ಉತ್ತರಪ್ರದೇಶ: ದುಷ್ಕರ್ಮಿಗಳಿಂದ ಅಂಬೇಡ್ಕರ್ ಪ್ರತಿಮೆಗೆ ಹಾನಿ

ಕನೌಜ್ (ಉ.ಪ್ರ.),ಫೆ.12: ಅಪರಿಚಿತ ದುಷ್ಕರ್ಮಿಗಳು ಸಂವಿಧಾನಶಿಲ್ಪಿ ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆಯನ್ನು ಭಗ್ನಗೊಳಿಸಿದ ಘಟನೆ ರವಿವಾರ ವರದಿಯಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಎಫ್ಐಆರ್ ದಾಖಲಿಸಲಾಗಿದ್ದು, ಆರೋಪಿಗಳನ್ನು ಗುರುತಿಸಲು ತೀವ್ರ ಪ್ರಯತ್ನಗಳನ್ನು ನಡೆಸಲಾಗುತ್ತಿದೆಯೆಂದು ಪೊಲೀಸರು ತಿಳಿಸಿದ್ದಾರೆ.
ರಾಯ್ ಪ್ರಯಾಗದ ಗುರುಸಹಾಯ್ಗಂಜ್ ಪ್ರದೇಶದಲ್ಲಿರುವ ಅಂಬೇಡ್ಕರ್ ಪ್ರತಿಮೆಯನ್ನು ಕೆಲವು ದುಷ್ಕರ್ಮಿಗಳು ಶನಿವಾರ ರಾತ್ರಿ ಹಾನಿಗೊಳಿಸಿದ್ದಾರೆ. ಶಾಂತಿಯನ್ನು ಕದಡಲು ಕೆಲವು ಕಿಡಿಗೇಡಿಗಳು ನಡೆಸಿದ ಕೃತ್ಯ ಇದಾಗಿದೆಯೆಂದು ಪೊಲೀಸ್ ಅಧೀಕ್ಷಕ ಕನ್ವರ್ ಅನುಪಮ್ ಸಿಂಗ್ ತಿಳಿಸಿದ್ದಾರೆ.
ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದು ಕೃತ್ಯವನ್ನು ಎಸಗಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಸ್ಥಳೀಯರಿಗೆ ಭರವಸೆ ನೀಡಿದರು. ಸ್ಥಳದಲ್ಲಿ ನೂತನ ಅಂಬೇಡ್ಕರ್ ಪ್ರತಿಮೆಯನ್ನು ಸ್ಥಾಪಿಸುವಂತೆಯೂ ಅವರು ಆಗ್ರಹಿಸಿದರು.
ಭಗ್ನಗೊಂಡ ಪ್ರತಿಮೆಯಿರುವ ಸ್ಥಳದಲ್ಲಿ ನೂತನ ಪ್ರತಿಮೆಯನ್ನು ಸ್ಥಾಪಿಸಲಾಗುವುದೆಂದು ಪೊಲೀಸ್ ಅಧೀಕ್ಷಕರು ತಿಳಿಸಿದ್ದಾರೆ. ಭೀಮ್ ಆರ್ಮಿ ಸಂಘಟನೆಯ ಕಾರ್ಯಕರ್ತರೂ ಸ್ಥಳಕ್ಕೆ ಧಾವಿಸಿದ್ದು, ಪ್ರತಿಮೆ ಭಗ್ನಗೊಂಡ ಘಟನೆಯ ಬಗ್ಗೆ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.







