ಅಂಬೇಡ್ಕರ್, ದಲಿತರನ್ನು ಹಾಸ್ಯ ಮಾಡುವುದು ವಾಕ್ ಸ್ವಾತಂತ್ರ್ಯ: ನಟ ಚೇತನ್
ವಾಕ್ ಸ್ವಾತಂತ್ರ್ಯದ ಇತಿ-ಮಿತಿ ಬಗ್ಗೆ ಫೇಸ್‌ಬುಕ್‌ನಲ್ಲಿ ಚರ್ಚೆ!

ಬೆಂಗಳೂರು: ಇತ್ತೀಚಿಗೆ ಬೆಂಗಳೂರಿನ ಜೈನ್ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಮಾಡಿರುವ ಅಂಬೇಡ್ಕರ್ ಮತ್ತು ದಲಿತ ವಿರೋಧಿ ನಾಟಕದ ವಿರುದ್ಧ ಆಕ್ಷೇಪಗಳು, ವಿರೋಧಗಳು ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಕನ್ನಡ ಚಲನಚಿತ್ರ ನಟ ಚೇತನ್ ಅಹಿಂಸಾ ಅವರು ಜೈನ್ ವಿದ್ಯಾರ್ಥಿಗಳ ಪರವಾಗಿ ನಿಂತಿದ್ದು, ವಾಕ್ ಸ್ವಾತಂತ್ರ್ಯದ ಅಡಿಯಲ್ಲಿ ಯಾರನ್ನೇ ಆದರೂ ಹಾಸ್ಯ ಮಾಡುವ ಸ್ವಾತಂತ್ರ್ಯ ಇರಬೇಕೆಂದು ಪ್ರತಿಪಾದಿಸಿದ್ದಾರೆ.
ಈ ಕುರಿತು ತಮ್ಮ ಫೇಸ್‌ಬುಕ್ ಖಾತೆ ಮೂಕ ಪೋಸ್ಟ್ ಮಾಡಿರುವ ಚೇತನ್, “ಬಲವಾದ ಪ್ರಜಾಪ್ರಭುತ್ವಕ್ಕಾಗಿ, ಎಲ್ಲವನ್ನೂ ಮತ್ತು ಎಲ್ಲರನ್ನೂ ತಮಾಷೆ ಮಾಡುವ ಹಕ್ಕು ನಮಗಿರಬೇಕು. (ಪ್ರಧಾನಿ) ಮೋದಿಯನ್ನು ಅಪಹಾಸ್ಯ ಮಾಡುವ ಸ್ಟ್ಯಾಂಡ್-ಅಪ್ ಕಾಮಿಕ್ಸ್ ಮತ್ತು ನಾಟಕಗಳನ್ನು ಹೇಗೆ ಸೆನ್ಸಾರ್ ಮಾಡಬಾರದೋ, ಅಂತೆಯೇ, ರಾಮ / ಮುಹಮ್ಮದ್ / ಬಸವ / ಅಂಬೇಡ್ಕರ್ / ದಲಿತರ ವಿರುದ್ಧ ‘ಹಾಸ್ಯ’ವನ್ನು ಅಪರಾಧೀಕರಣಗೊಳಿಸುವುದು ಪ್ರಜಾಪ್ರಭುತ್ವವಲ್ಲ.” ಎಂದು ಹೇಳಿದ್ದಾರೆ.
ಅಲ್ಲದೆ, “ಜೈನ್ ಯುನಿವರ್ಸಿಟಿಯ 6 ವಿದ್ಯಾರ್ಥಿಗಳ ಮೇಲೆ ಎಫ್ ಐ ಆರ್ ಮಾಡುವುದು ಅಥವಾ ಅವರನ್ನು ಅಮಾನತು ಮಾಡುವುದು ವಾಕ್ ಸ್ವಾತಂತ್ರ್ಯದ ವಿರುದ್ಧವಾಗಿದೆ” ಎಂದು ಚೇತನ್ ಹೇಳಿದ್ದಾರೆ.
ವಾಕ್ ಸ್ವಾತಂತ್ರ್ಯದ ಅಡಿಯಲ್ಲಿ ಜೈನ್ ಕಾಲೇಜಿನ ಆರೋಪಿ ವಿದ್ಯಾರ್ಥಿಗಳನ್ನು ಚೇತನ್ ಸಮರ್ಥಿಸಿರುವುದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಪಾಶ್ಚಾತ್ಯ ನೆಲೆಗಟ್ಟಿನ 'ಸ್ವಾತಂತ್ರ್ಯದ ಪರಿಕಲ್ಪನೆ'ಯಲ್ಲಿ ಚೇತನ್ ಭಾರತದ ಪರಿಸ್ಥಿತಿಯನ್ನೂ ನೋಡುತ್ತಿದ್ದಾರೆ, ಹಾಗಾಗಿ ಅವರ ಸ್ವಾತಂತ್ರ್ಯದ ಪರಿಕಲ್ಪನೆಗೂ ಡಾ. ಬಿ ಆರ್ ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ಪ್ರತಿಪಾದಿಸುವ ಸ್ವಾತಂತ್ರ್ಯಕ್ಕೂ ವ್ಯತ್ಯಾಸವಿದೆ ಎಂದು ಹಲವರು ವಾದಿಸಿದ್ದಾರೆ.
