ದುರ್ಬಲಗೊಂಡಿರುವ ಸಾರ್ವಜನಿಕ ಶಿಕ್ಷಣ ಕ್ಷೇತ್ರ

ಕರ್ನಾಟಕ ರಾಜ್ಯ ಸರಕಾರದ ನಾಲ್ಕು ವರ್ಷಗಳ ಆಡಳಿತದ ಬಜೆಟ್ ಆಧಾರಿತ ಪರಾಮರ್ಶೆಯನ್ನು ಬೆಂಗಳೂರಿನ (Bangalore Academic Group) ಸಂಘಟಿಸಿದ್ದು, ವಿವಿಧ ಕ್ಷೇತ್ರಗಳ ಪರಿಣಿತರ ಸರಣಿ ಪರಾಮರ್ಶೆ ಇಲ್ಲಿದೆ.
ಕಳೆದ 7 ವರ್ಷಗಳಲ್ಲಿ (2016-22) ಕರ್ನಾಟಕ ಸರಕಾರವು ತನ್ನ ಬಜೆಟ್ ವೆಚ್ಚದ ಸರಾಸರಿ ಶೇ.11.77, ಜಿಡಿಪಿಯ ಸರಾಸರಿ ಶೇ.1.85 ಮೊತ್ತವನ್ನು ಶಿಕ್ಷಣಕ್ಕಾಗಿ ಮೀಸಲಿಟ್ಟಿದೆ.
ಮೇಲಿನ ಅಂಕಿ ಸಂಖ್ಯೆಗಳನ್ನು ವಿಶ್ಲೇಷಣೆ ಮಾಡಿದಾಗ ಕಳೆದ ಏಳು ವರ್ಷಗಳಲ್ಲಿ ಶಿಕ್ಷಣಕ್ಕೆ ಮೀಸಲಿಡುವ ಹಣದ ಮೊತ್ತ ಕಡಿಮೆಯಾಗುತ್ತಾ ಬಂದಿರುವುದು ನಿಚ್ಚಳವಾಗಿದೆ. 2022-23ರಲ್ಲಿ ಪ್ರಾಥಮಿಕ ಶಿಕ್ಷಣಕ್ಕೆ 17,184 ಕೋಟಿ ರೂ. ಮತ್ತು ಮಧ್ಯಾಹ್ನದ ಬಿಸಿಯೂಟಕ್ಕೆ 960 ಕೋಟಿ ರೂ. ಹಂಚಿಕೆ ಮಾಡಿದ್ದರು. ಆದರೆ ಅದೇ ವರ್ಷದಲ್ಲಿ 15,000 ಶಿಕ್ಷಕರ ನೇಮಕಾತಿಯ ಪ್ರಕ್ರಿಯೆಯನ್ನು ಸಹ ಪ್ರಾರಂಭಿಸಿದ್ದರು. ಹೊಸ ಶಿಕ್ಷಕರ ವೇತನ ಮತ್ತು ಇನ್ನಿತರ ಸೌಲಭ್ಯಗಳಿಗೆ ಅಗತ್ಯವಾದ ಆರ್ಥಿಕ ಅನುದಾನದ ಕುರಿತು ಬಜೆಟ್‌ನಲ್ಲಿ ಯಾವುದೇ ಪ್ರಸ್ತಾಪವಿಲ್ಲ. ಮತ್ತು ಮಕ್ಕಳಿಗೆ ಪೌಷ್ಟಿಕ ಆಹಾರ ಒದಗಿಸಲು 960 ಕೋಟಿ ರೂ. ಸಾಕಾಗುವುದಿಲ್ಲ. ಆದರೆ ಸರಕಾರ ಈ ಕುರಿತು ಆಸಕ್ತಿಯನ್ನು ತೋರಿಸುತ್ತಿಲ್ಲ.
