ದ್ವೇಷ ಮುಕ್ತ ಸಮಾಜ ಕಟ್ಟೋಣ: ಡಾ.ಎನ್.ವಿನಯ್ ಹೆಗ್ಡೆ ಕರೆ
ಮುಸ್ಲಿಮ್ ಶಿಕ್ಷಣ ಸಂಸ್ಥೆಗಳ ಶೈಕ್ಷಣಿಕ ಸಮ್ಮೇಳನ ಉದ್ಘಾಟನೆ

ಮಂಗಳೂರು, ಫೆ.13: ಸಮಾಜದಲ್ಲಿ ಇಂದು ದ್ವೇಷ ತುಂಬಿದೆ. ಅದನ್ನು ಸುಶಿಕ್ಷಿತ ವರ್ಗವು ಹೋಗಲಾಡಿಸಿ ದ್ವೇಷ ಮುಕ್ತ ಸಮಾಜ ನಿರ್ಮಿಸಬೇಕಿದೆ ಎಂದು ನಿಟ್ಟೆ ಡೀಮ್ಡ್ ವಿವಿಯ ಕುಲಾಧಿಪತಿ ಡಾ.ಎನ್.ವಿನಯ್ ಹೆಗ್ಡೆ ಹೇಳಿದ್ದಾರೆ.
ದ.ಕ. ಮತ್ತು ಉಡುಪಿ ಜಿಲ್ಲಾ ಮುಸ್ಲಿಮ್ ಶಿಕ್ಷಣ ಸಂಸ್ಥೆಗಳ ಒಕ್ಕೂಟ (ಮೀಫ್)ದ ವತಿಯಿಂದ ನಗರದ ಪುರಭವನದಲ್ಲಿ ಇಂದು ಹಮ್ಮಿಕೊಂಡಿರುವ ಶೈಕ್ಷಣಿಕ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ವಿದ್ಯಾರ್ಥಿಗಳ ಶ್ರೇಯಸ್ಸಿನಲ್ಲಿ ಶಿಕ್ಷಕರ ಪಾಲು ಇದೆ. ಉತ್ತಮ ಸಮಾಜ ಕಟ್ಟುವಲ್ಲಿ ಶಿಕ್ಷಕರ ಪಾತ್ರವೂ ಹಿರಿದಾಗಿದೆ. ಶಿಕ್ಷಣವನ್ನು ಎಲ್ಲರೂ ಜೊತೆಯಾಗಿ ಪಡೆಯಬೇಕು. ಅಲ್ಲಿ ಭೇದಭಾವ ಬೇಡ. ನಮ್ಮಲ್ಲಿ ಬದಲಾವಣೆ ಆಗಬೇಕಿದೆ. ಪ್ರೀತಿ, ಅನ್ಯೋನ್ಯತೆಯ ಶಿಕ್ಷಣವನ್ನು ನಾವು ನೀಡೋಣ ಎಂದು ಎನ್. ವಿನಯ ಹೆಗ್ಡೆ ಹೇಳಿದರು.
ಮುಸ್ಲಿಮ್ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಗೌರವಾಧ್ಯಕ್ಷ, ಟೀಕೇಸ್ ಗ್ರೂಪ್‌ನ ಅಧ್ಯಕ್ಷ ಉಮರ್ ಟೀಕೆ ಅಧ್ಯಕ್ಷತೆ ವಹಿಸಿದ್ದರು. ಮೀಫ್ ಗೌರವ ಸಲಹೆಗಾರ, ಬ್ಯಾರೀಸ್ ಗ್ರೂಪ್ ಆಫ್ ಇನ್‌ಸ್ಟಿಟ್ಯೂಶನ್ಸ್‌ನ ಅಧ್ಯಕ್ಷ ಸೈಯದ್ ಮುಹಮ್ಮದ್ ಬ್ಯಾರಿ ದಿಕ್ಸೂಚಿ ಭಾಷಣ ಮಾಡಿದರು.
ವೇದಿಕೆಯಲ್ಲಿ ಯೆನೆಪೊಯ ಡೀಮ್ಡ್ ವಿವಿ ಕುಲಪತಿ ಡಾ.ವೈ.ಅಬ್ದುಲ್ಲ ಕುಂಞಿ, ರಾಷ್ಟ್ರೀಯ ತರಬೇತುದಾರ ರಾಜೇಂದ್ರ ಭಟ್, ಸಂಪನ್ಮೂಲ ವ್ಯಕ್ತಿಗಳಾದ ಧಾರವಾಡದ ಮಹೇಶ್ ಮಸಾಲ್, ಬೆಂಗಳೂರಿನ ಸೈಯದ್ ಸುಲ್ತಾನ್ ಅಹ್ಮದ್, ಮೀಫ್ ಉಪಾಧ್ಯಕ್ಷರುಗಳಾದ ಬಿ.ಎಂ.ಮುಮ್ತಾಝ್ ಅಲಿ, ಕೆ.ಎಂ.ಮುಸ್ತಫ ಸುಳ್ಯ, ಶಬಿ ಅಹ್ಮದ್ ಖಾಝಿ, ಬಿ.ಎ.ನಝೀರ್ ಮತ್ತಿತರರು ಉಪಸ್ಥಿತರಿದ್ದರು.
ನಗರದ ಅಲ್ ಇಖ್ರಾ ಸ್ಕೂಲ್‌ನ ವಿದ್ಯಾರ್ಥಿಗಳು ಕಿರಾಅತ್ ಪಠಿಸಿದರು. ನಗರದ ಬ್ಯಾರೀಸ್ ಪಬ್ಲಿಕ್ ಸ್ಕೂಲ್‌ನ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಮುಸ್ಲಿಮ್ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷ ಮೂಸಬ್ಬ ಪಿ. ಬ್ಯಾರಿ ಸ್ವಾಗತಿಸಿದರು.