“ಸ್ವಾತಂತ್ರ್ಯದ ಹೆಸರಲ್ಲಿ ವಿಮರ್ಶಿಸಿ ಆದರೆ ಅದು ವ್ಯಕ್ತಿ ಗೌರವಕ್ಕೆ ದಕ್ಕೆಯಾಗಬಾರದು. ಈಗಾಗಲೇ ಬಾಬಾಸಾಹೇಬರನ್ನು ಹಲವಾರು ವಿಧಾನದಲ್ಲಿ ವಿಮರ್ಶಿಸಿದ್ದಾರೆ. ವಾಕ್ ಸ್ವಾತಂತ್ರ್ಯ ವಿಮರ್ಶೆಗೇ ಹೊರತೂ ಅಪಮಾನಿಸುವುದಕ್ಕಲ್ಲ. ಉದಾಹರಣೆಗೆ ವಾಕ್ ಸ್ವಾತಂತ್ರ್ಯ ಇದೆಯೆಂದು ಹೇಳಿ ಜಾತಿನಿಂದನೆ ಮಾಡುವುದು ಕೂಡಾ ನಿಂದನೆ ಮಾಡುವವನ ಸ್ವಾತಂತ್ರ್ಯ ಎಂದು ನಾವು ಒಪ್ಪಿಕೊಳ್ಳಬೇಕಾಗುತ್ತದೆ. ಹಾಗಾಗಿ ಸ್ವಾತಂತ್ರ್ಯಕ್ಕೂ ಒಂದು ಮಿತಿಯನ್ನು ನೀಡಲಾಗಿದೆ. ಈಗ ಜೈನ್ ವಿವಿ ವಿದ್ಯಾರ್ಥಿಗಳ ವಿರುದ್ದ ನೀಡಿದ ದೂರು ಸಂವಿಧಾನ ಬಾಹಿರವೂ ಅಲ್ಲ. ನಿಮ್ಮ ಪ್ರಕಾರವೇ ಹೇಳುವುದಾದರೆ ಅವರಿಗೆ ಮಾತನಾಡುವ ಹಕ್ಕಿದೆ. ಇವರಿಗೆ ಕಂಪ್ಲೆಂಟ್ ಕೊಡುವ ಹಕ್ಕೂ ಇದೆ” ಜನಾ ನಾಗಪ್ಪ ಎಂಬವರು ಪ್ರತಿಕ್ರಿಯಿಸಿದ್ದಾರೆ.
“ಹಾಸ್ಯಕ್ಕೂ ಅಪಹಾಸ್ಯಕ್ಕೂ, ಜಾತಿನಿಂದನೆಗೂ ಅಜಗಜಾಂತರ ವ್ಯತ್ಯಾಸವಿದೆ Mr. Chetan. ಶೋಷಿತರನ್ನು ಅವಹೇಳನ ಮಾಡುವುದು, ಜಾತಿ ನಿಂದನೆಗೆ ಒಳಪಡಿಸುವುದು ಭಾರತೀಯ ದಂಡ ಸಂಹಿತೆಯ ಕಾನೂನಿನ ರೀತ್ಯಾ ಅಪರಾಧ. ಮಗೆ ಇದು ಕೇವಲ ಹಾಸ್ಯವಾಗಿ ತೋರುವುದು ಅಥವಾ ಆ ಜಾತಿ ಮದವೇರಿದ ಹುಡುಗರ ಸ್ವಾತಂತ್ರ್ಯದ ಪ್ರಶ್ನೆಯಾಗಿ ಕಾಣುವುದು ಶೋಷಿತರ ಬಗೆಗಿನ ನಿಮ್ಮ ಅಸೂಕ್ಷ್ಮತೆಯನ್ನೂ, ನಿಮ್ಮ caste privilege ಅನ್ನೂ ತೋರಿಸುತ್ತದೆಯಷ್ಟೆ.” ಎಂದು ಸಂಜ್ಯೋತಿ ಪ್ರತಿಕ್ರಿಯಿಸಿದ್ದಾರೆ.