2020-21ರಲ್ಲಿ ಶಿಕ್ಷಣಕ್ಕಾಗಿ 28,967 ಕೋಟಿ ರೂ. ಹಂಚಿಕೆ ಮಾಡಿದ್ದರು. ನಂತರ ಪರಿ ಷ್ಕರಿಸಿ 27,633 ಕೋಟಿ ರೂ. ಅಂದರೆ 1,334 ಕೋಟಿ ರೂ. ಕಡಿತಗೊಳಿಸಿದರು.
2017-18ರಲ್ಲಿ ಶಿಕ್ಷಣಕ್ಕೆ 20,008 ಕೋಟಿ ರೂ. ಹಂಚಿಕೆ ಮಾಡಿದ್ದರು. ನಂತರ ಅದನ್ನು ಪರಿಷ್ಕರಿಸಿ 19,773 ಕೋಟಿ ರೂ. ಗೆ ಕಡಿಮೆ ಮಾಡಿದರು. ಅಂದರೆ 235 ಕೋಟಿ ರೂ. ಕಡಿತಗೊಳಿಸಿದರು.
2019-20ರ ಮುಂಗಡಪತ್ರದಲ್ಲಿ ಮೂಲಭೂತ ಸೌಕರ್ಯಗಳಿಗಾಗಿ (1,500 ಶಾಲಾ ಕೊಠಡಿ, ಮೇಲ್ಛಾವಣಿ ಇತ್ಯಾದಿ) 1,200 ಕೋಟಿ ರೂ. ಮೀಸಲಿಟ್ಟಿದ್ದಾರೆ. 2018-19ರಲ್ಲಿ ಸರಕಾರಿ ಶಾಲೆಗಳ ಮೂಲಭೂತ ಸೌಕರ್ಯಗಳಿಗಾಗಿ 150 ಕೋಟಿ ರೂ. ಮೀಸಲಿಟ್ಟಿದ್ದರು. ಆದರೆ ಕಳೆದ ನಾಲ್ಕು ವರ್ಷಗಳಲ್ಲಿ ಯಾವುದೇ ಅಬಿವೃದ್ಧಿಗೋಚರಿಸಿಲ್ಲ. ಹೀಗಾಗಿ ಈ ಬಾರಿಯೂ ಮೂಲಭೂತ ಸೌಕರ್ಯ ಉತ್ತಮಗೊಳ್ಳು ತ್ತದೆ ಎನ್ನುವ ನಿರೀಕ್ಷೆ ಇಲ್ಲ. ಇದು ಕೇವಲ ಅಂಕಿ ಅಂಶಗಳ ಮೇಲಾಟವಷ್ಟೇ.
2018-19ರಲ್ಲಿ ಆಯ್ದ 4,100 ಸರಕಾರಿ ಶಾಲೆಗಳಿಗೆ ಅಂಗನವಾಡಿ ಕೇಂದ್ರಗಳನ್ನು ಸ್ಥಳಾಂತರಗೊಳಿಸಲಾಗುವುದು ಎಂದು ಹೇಳಿದ್ದರು. ಹಂತಹಂತವಾಗಿ ಪೂರ್ವ ಪ್ರಾಥಮಿಕ ಶಾಲೆಗಳನ್ನು ಪ್ರಾರಂಭಿಸುವುದಾಗಿ ಹೇಳಿದ್ದರು. ಆದರೆ ಇಂದಿಗೂ ಕಾರ್ಯಗತಗೊಂಡಿಲ್ಲ.
2017ರ ಆಯವ್ಯಯದಲ್ಲಿ ಪಬ್ಲಿಕ್ ಶಾಲೆಗಳನ್ನು ಪ್ರಾರಂಭಿಸುತ್ತೇವೆ ಎಂದು ಉಲ್ಲೇಖಿಸಿ ದ್ದರು. 2018 ಆಯವ್ಯಯದಲ್ಲಿ ತನ್ನ ಕಳೆದ ವರ್ಷಗಳ ಸಾಧನೆಯನ್ನು ಉಲ್ಲೇಖಿಸುತ್ತಾ ಸರಕಾರವು 2017ರಲ್ಲಿ 176 ಪಬ್ಲಿಕ್ ಶಾಲೆಗಳನ್ನು ಸ್ಥಾಪಿಸಿದ್ದೇವೆ ಎಂದು ಹೇಳಿ ಕೊಂಡಿದೆ. ಆದರೆ ವಾಸ್ತವದಲ್ಲಿ ಹಾಲಿ ಸರಕಾರಿ ಶಾಲೆಗಳನ್ನೇ ಕೆಪಿಎಸ್ ಆಗಿ ಪರಿವರ್ತಿಸಿದ್ದಾರೆ. ಇನ್ನು 2022-23 ಮುಂಗಡ ಪತ್ರದಲ್ಲಿಯೂ ಸಹ 1,000 ಪಬ್ಲಿಕ್ ಶಾಲೆಗಳನ್ನು ಪ್ರಾರಂಭಿಸುವುದಾಗಿ ಮುಖ್ಯಮಂತ್ರಿ ಹೇಳಿದ್ದರು. ಆದರೆ ಇಂದಿಗೂ ಕೆಪಿಎಸ್ ಸಂಖ್ಯೆ276ರನ್ನು ದಾಟಿಲ್ಲ. ಎಂತಹ ಮರೆಮೋಸ. ಜನರಿಗೆ ಮಂಕುಬೂದಿ ಎರಚುತ್ತಿದೆ. ಕರ್ನಾಟಕ ಪಬ್ಲಿಕ್ ಶಾಲೆಗಳ (ಕೆಪಿಎಸ್) ಕುರಿತು ಸರಕಾರ ಸುಳ್ಳುಗಳನ್ನು ಹೇಳುತ್ತಲೇಬಂದಿದೆ. 2021ರಲ್ಲಿ 276 ಪಬ್ಲಿಕ್ ಶಾಲೆಗಳಿವೆ ಎಂದು ದಾಖಲೆಗಳಲ್ಲಿ ನಮೂದಿತ ವಾಗಿದೆ. ಆದರೆ ವಾಸ್ತವದಲ್ಲಿ ಈ ಪಬ್ಲಿಕ್ ಶಾಲೆಗಳಿಗಾಗಿ ಹೊಸ ಕಟ್ಟಡ ಮತ್ತು ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಲ್ಲ. ಹಾಲಿ ಚಾಲ್ತಿಯಲ್ಲಿರುವ ಆಯ್ದ ಸರಕಾರಿ ಶಾಲೆಗಳನ್ನೇ ಪಬ್ಲಿಕ್ ಶಾಲೆಗಳೆಂದು ನಾಮಫಲಕ ಬದಲಿಸಿದ್ದಾರೆ. ಈ ಕೆಪಿಎಸ್ ಯೋಜನೆಯ ಅನುಸಾರ 1-10ನೇ ತರಗತಿಗಳನ್ನು ಪ್ರಾರಂಭಿಸಬೇಕು. ಆದರೆ ಇದುವರೆಗೂ 276 ಶಾಲೆಗಳಲ್ಲಿ 1-7ನೇ ತರಗತಿಗಳು ಮಾತ್ರವಿದೆ. ಇಲ್ಲಿ ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮಗಳಿಗೆ ಅವಕಾಶ ಕಲ್ಪಿಸಲಾಗಿದೆ. ಆದರೆ ವಿಷಯ ಗಳ ಬೋಧನೆಗೆ ಅಗತ್ಯವಾಗಿರುವ ಶಿಕ್ಷಕರ ನೇಮಕಾತಿಯಾಗಿಲ್ಲ. ಇಂಗ್ಲಿಷ್ ಮಾಧ್ಯಮದ ಶಾಲೆಗಳನ್ನು ಪ್ರಾರಂಭಿಸಿದ್ದರೂ ಸಹ ಅದಕ್ಕಾಗಿ ಇಂಗ್ಲಿಷ್ ಶಿಕ್ಷಕರಿಲ್ಲ. ಇಂಗ್ಲಿಷ್ ಭಾಷೆಯ ಪಠ್ಯಪುಸ್ತಕಗಳಿಲ್ಲ. ಶೌಚಾಲಯಗಳನ್ನು, ಗ್ರಂಥಾಲಯಗಳನ್ನು ಉತ್ತಮಪಡಿಸಿಲ್ಲ. ಕೆಪಿಎಸ್ ಅಂತರ್ಜಾಲ ತಾಣದಲ್ಲಿ ಹೇಳಿಕೊಂಡಂತೆ ಯಾವುದೇ ಸೌಲಭ್ಯಗಳೂ ಜಾರಿಗೊಂಡಿಲ್ಲ. ಇಂತಹ ನಿರ್ಲಕ್ಷ ಮತ್ತು ಧೋರಣೆಯ ಶಿಕ್ಷಣ ಇಲಾಖೆಯಿಂದ ಹೆಚ್ಚಿನದನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಹಾಗಿದ್ದಲ್ಲಿ ಈ ಪಬ್ಲಿಕ್ ಶಾಲೆಗಳೆಂದರೇನು? ಹಾಗೆ ಕರೆಯಲು ಬೇಕಾದ ಮಾನದಂಡವೇನು? ಇದಕ್ಕೆ ಶಿಕ್ಷಣ ಇಲಾಖೆಯ ಅಧಿಕಾರಿಗಳ ಬಳಿಯೂ ಉತ್ತರವಿಲ್ಲ. ಕೇವಲ ಸರಕಾರಗಳ ಸಾಧನೆಯಾಗಿ ಕಾಗದದ ಮೇಲಿದೆಯಷ್ಟೆ. ಆದರೆ ಪ್ರತೀ ಒಂದು ಪಬ್ಲಿಕ್ ಶಾಲೆ ಪ್ರಾರಂಭವಾದ ಪ್ರದೇಶದ 4 ಕಿ.ಮೀ. ವಿಸ್ತೀರ್ಣ ದಲ್ಲಿರುವ ಸರಾಸರಿ ಎರಡು ಸರಕಾರಿ ಶಾಲೆಗಳು ಮುಚ್ಚುತ್ತಿವೆ. ಅಲ್ಲಿ ಮಕ್ಕಳ ನೇಮಕಾತಿ ಆಗುತ್ತಿಲ್ಲ. ಪೋಷಕರು ಭ್ರಮೆಯಲ್ಲಿ ಹತ್ತಿರದ ಸರಕಾರಿ ಶಾಲೆಗಳನ್ನು ಬಿಟ್ಟು ದೂರದ ಪಬ್ಲಿಕ್ ಶಾಲೆಗಳಿಗೆ ತಮ್ಮ ಮಕ್ಕಳನ್ನು ಸೇರಿಸುತ್ತಿದ್ದಾರೆ. ಆದರೆ ಇದು ಸರಕಾರಿ ಶಾಲೆಗಳ ಮೇಲೆ, ಮಕ್ಕಳ ಕಲಿಕೆಯ ಮೇಲೆ ಪ್ರತಿಕೂಲ ಪರಿಣಾಮ ಬಿರುತ್ತಿದೆ
17 ಸೆಪ್ಟಂಬರ್ 2022ರಂದು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು ‘ಅಸ್ತಿತ್ವದಲ್ಲಿರುವ ಶಾಲೆಗಳಿಗೆ ಶಿಕ್ಷಕರನ್ನು ನೇಮಕಾತಿ ಮಾಡಿಕೊಳ್ಳಬೇಕಾಗಿದೆ. ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಬೇಕಾಗಿದೆ. ಹೀಗಾಗಿ ಹೊಸ ಪಬ್ಲಿಕ್ ಶಾಲೆಗಳನ್ನು ಪ್ರಾರಂಭಿಸುವುದಿಲ್ಲ’ ಎಂದು ಹೇಳಿದ್ದಾರೆ. ಇದು ನೇರವಾಗಿಯೇ ಪಬ್ಲಿಕ್ ಶಾಲೆಗಳ ವೈಫಲ್ಯವನ್ನು ತೋರಿಸುತ್ತದೆ.
