ಜಮ್ಮು ಮತ್ತು ಕಾಶ್ಮೀರ ಕ್ಷೇತ್ರ ಪುನರ್ ರಚನೆ ಪ್ರಶ್ನಿಸುವ ಅರ್ಜಿ ವಜಾಗೊಳಿಸಿದ ಸುಪ್ರೀಂ

ಹೊಸದಿಲ್ಲಿ, ಫೆ. 13: ಕೇಂದ್ರಾಡಳಿತ ಪ್ರದೇಶ ಜಮ್ಮು ಮತ್ತು ಕಾಶ್ಮೀರದ ಲೋಕಸಭಾ ಮತ್ತು ವಿಧಾನಸಭಾ ಕ್ಷೇತ್ರಗಳ ಪುನರ‌್ರಚನೆಗೆ ಆಯೋಗವೊಂದನ್ನು ರಚಿಸುವ ಕೇಂದ್ರ ಸರಕಾರದ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ವಜಾಗೊಳಿಸಿದೆ.
ಆದರೆ, ಜಮ್ಮು ಮತ್ತು ಕಾಶ್ಮೀರ ಪುನರ್ವಿಂಗಡಣಾ ಕಾಯ್ದೆ, 2019ರ ಸಿಂಧುತ್ವಕ್ಕೆ ಸಂಬಂಧಿಸಿದ ತೀರ್ಪು ಇದಲ್ಲ ಎಂದು ನ್ಯಾಯಮೂರ್ತಿಗಳಾದ ಎಸ್.ಕೆ. ಕೌಲ್ ಮತ್ತು ಎ.ಎಸ್. ಓಕಾ ಅವರನ್ನೊಳಗೊಂಡ ನ್ಯಾಯಪೀಠವೊಂದು ಸ್ಪಷ್ಟಪಡಿಸಿತು.
ಈ ಕಾಯ್ದೆಯ ಸಿಂಧುತ್ವವನ್ನು ಪ್ರಶ್ನಿಸಿ ಪ್ರತ್ಯೇಕ ಅರ್ಜಿಯನ್ನು ಸಲ್ಲಿಸಲಾಗಿದೆ.
ಕೇಂದ್ರಾಡಳಿತ ಪ್ರದೇಶದಲ್ಲಿರುವ 107 ವಿಧಾನಸಭಾ ಕ್ಷೇತ್ರಗಳನ್ನು 114ಕ್ಕೆ ಹೆಚ್ಚಿಸುವ ಪ್ರಸ್ತಾವವನ್ನು ಪ್ರಶ್ನಿಸಿ ಶ್ರೀನಗರದ ನಿವಾಸಿಗಳಾದ ಹಾಜಿ ಅಬ್ದುಲ್ ಗನಿ ಖಾನ್ ಮತ್ತು ಮುಹಮ್ಮದ್ ಅಯೂಬ್ ಮಟ್ಟೂ ನ್ಯಾಯಾಲಯಕ್ಕೆ ಹೋಗಿದ್ದರು.
ಜಮ್ಮು ಮತ್ತು ಕಾಶ್ಮೀರ ಪುನರ್ವಿಂಗಡಣಾ ಕಾಯ್ದೆ, 2019 ಅನುಸಾರ ಹಿಂದಿನ ಜಮ್ಮು ಮತ್ತು ಕಾಶ್ಮೀರ ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಂಗಡಿಸಲಾಗಿತ್ತು. ಅವುಗಳೆಂದರೆ ಜಮ್ಮು ಮತ್ತು ಕಾಶ್ಮಿರ ಮತ್ತು ಲಡಾಖ್.
ಏಳು ನೂತನ ಕ್ಷೇತ್ರಗಳ ಪೈಕಿ ಒಂದನ್ನು ಕಾಶ್ಮೀರದಲ್ಲಿ ಮತ್ತು ಆರು ಕ್ಷೇತ್ರಗಳನ್ನು ಜಮ್ಮುವಿನಲ್ಲಿ ಸೃಷ್ಟಿಸಲಾಗಿದೆ. ಇದರೊಂದಿಗೆ ಕಾಶ್ಮೀರದ ಕ್ಷೇತ್ರಗಳ ಸಂಖ್ಯೆ 46ಕ್ಕೇರಿದರೆ, ಜಮ್ಮುವಿನ ಸ್ಥಾನಗಳ ಸಂಖ್ಯೆ 43ಕ್ಕೆ ಏರಿದೆ.