“ಡಿಯರ್ Chetan Ahimsa , ಅಬಿವ್ಯಕ್ತಿ (expression) ಮತ್ತು ದ್ವೇಷದ ಮಾತು (hate speech) ಎರಡಕ್ಕೂ ವ್ಯತ್ಯಾಸವಿದೆ. ಜೈನ್ ಕಾಲೇಜಿನ ವಿದ್ಯಾರ್ತಿಗಳು ನಾಟಕದ ಮೂಲಕ ಮಾಡಿರುವುದು ಹಾಸ್ಯವಲ್ಲ. Its not a free speech or expression. ಅದು ಒಂದು ಸಮುದಾಯವನ್ನು ಮತ್ತು ಸಮುದಾಯದ ಅಸ್ಮಿತೆಯನ್ನು ಗುರಿಪಡಿಸಿ ಮಾಡಿರುವ ದ್ವೇಷದ ಮಾತು.” ಎಂದು ಹರ್ಶಕುಮಾರ್ ಕುಗ್ವೆ ಅವರು ಪ್ರತಿಕ್ರಿಯಿಸಿದ್ದಾರೆ.
“ದ್ವೇಷದ ಮಾತು (hate speech) ಎಂದರೆ ಏನು?
‘ ಯಾರಾದರೂ ಒಬ್ಬ ವ್ಯಕ್ತಿಯನ್ನು ಕುರಿತು ವೈಯಕ್ತಿಕ ನೆಲೆಗಟ್ಟಿನಲ್ಲಿ ನಂಜು ಕಾರಿಕೊಳ್ಳುವುದು, ಅವಾಚ್ಯವಾಗಿ ನಿಂದಿಸುವುದು ದ್ವೇಷದ ಮಾತಾಗುವುದಿಲ್ಲ. ಬದಲಿಗೆ ಒಬ್ಬ ವ್ಯಕ್ತಿಯನ್ನು ಅಥವಾ ವ್ಯಕ್ತಿಗಳ ಸಮೂಹವನ್ನು ಒಂದು ನಿರ್ದಿಷ್ಟ ಸಮುದಾಯದ ಭಾಗವಾಗಿ ಕಲ್ಪಿಸಿಕೊಂಡು ನಿಂದನೆಗೆ ಗುರಿಪಡಿಸುವುದು ದ್ವೇಷದ ಮಾತು ಎನಿಸಿಕೊಳ್ಳುತ್ತದೆ. ಒಬ್ಬ ವ್ಯಕ್ತಿಯ ಬಗ್ಗೆ ಮಾಡಿದ ನಿಂದನೆ ಆ ವ್ಯಕ್ತಿಯ ಸಮುದಾಯಕ್ಕೂ ನಿಂದನೆಯಾಗುವಂತಿದ್ದರೆ ಅದನ್ನು ದ್ವೇಷದ ಮಾತು ಎನ್ನಬಹುದು. ಭಾರತದ ಸುಪ್ರೀ ಕೋರ್ಟು ಪ್ರವಾಸಿ ಬಾಲಾಯಿ V/s ಯೂನಿಯನ್ ಆಫ್ ಇಂಡಿಯಾ ಪ್ರಕರಣದಲ್ಲಿ ನೀಡಿದ ತೀರ್ಪಿನಲ್ಲಿ ಹೀಗೆ ಹೇಳಿದೆ. "ವ್ಯಕ್ತಿಗಳು ಒಂದು ಗುಂಪಿನಲ್ಲಿರುವ ಆಧಾರದ ಮೇಲೆ ಅವರನ್ನು ಅಂಚಿಗೆ ತಳ್ಳುವ ಪ್ರಯತ್ನವೇ ದ್ವೇಷದ ಮಾತಾಗಿದೆ’ ಎಂದು ಅದು ಹೇಳಿದೆ. ಮುಂದುವರಿದು ಅದು ಇಂತಹ ದ್ವೇಷದ ಮಾತು ಉಂಟು ಮಾಡುವ ಪರಿಣಾಮದ ಕುರಿತು ಹೇಳುತ್ತಾ, ‘ಗುಂಪಿನ ಬಿಡಿಬಿಡಿ ಸದಸ್ಯರಿಗೆ ಒತ್ತಡ ಉಂಟು ಮಾಡುವುದರಾಚೆಗೂ ದ್ವೇಷದ ಮಾತಿನ ಪರಿಣಾಮಗಳಿರುತ್ತವೆ. ಅದರ ಪರಿಣಾಮ ಇಡೀ ಸಮಾಜದ ಮೇಲೆ ಬೀಳಬಲ್ಲದು. ಸಮುದಾಯವೊಂದಕ್ಕೆ ಬಹಿಷ್ಕಾರ ಹಾಕುವ, ಪ್ರತ್ಯೇಕಗೊಳಿಸುವ, ದೇಶಭ್ರಷ್ಟಗೊಳಿಸುವ, ಅದರ ಮೇಲೆ ಹಿಂಸಾಚಾರ ನಡೆಸುವ ಮತ್ತು ತೀವ್ರ ಮಟ್ಟದಲ್ಲಿ ಜನಾಂಗೀಯ ಹತ್ಯೆ ನಡೆಸುವಂತ ಗಂಭೀರ ಆಕ್ರಮಣಕಾರಿ ಕೃತ್ಯಗಳಿಗೆ ‘ದ್ವೇಷದ ಮಾತು’ ತಳಪಾಯ ಹಾಕಿಕೊಡಬಲ್ಲದು. ದ್ವೇಷದ ಮಾತಿಗೆ ಈಡಾದ ಸಮುದಾಯವೊಂದರ ಜನರು ಸಮಾಜದಲ್ಲಿ ನಡೆಯುವಂತಹ ಅನೇಕ ಅರ್ಥಪೂರ್ಣ ವಿಚಾರಗಳಿಗೆ ಸ್ಪಂದಿಸುವ ಬಲವನ್ನೇ ಕುಂದಿಸುತ್ತದೆ. ಇದರಿಂದ ಒಂದು ಪ್ರಜಾಪ್ರಭುತ್ವದಲ್ಲಿ ಆ ಸಮುದಾಯದ ಪೂರ್ಣಪ್ರಮಾಣದ ತೊಡಗುವಿಕೆಗೆ ದ್ವೇಷದ ಮಾತು ದೊಡ್ಡ ತಡೆಗೋಡೆಯಾಗುತ್ತದೆ’ ಎಂದು ತಿಳಿಸಿದೆ.
ಡಿಯರ್ ಚೇತನ್, ಬಾಬಾಸಾಹೇಬ್ ಅಂಬೇಡ್ಕರ್ ಅವರನ್ನು ಶೋಶಿತರಿಗೆ ಪ್ರಾತಿನಿಧ್ಯ ನೀಡುವ ಮೀಸಲಾತಿಯನ್ನು ಸಂವಿದಾನದ ಮೂಲಕ ನೀಡಿದ್ದಕ್ಕಾಗಿ ಹಾಗೂ ವ್ಯಕ್ತಿ ಗನತೆ ಮತ್ತು ಸಮಾನತೆಯ ಸಂಹಿತೆಯನ್ನು ಸಂವಿದಾನದಲ್ಲಿ ಅಳವಡಿಸಿದ್ದಕ್ಕಾಗಿ ಮೇಲ್ಜಾತಿ ಹಿತಾಸಕ್ತರು ದ್ವೇಶ ಕಾರುತ್ತಲೇ ಬರುತ್ತಿದ್ದಾರೆ. ಜೈನ್ ಕಾಲೇಜಿನ ಗಟನೆ ಅದರ ಮುಂದುವರಿದ ಬಾಗವಶ್ಟೇ.
ಮೀಸಲಾತಿಯ ಬಗ್ಗೆ ಹಾಸ್ಯ ಮಾಡುವುದು ಏನಿರುತ್ತದೆ? ದಲಿತ್ ಎಂದು ಸಮುದಾಯವನ್ನು ಉಲ್ಲೇಕಿಸಿ, ಶೆಡ್ಯೂಲ್ಡ್ ಕಾಸ್ಟ್ ಎಂದು ಉಲ್ಲೇಕಿಸಿ ಹಾಸ್ಯ, ನಿಂದನೆ ಮಾಡುವುದು ವೈಯಕ್ತಿಕ ನಿಂದನೆ ಅಲ್ಲ. ಸ್ಪಷ್ಟವಾಗಿ ಸಮುದಾಯದ ವಿರುದ್ದದ ದ್ವೇಶ. ಅದು ಸನಾತನ ನಂಜು. “ ಎಂದು ಕುಗ್ವೆ ಪ್ರತಿಕ್ರಿಯೆ ನೀಡಿದ್ದಾರೆ.
"ಹಿಯಾಳಿಕೆಯನ್ನ ಹಾಸ್ಯವಾಗಿ ಅನುಭವಿಸಿ ಅನ್ನೊದೆ ಕೆಟ್ಟ ವ್ಯಸನ. "ಜಾತೀಯ ವ್ಯವಸ್ಥೆಯ” ಪರಿಪಾಲಕರು ಹೇಳುವ ಮಾತಿದು..ಸಮತಾವಾದಿಗಳ ವಿಚಾರ ಅಲ್ಲ ಇದು.." ಎಂದು ಬಸವ ಪಾಟೀಲ ಎಂಬವರು ಟೀಕಿಸಿದ್ದಾರೆ.