ನಿಜದಲ್ಲಿ ಶಿಕ್ಷಣಕ್ಕೆ ರಾಜ್ಯ ಬಜೆಟ್‌ನ ಶೇ.26ರಷ್ಟು ಮತ್ತು ಜಿಡಿಪಿಯ ಶೇ.6ರಷ್ಟು ಹಣ ಹಂಚಿಕೆ ಮಾಡಬೇಕಾಗಿತ್ತು. ಆದರೆ ರಾಜ್ಯ ಸರಕಾರವು ಕ್ರಮವಾಗಿ ಶೇ.14.23 ಮತ್ತು ಶೇ.4.15ರಷ್ಟು ಕಡಿಮೆ ಮೊತ್ತವನ್ನು ಶಿಕ್ಷಣಕ್ಕೆ ಹಂಚಿಕೆ ಮಾಡಿದೆ.
ಮುಖ್ಯವಾಗಿ ಕಳೆದ 7 ವರ್ಷಗಳಲ್ಲಿ ದಿನ ಬಳಕೆಯ ವಸ್ತುಗಳ ಬೆಲೆ ಹತ್ತು ಪಟ್ಟು ದುಬಾರಿ ಯಾಗಿದೆ. ವಿದ್ಯುತ್, ನೀರಿನ ವೆಚ್ಚವೂ ದುಬಾರಿಯಾಗಿದೆ. ಹಣದುಬ್ಬರವೂ ಹೆಚ್ಚಾ ಗಿದೆ. ಆದರೆ ಶಿಕ್ಷಣಕ್ಕಾಗಿ ಸರಕಾರದ ವೆಚ್ಚ ಮಾತ್ರ ಅರ್ಧದಷ್ಟು ಕಡಿಮೆಯಾಗಿದೆ. ಪ್ರಾಥಮಿಕ ಶಿಕ್ಷಣದಲ್ಲಿ ಸಮಗ್ರ ಶಿಕ್ಷಣ ಅಭಿಯಾನ್‌ಗೆ 2022ರಲ್ಲಿ 37,383 ಕೋಟಿ ರೂ.ಹಂಚಿಕೆ ಮಾಡಿದ್ದಾರೆ. 2021ರಲ್ಲಿ 31,050 ಕೋಟಿ ರೂ., 2020ರಲ್ಲಿ 38,750 ಕೋಟಿ ರೂ.ಹಂಚಿಕೆ ಮಾಡಿದ್ದರು. ಅಂದರೆ ಎರಡು ವರ್ಷಗಳಲ್ಲಿ 1,367 ಕೋಟಿ ರೂ. ಕಡಿತಗೊಳಿಸಿದ್ದಾರೆ. ಇದರಿಂದಾಗಿ ಎಸ್‌ಎಸ್‌ಎನಲ್ಲಿ ರಾಜ್ಯಗಳಿಗೂ ಅನುದಾನದ ಹಂಚಿಕೆ ಕಡಿಮೆಯಾಗುತ್ತದೆ. ಈ ಕೊರತೆಯನ್ನು ರಾಜ್ಯ ಸರಕಾರವು ತನ್ನ ಬಜೆಟ್ ತುಂಬಿಕೊಳ್ಳುವ ಯಾವುದೇ ಚಿಂತನೆಯನ್ನು ಸಹ ಮಾಡುವುದಿಲ್ಲ
2022ರಲ್ಲಿ ಸ್ಕಾಲರ್‌ಶಿಪ್‌ಗೆ 350 ಕೋಟಿ ರೂ.ಹಂಚಿಕೆ ಮಾಡಿದ್ದಾರೆ. 2021ರಲ್ಲಿ 350 ಕೋಟಿ ರೂ., 2020ರಲ್ಲಿ 375 ಕೋಟಿ ರೂ.ಹಂಚಿಕೆ ಮಾಡಿದ್ದರು. ಅಂದರೆ 2ವರ್ಷಗಳಲ್ಲಿ 25 ಕೋಟಿ ಕಡಿತಗೊಳಿಸಿದ್ದಾರೆ. ಈ ಕೊರತೆಯನ್ನು ರಾಜ್ಯ ಸರಕಾರವು ತನ್ನ ಬಜೆಟ್ ತುಂಬಿಕೊಳ್ಳುವ ಯಾವುದೇ ಚಿಂತನೆಯನ್ನು ಸಹ ಮಾಡುವುದಿಲ್ಲ.
