇಳಿದೆ.
ಇದನ್ನುಓದಿ: ಸಿರಿಯಾ ಭೂಕಂಪಪೀಡಿತ ಪ್ರದೇಶದಿಂದ ಒಂದೇ ಕುಟುಂಬದ ಐವರ ರಕ್ಷಣೆ: ಗೋಗರೆತದ ನಡುವೆ ಆನಂದ ಕಣ್ಣೀರು