ಜೈಲಿನಲ್ಲಿದ್ದಾಗ ದೊಡ್ಡ ಆಫರ್ ಬಂದಿತ್ತು ಎಂದ ಮಹಾರಾಷ್ಟ್ರದ ಮಾಜಿ ಸಚಿವ ಅನಿಲ್ ದೇಶಮುಖ್

ನಾಗ್ಪುರ: ಹಣ ದುರ್ಬಳಕೆ ಮತ್ತು ಭ್ರಷ್ಟಾಚಾರ ಪ್ರಕರಣದಲ್ಲಿ ಜಾಮೀನು ಪಡೆದು ಜೈಲಿನಿಂದ ಹೊರಬರುವ ಮುನ್ನ ಹದಿಮೂರು ತಿಂಗಳ ಸೆರೆಮನೆ ವಾಸ ಅನುಭವಿಸಿದ್ದ ಮಹಾರಾಷ್ಟ್ರದ ಮಾಜಿ ಸಚಿವ ಹಾಗೂ ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ ಮುಖಂಡ ಅನಿಲ್ ದೇಶಮುಖ್, "ನಾನು ಜೈಲಿನಲ್ಲಿದ್ದಾಗ ದೊಡ್ಡ ಆಫರ್ ಬಂದಿತ್ತು. ಅದನ್ನು ಸ್ವೀಕರಿಸಿದ್ದರೆ, ಮಹಾವಿಕಾಸ್ ಅಗಾಡಿ ಆಡಳಿತ ಬಹಳ ಹಿಂದೆಯೇ ಪತನವಾಗುತ್ತಿತ್ತು" ಎಂದು ಬಹಿರಂಗಪಡಿಸಿದ್ದಾರೆ.
2021ರ ನವೆಂಬರ್‌ನಲ್ಲಿ ಬಂಧಿಸಲ್ಪಟ್ಟ ದೇಶಮುಖ್, ಕಳೆದ ವರ್ಷದ ಡಿಸೆಂಬರ್ 28ರಂದು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ಸಂಘಟಿತ ಅರಣ್ಯ ಹಕ್ಕುಗಳ ರಾಜ್ಯಮಟ್ಟದ ಸಮ್ಮೇಳನದಲ್ಲಿ ಮಾತನಾಡಿದ ಅವರು, "ನಾನು ಜೈಲಿನಲ್ಲಿದ್ದಾಗ ಒಂದು ಆಫರ್ ನೀಡಲಾಯಿತು. ನಾನು ಅದನ್ನು ಸ್ವೀಕರಿಸಿದ್ದರೆ, ಮಹಾವಿಕಾಸ್ ಅಗಡಿ ಸರ್ಕಾರ ಎರಡೂವರೆ ವರ್ಷ ಮೊದಲೇ ಪತನವಾಗುತ್ತಿತು. ಆದರೆ ನಾನು ನ್ಯಾಯದ ಮೇಲೆ ನಂಬಿಕೆ ಇಟ್ಟು, ಬಿಡುಗಡೆವರೆಗೆ ಕಾದಿದ್ದೆ" ಎಂದು ಹೇಳಿದರು.
ಹಲವು ಮಂದಿ ಶಿವಸೇನೆ ಶಾಸಕರು ಏಕನಾಥ್ ಶಿಂಧೆ ನೇತೃತ್ವದಲ್ಲಿ ಬಿಜೆಪಿಯನ್ನು ಬೆಂಬಲಿಸುವ ಮೂಲಕ ಎಂವಿಎ ಸರ್ಕಾರ ಕಳೆದ ಜೂನ್‌ನಲ್ಲಿ ಪತನಗೊಂಡಿತ್ತು.
"ಕಾನೂನು ಜಾರಿ ನಿರ್ದೇಶನಾಲಯ ಕೈಗೊಳ್ಳುವುದಾಗಿ ಬೆದರಿಕೆ ಹಾಕಿದ್ದರಿಂದ ಶಿವಸೇನೆಯ 40 ಮಂದಿ ಶಾಸಕರು ಮೂಲ ಪಕ್ಷವನ್ನು ತೊರೆದು ಬಿಜೆಪಿ ಜತೆ ಸರ್ಕಾರ ರಚಿಸಿದರು. ಸುಳ್ಳು ಆರೋಪ ಹೊರಿಸಿ ನನ್ನನ್ನು 14 ತಿಂಗಳ ಕಾಲ ಜೈಲಿನಲ್ಲಿ ಇರಿಸಲಾಯಿತು. ಅದರೆ ನಾನು ಪಟ್ಟು ಬಿಡಲಿಲ್ಲ" ಎಂದು ದೇಶಮುಖ್ ಹೇಳಿಕೊಂಡರು.







