ಕೆಮ್ಮಿಗೆ ಚಿಕಿತ್ಸೆಯೆಂದು ಶಿಶುವಿಗೆ ಕಾದ ಕಬ್ಬಿಣದಿಂದ ಬರೆ ಎಳೆದ ನಕಲಿ ವೈದ್ಯ!

ಪೋರ್ಬಂದರ್, ಫೆ.12: ಗುಜರಾತ್ನ ಪೋರ್ಬಂದರ್ ಜಿಲ್ಲೆಯಲ್ಲಿ ನಕಲಿ ವೈದ್ಯನೊಬ್ಬ ಎರಡು ತಿಂಗಳು ಪ್ರಾಯದ ಹೆಣ್ಣು ಮಗುವಿನ ಕೆಮ್ಮಿನ ಸಮಸ್ಯೆಗೆ ಚಿಕಿತ್ಸೆ ನೀಡುವುದಾಗಿ ಹೇಳಿಕೊಂಡು ಶಿಶುವಿಗೆ ಕಾದ ಕಬ್ಬಿಣದ ಸರಳಿನಿಂದ ಬರೆ ಎಳೆದ ಆಘಾತಕಾರಿ ಘಟನೆ ರವಿವಾರ ವರದಿಯಾಗಿದೆ. ಸುಟ್ಟಗಾಯವಾಗಿರುವ ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆಯೆಂದು ರವಿವಾರ ತಿಳಿಸಿದ್ದಾರೆ.
ನಕಲಿ ವೈದ್ಯನನ್ನು ರವಿವಾರ ಬಂಧಿಸಲಾಗಿದ್ದು, ಆತ ಹಾಗೂ ಮಗುವಿನ ತಾಯಿಯ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆಯೆಂದು ಜಿಲ್ಲಾ ಉಪ ಪೊಲೀಸ್ ನಿರೀಕ್ಷಕ ಸುರ್ಜೀತ್ ಮಹೇದು ತಿಳಿಸಿದ್ದಾರೆ.
ಶಿಶುವನ್ನು ಸರಕಾರಿ ಆಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ ದಾಖಲಿಸಲಾಗಿದ್ದು, ವೈದ್ಯರ ನಿಗಾವಣೆಯಲ್ಲಿದ್ದಾಳೆ ಹಾಗೂ ಆಕೆಯ ಪರಿಸ್ಥಿತಿ ಸ್ಥಿರವಾಗಿದೆಯೆಂದು ಮಹೇದು ತಿಳಿಸಿದ್ದಾರೆ.
‘‘ಶಿಶುವು ಒಂದು ವಾರದಿಂದ ಕೆಮ್ಮು ಹಾಗೂ ಕಫದ ತೊಂದರೆಯಿಂದ ಬಳಲುತ್ತಿತ್ತು. ಆಕೆಯ ಪಾಲಕರು ಮನೆಮದ್ದಿನ ಚಿಕಿತ್ಸೆ ನೀಡಲು ಯತ್ನಿಸಿದ್ದರು. ಆದರೂ ಆಕೆ ಗುಣಮುಖಳಾಗಲಿಲ್ಲ. ಆನಂತರ ಮಗುವಿನ ತಾಯಿ ಆಕೆಯನ್ನು ದೇವರಾಜ್ ಭಾಯ್ ಕಟಾರಾ ಎಂಬ ನಕಲಿ ವೈದ್ಯನ ಬಳಿಗೆ ಕೊಂಡೊಯ್ದಿದ್ದಳು.
ಕಟಾರಿಯಾ ಮಗುವಿಗೆ ಚಿಕಿತ್ಸೆಯ ನೆದಲ್ಲ ಕಾದ ಕಬ್ಬಿಣದ ಸರಳಿನಿಂದ ಶಿಶುವಿನ ಎದೆ ಹಾಗೂ ಹೊಟ್ಟೆಗೆ ಬರೆ ಎಳೆದಿದ್ದನು. ಏನೂ ಪ್ರಯೋಜನವಾಗದೆ ಇದ್ದಾಗ, ಪಾಲಕರು ಮಗುವನ್ನು ಪೋರಬಂದರ್ನ ಭಾವಸಿನ್ಹಾಜಿ ಜನರಲ್ ಆಸ್ಪತ್ರೆಗೆ ದಾಖಲಿಸಿದಾಗ, ವಿಷಯ ಬೆಳಕಿಗೆ ಬಂದಿತೆಂದು ಪೊಲೀಸರು ತಿಳಿಸಿದ್ದಾರೆ.
ಮಗುವಿನ ತಂದೆ ನೀಡಿದ ದೂರಿನ ಮೇರೆಗೆ ಕಟಾರಾ ಹಾಗೂ ಶಿಶುವಿನ ತಾಯಿಯ ವಿರುದ್ಧ ಭಾರತೀಯ ದಂಡಸಂಹಿತೆಯ ಸೆಕ್ಷನ್ 324 ( ಸಾವಿಗೆ ಕಾರಣವಾಗುವ ಸಾಧ್ಯತೆ ಇರುವಂತಹ ಯಾವುದೇ ಉಪಕರಣದಿಂದ ಗಾಯವುಂಟು ಮಾಡುವುದು) ಹಾಗೂ ಇತರ ನಿಯಮಗಳಡಿ ಪ್ರಕರಠಣ ದಾಖಲಿಸಲಾಗಿದೆಯೆಂದು ಅಧಿಕಾರಿಗಳು ತಿಳಿಸಿದ್ದಾರೆ.







