ಟರ್ಕಿ-ಸಿರಿಯಾ ಭೂಕಂಪದಲ್ಲಿ ಮೃತರ ಸಂಖ್ಯೆ 50 ಸಾವಿರಕ್ಕೆ ತಲುಪಬಹುದು: ವಿಶ್ವಸಂಸ್ಥೆ

ಅಂಕಾರ, ಫೆ.12: ಟರ್ಕಿ ಮತ್ತು ಸಿರಿಯಾದಲ್ಲಿ ಕಳೆದ ಸೋಮವಾರ ಸಂಭವಿಸಿದ ಭೀಕರ ಭೂಕಂಪದಲ್ಲಿ ಮೃತರ ಸಂಖ್ಯೆ 28 ಸಾವಿರವನ್ನು ದಾಟಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿರುವಂತೆಯೇ, ಮೃತರ ಪ್ರಮಾಣ 50 ಸಾವಿರ ತಲುಪಬಹುದು ಎಂದು ವಿಶ್ವಸಂಸ್ಥೆ ಮಾನವೀಯ ನೆರವು ವಿಭಾಗದ ಮುಖ್ಯಸ್ಥ ಮಾರ್ಟಿನ್ ಗ್ರಿಫಿತ್ಸ್ ಹೇಳಿದ್ದಾರೆ.
ಭೂಕಂಪದ ಕೇಂದ್ರಬಿಂದುವಾಗಿದ್ದ ದಕ್ಷಿಣ ಟರ್ಕಿಯ ಕಹ್ರಮನ್ಮರಸ್ಗೆ ಭೇಟಿ ನೀಡಿ ಭೂಕಂಪದಿಂದ ಆಗಿರುವ ಹಾನಿಯನ್ನು ಪರಿಶೀಲಿಸಿದ ಬಳಿಕ ಮಾಧ್ಯಮದವರ ಜತೆ ಮಾತನಾಡಿದ ಗ್ರಿಫಿತ್ಸ್, ಕುಸಿದುಬಿದ್ದ ಕಟ್ಟಡಗಳ ಅವಶೇಷಗಳಡಿ ಇನ್ನೂ ಶೋಧ ಕಾರ್ಯಾಚರಣೆ ಮುಂದುವರಿದಿರುವುದರಿಂದ ಸಾವಿನ ಪ್ರಮಾಣವನ್ನು ನಿಖರವಾಗಿ ಅಂದಾಜಿಸಲು ಅಸಾಧ್ಯವಾಗಿದೆ. ಆದರೆ ಈಗ ಪ್ರಕಟವಾಗಿರುವ ಅಂಕಿಅಂಶಕ್ಕಿಂತ ದುಪ್ಪಟ್ಟು ಆಗುವುದರಲ್ಲಿ ಸಂಶಯವಿಲ್ಲ ಎಂದರು.
ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಅಂತ್ಯಗೊಂಡ ಬಳಿಕ ಮಾನವೀಯ ನೆರವಿನ ಕಾರ್ಯಾಚರಣೆ ಆರಂಭವಾಗಲಿದೆ. ಭೂಕಂಪದಿಂದ ಪ್ರಭಾವಕ್ಕೆ ಒಳಗಾದವರ ಪ್ರಮಾಣವನ್ನು ಪರಿಶೀಲಿಸುವುದು ನಮ್ಮ ಕಾರ್ಯವಾಗಿದೆ ಎಂದವರು ಹೇಳಿದ್ದಾರೆ.