ರಾಜ್ಯ ಸರಕಾರಗಳ ಬಜೆಟ್‌ನ ಶೇ.72 ಪ್ರಮಾಣದ ಮೊತ್ತವು ಶಿಕ್ಷಕರ ವೇತನಕ್ಕೆ ಖರ್ಚಾ ಗುತ್ತದೆ. ಕರ್ನಾಟಕದ 30,000 ಶಿಕ್ಷಕರ ಹುದ್ದೆಗಳು ಖಾಲಿಯಿದೆ (1:30 ಅನುಪಾತದ ಆಧಾರದಲ್ಲಿ). ದೇಶದಾದ್ಯಂತ ಶೇ.10ರಷ್ಟು ಏಕೋಪಾದ್ಯಾಯ ಶಾಲೆಗಳಿವೆ. ಆದರೆ ಸರಕಾರವು ಶಿಕ್ಷಕರನ್ನು ನೇಮಿಸಿಕೊಳ್ಳುತ್ತಿಲ್ಲ. ಆದರೆ ಅತ್ಯಂತ ಕಡಿಮೆ ಸಂಬಳದಲ್ಲಿ ಅತಿಥಿ ಶಿಕ್ಷಕರನ್ನು ನೇಮಿಸಿಕೊಂಡು ಅವರನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಶೇ.3ರಷ್ಟು ಮೊತ್ತ ಆಡಳಿತದ ವೆಚ್ಚ, ಶೇ.10ರಷ್ಟು ಶಾಲೆಯ ಮೂಲಭೂತ ಸೌಕರ್ಯ, ಗುಣಮಟ್ಟ ಮತ್ತು ಶಿಕ್ಷಕರ ತರಬೇತಿಗೆ ಶೇ.1ರಷ್ಟು ವೆಚ್ಚವಾಗುತ್ತಿದೆ. ಅಂದರೆ ಗುಣ ಮಟ್ಟ ಶಿಕ್ಷಣ, ಶಿಕ್ಷಕರ ತರಬೇತಿ, ಮೂಲಭೂತ ಸೌಕರ್ಯಗಳಿಗೆ ಶೇ.30ಕ್ಕೂ ಹೆಚ್ಚಿನ ಪ್ರಮಾಣದಲ್ಲಿ ಹಣಕಾಸು ನೆರವು ದೊರಕಬೇಕಿತ್ತು. ಆದರೆ ಕೇವಲ ಶೇ.11ರಷ್ಟು ಮಾತ್ರ ಕೊಡುತ್ತಿದ್ದಾರೆ. ಇದು ಮಕ್ಕಳ ವ್ಯಾಸಂಗಕ್ರಮದ ಮೇಲೆ ದುಷ್ಪರಿಣಾಮ ಬೀರುತ್ತಿದೆ.
