ಮಕ್ಕಳನ್ನು ಪ್ರಶ್ನಿಸಲು ಬಿಟ್ಟುಬಿಡಿ: ಮಹೇಶ್ ಮಸಾಲ್
ಮುಸ್ಲಿಮ್ ಶಿಕ್ಷಣ ಸಂಸ್ಥೆಗಳ ಶೈಕ್ಷಣಿಕ ಸಮ್ಮೇಳನದಲ್ಲಿ ಶಿಕ್ಷಕರ ಗೋಷ್ಠಿ

ಮಂಗಳೂರು, ಫೆ.13: ಮಕ್ಕಳು ಪ್ರಶ್ನಿಸಿದರೆ ಯಾವ ಕಾರಣಕ್ಕೂ ಸಿಟ್ಟಾಗಬೇಡಿ. ಪ್ರಶ್ನಿಸಲು ಅವರನ್ನು ಬಿಟ್ಟುಬಿಡಿ ಎಂದು ಮಾನವ ಮನಸ್ಥಿತಿ ತರಬೇತುದಾರ ಧಾರವಾಡದ ಮಹೇಶ್ ಮಸಾಲ್ ಹೇಳಿದ್ದಾರೆ.
ದ.ಕ. ಮತ್ತು ಉಡುಪಿ ಜಿಲ್ಲಾ ಮುಸ್ಲಿಮ್ ಶಿಕ್ಷಣ ಸಂಸ್ಥೆಗಳ ಒಕ್ಕೂಟ (ಮೀಫ್)ದ ವತಿಯಿಂದ ನಗರದ ಪುರಭವನದಲ್ಲಿ ಆಯೋಜಿಸಿರುವ ಶೈಕ್ಷಣಿಕ ಸಮ್ಮೇಳನದಲ್ಲಿ ‘ಶಿಕ್ಷಕರ ಗೋಷ್ಠಿ’ಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ಪ್ರಕೃತಿ ನಮಗೆ ಉತ್ತಮ ಪಾಠ ಕಲಿಸುತ್ತದೆ. ಅದು ನಮ್ಮ ಪಾಲಿಗೆ ಶಿಕ್ಷಕ ವೃಂದದ ಪಾತ್ರ ವಹಿಸುತ್ತದೆ. ಆದರೆ ನಾವು ಎಂದಿಗೂ ಎಚ್ಚರಗೊಳ್ಳುವುದಿಲ್ಲ. ನಾವು ಮಾಡಿದ್ದನ್ನೇ ಮಾಡುತ್ತೇವೆ. ನಮ್ಮ ಬದುಕು ಹಾಗಾಗಬಾರದು. ಸದಾ ಕಾಲ ಜಾಗೃತ ಪ್ರಜ್ಞರಾಗಿರಬೇಕು ಎಂದು ಮಹೇಶ್ ಮಸಾಲ್ ಹೇಳಿದರು.
ಶಿಕ್ಷಕ ವೃಂದವು ಬೆಂಕಿಯಿದ್ದಂತೆ. ಅದನ್ನು ವಿದ್ಯಾರ್ಥಿಗಳ, ಸಮಾಜದ ಹಿತಕ್ಕಾಗಿ ಬಳಸುವ ಮನೋಭಾವ ಬೆಳೆಸಬೇಕು. ದುರುಪಯೋಗಪಡಿಸಿದರೆ ಸುಟ್ಟುಹೋಗಬಹುದು ಎಂದು ಮಹೇಶ್ ಮಸಾಲ್ ಕಿವಿಮಾತು ಹೇಳಿದರು.
ಶಿಕ್ಷಕರನ್ನು ವಿದ್ಯಾರ್ಥಿಗಳು ಸದಾ ಕಾಲ ಗಮನಿಸುತ್ತಿರುತ್ತಾರೆ. ಶಿಕ್ಷಕರನ್ನು ಅನುಕರಿಸಲು ಅವರು ಪ್ರಯತ್ನಿಸುತ್ತಾರೆ. ಹಾಗಾಗಿ ಶಿಕ್ಷಕ ವೃಂದವು ತಮ್ಮ ಜವಾಬ್ದಾರಿಯನ್ನು ಅರಿತುಕೊಳ್ಳಬೇಕು ಎಂದು ಮಹೇಶ್ ಮಸಾಲ್ ಕರೆ ನೀಡಿದರು.
ಮುಸ್ಲಿಮ್ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಗೌರವಾಧ್ಯಕ್ಷ, ಟೀಕೇಸ್ ಗ್ರೂಪ್ ಅಧ್ಯಕ್ಷ ಉಮರ್ ಟೀಕೆ ಅಧ್ಯಕ್ಷತೆ ವಹಿಸಿದ್ದರು.
ಒಕ್ಕೂಟದ ಕಾರ್ಯಕಾರಿ ಸಮಿತಿಯ ಸದಸ್ಯ ನಿಸಾರ್ ಫಕೀರ್ ಮುಹಮ್ಮದ್ ಸಂಪನ್ಮೂಲ ವ್ಯಕ್ತಿಯ ಪರಿಚಯ ನೀಡಿದರು.
.jpeg)