ಈ ಮಧ್ಯೆ, ಭೂಕಂಪದಿಂದಾಗಿ ಮೃತಪಟ್ಟವರ ಸಂಖ್ಯೆ ಟರ್ಕಿಯಲ್ಲಿ 24,617 ಮತ್ತು ಸಿರಿಯಾದಲ್ಲಿ 3,574ಕ್ಕೆ ತಲುಪಿದ್ದು ಕುಸಿದು ಬಿದ್ದಿರುವ ಕಟ್ಟಡಗಳ ಅವಶೇಷಗಳಡಿ ಬದುಕಿರುವವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಟರ್ಕಿ ಮತ್ತು ಸಿರಿಯಾದಲ್ಲಿ ಕನಿಷ್ಟ 8,70,000 ಜನರಿಗೆ ಆಹಾರದ ತುರ್ತು ಅಗತ್ಯವಿದೆ ಮತ್ತು ಸಿರಿಯಾದಲ್ಲೇ ಸುಮಾರು 5.3 ದಶಲಕ್ಷ ಜನರು ನಿರಾಶ್ರಿತರಾಗಿದ್ದಾರೆ ಎಂದು ವಿಶ್ವಸಂಸ್ಥೆ ಮಾಹಿತಿ ನೀಡಿದೆ. ಭೂಕಂಪದಿಂದ ಸುಮಾರು 26 ದಶಲಕ್ಷ ಮಂದಿ ಪ್ರಭಾವಿತರಾಗಿದ್ದು ಎರಡೂ ದೇಶಗಳಲ್ಲಿ ಆರೋಗ್ಯ ಕ್ಷೇತ್ರದ ಉಪಕ್ರಮಗಳಿಗಾಗಿ 42.8 ದಶಲಕ್ಷ ಡಾಲರ್ ಮೊತ್ತದ ತುರ್ತು ಅಗತ್ಯವಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
ಸಿರಿಯಾದ ಆರೋಪದಲ್ಲಿ ಹುರುಳಿಲ್ಲ: ಇಯು
ಈ ಮಧ್ಯೆ, ಸಿರಿಯಾಕ್ಕೆ ಯುರೋಪಿಯನ್ ಯೂನಿಯನ್ನಿಂದ ಸೂಕ್ತ ಪ್ರಮಾಣದಲ್ಲಿ ನೆರವು ಲಭಿಸಿಲ್ಲ ಎಂಬ ಸಿರಿಯಾದ ಆರೋಪದಲ್ಲಿ ಹುರುಳಿಲ್ಲ ಎಂದು ಸಿರಿಯಾಕ್ಕೆ ಯುರೋಪಿಯನ್ ಯೂನಿಯನ್ ರಾಯಭಾರಿ ಹೇಳಿದ್ದಾರೆ.
ಭೂಕಂಪದ ಸಂದರ್ಭದಲ್ಲಿ ಮಾತ್ರವಲ್ಲ, ಈ ಹಿಂದೆಯೂ ಸಿರಿಯಾಕ್ಕೆ ನಾವು ನೆರವು ಒದಗಿಸಿದ್ದೇವೆ ಮತ್ತು ನೆರವನ್ನು ಮುಂದುವರಿಸುತ್ತೇವೆ. ಆದರೆ ಸಿರಿಯಾ ನಿರಾಧಾರ ಆರೋಪ ಮಾಡಿದೆ ಎಂದು ಯುರೋಪಿಯನ್ ಯೂನಿಯನ್ ನಿಯೋಗದ ಮುಖ್ಯಸ್ಥ ಡ್ಯಾನ್ ಸ್ಟೊಯೆಂಸ್ಕು ಹೇಳಿರುವುದಾಗಿ ರಾಯ್ಟರ್ಸ್ ವರದಿ ಮಾಡಿದೆ.
ಭೂಕಂಪ ಸಂತ್ರಸ್ತರನ್ನು ವಂಚಿಸಲು ಪ್ರಯತ್ನ: 48 ಮಂದಿ ಬಂಧನ
ಟರ್ಕಿಯಲ್ಲಿ ಭೂಕಂಪದಿಂದ ಸಂತ್ರಸ್ತರಾದವರನ್ನು ಲೂಟಿ ಮಾಡಲು, ವಂಚಿಸಲು ಪ್ರಯತ್ನಿಸಿದ 48 ಮಂದಿಯನ್ನು ಅಧಿಕಾರಿಗಳು ಬಂಧಿಸಿರುವುದಾಗಿ ಸರಕಾರಿ ಸ್ವಾಮ್ಯದ ಮಾಧ್ಯಮ ವರದಿ ಮಾಡಿದೆ.