ಉದಾಹರಣೆಗೆ 2018ರ ಸಮೀಕ್ಷೆಯ ಪ್ರಕಾರ ಎರಡನೇ ತರಗತಿಯಲ್ಲಿ ಪಠ್ಯವನ್ನು ಓದುವ ಸಾಮರ್ಥ್ಯದ ಪ್ರಮಾಣ ಸರಾಸರಿ 9.3ರಷ್ಟಿತ್ತು, 3ನೇ ತರಗತಿಯಲ್ಲಿ 20.9, 4ನೇ ತರಗತಿಯಲ್ಲಿ 34.2, 5ನೇ ತರಗತಿಯಲ್ಲಿ 44.2ರಷ್ಟಿದೆ. ಆದರೆ ಇದನ್ನು ಉತ್ತಮ ಗೊಳಿಸಲು ಶಿಕ್ಷಕರ ತರಬೇತಿಗೆ ಮತ್ತು ಕಲಿಕಾ ಉಪಕರಣಗಳಿಗೆ ಸರಕಾರವು ಹಣ ಕೊಡುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಸರಕಾರಿ ಶಾಲೆಗಳು ಉಳಿಯುವ ಸಾಧ್ಯತೆಗಳೇ ಇಲ್ಲ. ಶೇ.66ರಷ್ಟಿರುವ ಬಡ ಕುಟುಂಬದ ಮಕ್ಕಳು ಗಣಮಟ್ಟದ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ.
ಈ ಎಲ್ಲಾ ಹೆಳವಂಡಗಳು ಸಾರ್ವಜನಿಕ ಶಿಕ್ಷಣವನ್ನು ದುರ್ಬಲಗೊಳಿಸುತ್ತಿವೆ. ಜೊತೆಗೆ ಪ್ರತೀ ಬಜೆಟ್ ಮಂಡನೆಯ ಸಂದರ್ಭದಲ್ಲಿ ಹಣಕಾಸು ಸಚಿವರು ಶಿಕ್ಷಣದ ಡಿಜಟಲೀಕರಣದ ಕುರಿತು ಉತ್ಸಾಹದಿಂದ ಪ್ರಸ್ತಾಪಿಸುತ್ತಾರೆ. ಶಿಕ್ಷಣ ಸಚಿವರೂ ಸಹ ಭವಿಷ್ಯದಲ್ಲಿ ಶೇ.40 ಪ್ರಮಾಣದಲ್ಲಿ ಆನ್‌ಲೈನ್ ಕಲಿಕೆ ಅನಿವಾರ್ಯ ಎಂದು ಪದೇ ಪದೇ ಹೇಳುತ್ತಿರುತ್ತಾರೆ. ಆದರೆ ಶಿಕ್ಷಣಕ್ಕೆ ಅತೀ ಕಡಿಮೆ ಮೊತ್ತವನ್ನು ಮೀಸಲಿಡುತ್ತಾರೆ ಮತ್ತು ಡಿಜಿಟಲೀಕರಣಕ್ಕೆ ನಯಾಪೈಸೆಯೂ ಉಳಿಯುವುದಿಲ್ಲ. ಹಾಗಿದ್ದ ಪಕ್ಷದಲ್ಲಿ ಶೇ.40ರಷ್ಟು ಆನ್‌ಲೈನ್ ಹೇಗೆ ಸಾಧ್ಯ ಎನ್ನುವ ಪ್ರಶ್ನೆಗೆ ಅದನ್ನು ಸಂಪೂರ್ಣವಾಗಿ ಖಾಸಗಿಯವರಿಗೆ ಹೊರಗುತ್ತಿಗೆ ಕೊಡಲಾಗುತ್ತದೆ ಎಂಬುದೇ ಉತ್ತರ. ಈಗಾಗಲೇ ಶಿಕ್ಷಕರ ತರಬೇತಿ ಶೇ.90ರಷ್ಟು ಖಾಸಗಿ ಸಂಸ್ಥೆಗಳಿಂದ ದೊರಕುತ್ತಿದೆ. ಒಮ್ಮೆ ಆನ್‌ಲೈನ್ ