ಕೇರಳ: ಕೇಂದ್ರ ಸಚಿವ ವಿ.ಮುರಳೀಧರನ್ ನಿವಾಸದ ಮೇಲೆ ದಾಳಿಗೈದ ಆರೋಪಿ ಸೆರೆ

ತಿರುವನಂತಪುರ.ಫೆ.12: ಕಳೆದ ವಾರ ಕೇಂದ್ರ ಸಚಿವ ವಿ.ಮುರಳೀಧರನ್ ಅವರ ಇಲ್ಲಿಯ ನಿವಾಸದ ಮೇಲೆ ದಾಳಿ ನಡೆಸಿದ್ದ ಆರೋಪದಲ್ಲಿ ಕಣ್ಣೂರು ನಿವಾಸಿ ಮನೋಜ್ (46) ಎಂಬಾತನನ್ನು ಪೊಲೀಸರು ರವಿವಾರ ಇಲ್ಲಿಗೆ ಸಮೀಪದ ತಂಬಾನೂರ್ ಎಂಬಲ್ಲಿ ಬಂಧಿಸಿದ್ದಾರೆ.
‘ಆರೋಪಿಯ ಸಿಸಿಟಿವಿ ದೃಶ್ಯಾವಳಿಗಳು ನಮಗೆ ಲಭ್ಯವಾಗಿದ್ದವು ಮತ್ತು ಆತನನ್ನು ಪತ್ತೆ ಹಚ್ಚಲು ಪ್ರಯತ್ನಿಸುತ್ತಿದ್ದೆವು. ನಗರವನ್ನು ತೊರೆಯಲು ಯತ್ನಿಸುತ್ತಿದ್ದ ಆತನನ್ನು ಇಂದು ಬೆಳಿಗ್ಗೆ ಬಂಧಿಸಲಾಗಿದೆ ’ಎಂದು ಪೊಲೀಸರು ತಿಳಿಸಿದರು.
ಆರೋಪಿಯು ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದಾನೆ ಎಂಬ ವರದಿಗಳ ಕುರಿತು ಸುದ್ದಿಗಾರರ ಪ್ರಶ್ನೆಗೆ ಪೊಲೀಸರು,ಅದನ್ನು ಸಾಬೀತುಗೊಳಿಸುವ ಯಾವುದೇ ವೈದ್ಯಕೀಯ ದಾಖಲೆ ಲಭ್ಯವಾಗಿಲ್ಲ. ಆತನಿಗೆ ಪ್ರದೇಶದ ಪರಿಚಯವಿದ್ದು,ಈ ಮುನ್ನ ನಗರದ ಹಲವಾರು ಹೋಟೆಲ್ಗಳಲ್ಲಿ ಕೆಲಸ ಮಾಡಿದ್ದ ಎನ್ನಲಾಗಿದೆ. ನಾವು ಎಲ್ಲ ಕೋನಗಳಿಂದಲೂ ತನಿಖೆ ನಡೆಸುತ್ತಿದ್ದೇವೆ ಎಂದು ಉತ್ತರಿಸಿದರು.
ಫೆ.9ರಂದು ಅಪರಿಚಿತ ವ್ಯಕ್ತಿಗಳು ಮುರಳೀಧರನ್ ನಿವಾಸದ ಮೇಲೆ ದಾಳಿ ನಡೆಸಿ ಕಿಟಕಿ ಗಾಜುಗಳನ್ನು ಒಡೆದಿದ್ದ ಬಗ್ಗೆ ಪ್ರಕರಣ ದಾಖಲಾಗಿತ್ತು.