ದಕ್ಷಿಣ ಟರ್ಕಿಯ ಹತಾಯ್ ಪ್ರಾಂತದಲ್ಲಿ ಭೂಕಂಪದಿಂದ ಮನೆ ಕಳೆದುಕೊಂಡು ನಿರಾಶ್ರಿತರಾದವರನ್ನು ಲೂಟಿ ಮಾಡಲು ಪ್ರಯತ್ನಿಸಿದ 42 ಆರೋಪಿಗಳನ್ನು, ಗಝಿಯಾಂಟೆಪ್ನಲ್ಲಿ ಸಂತ್ರಸ್ತರನ್ನು ಟೆಲಿಫೋನ್ ಮೂಲಕ ಸಂಪರ್ಕಿಸಿ ನೆರವು ಒದಗಿಸುವ ಸೋಗಿನಲ್ಲಿ ವಂಚಿಸುತ್ತಿದ್ದ 6 ಆರೋಪಿಗಳನ್ನು ಬಂಧಿಸಲಾಗಿದೆ. ಟರ್ಕಿಯಲ್ಲಿ ಭೂಕಂಪದಿಂದ ತೀವ್ರ ಹಾನಿಗೊಳಗಾದ 10 ಪ್ರಾಂತಗಳಲ್ಲಿ ಮಂಗಳವಾರ ತುರ್ತುಪರಿಸ್ಥಿತಿ ಜಾರಿಗೊಳಿಸಿರುವುದರಿಂದ ಲೂಟಿ ಯತ್ನದ ಆರೋಪಿಗಳನ್ನು ಒಂದು ವಾರ ಬಂಧನದಲ್ಲಿಡಲು ಅವಕಾಶವಿದೆ.
ಸಂತ್ರಸ್ತರನ್ನು ಲೂಟಿ ಮಾಡುವ, ಅಪಹರಿಸುವ ಕೃತ್ಯದಲ್ಲಿ ತೊಡಗುವ ದುಷ್ಕರ್ಮಿಗಳನ್ನು ಮಟ್ಟಹಾಕುವುದು ತುರ್ತುಪರಿಸ್ಥಿತಿ ಘೋಷಣೆಯ ಪ್ರಮುಖ ಉದ್ದೇಶವಾಗಿದೆ ಎಂದು ಟರ್ಕಿ ಅಧ್ಯಕ್ಷ ರಿಸೆಪ್ ತಯ್ಯಿಪ್ ಎರ್ಡೋಗನ್ ಹೇಳಿದ್ದಾರೆ.
ಭೂಕಂಪ ಸಂತ್ರಸ್ತರಿಗೆ ತುರ್ತು ವೀಸಾ : ಜರ್ಮನಿ ಘೋಷಣೆ
ಟರ್ಕಿ ಮತ್ತು ಸಿರಿಯಾದ ಭೂಕಂಪ ಸಂತ್ರಸ್ತರ ಕುಟುಂಬಕ್ಕೆ 3 ತಿಂಗಳ ತುರ್ತು ವೀಸಾ ಒದಗಿಸಲಾಗುವುದು ಎಂದು ಜರ್ಮನಿಯ ಆಂತರಿಕ ಸಚಿವರು ಹೇಳಿದ್ದಾರೆ.
ಜರ್ಮನಿಯಲ್ಲಿರುವ ಟರ್ಕಿ ಅಥವಾ ಸಿರಿಯಾದ ನಾಗರಿಕರು, ತಮ್ಮ ದೇಶದಲ್ಲಿ ಭೂಕಂಪದಿಂದ ಸಂತ್ರಸ್ತರಾದ ಸಂಬಂಧಿಕರನ್ನು ಯಾವುದೇ ಆಡಳಿತಾತ್ಮಕ ಪ್ರಕ್ರಿಯೆಯ ಅಗತ್ಯವಿಲ್ಲದೆ ಜರ್ಮನಿಗೆ ಕರೆಸಿಕೊಳ್ಳಬಹುದು. 3 ತಿಂಗಳಾವಧಿಯ ಈ ವೀಸಾ ತುರ್ತು ನೆರವಾಗಿದೆ ಎಂದು ಜರ್ಮನಿಯ ಆಂತರಿಕ ಸಚಿವೆ ನ್ಯಾನ್ಸಿ ಫೇಸರ್ರನ್ನು ಉಲ್ಲೇಖಿಸಿ `ಬಿಲ್ಡ್' ಪತ್ರಿಕೆ ವರದಿ ಮಾಡಿದೆ. ಜರ್ಮನಿಯಲ್ಲಿ ಟರ್ಕಿ ಮೂಲದ ಸುಮಾರು 2.9 ದಶಲಕ್ಷ ಜನರಿದ್ದು ಇದರಲ್ಲಿ 50%ದಷ್ಟು ಮಂದಿ ಟರ್ಕಿಯ ಪೌರತ್ವ ಪಡೆದವರು. ಸಿರಿಯಾದ ಸುಮಾರು 9,24,000 ಪ್ರಜೆಗಳು ಜರ್ಮನಿಯಲ್ಲಿದ್ದಾರೆ.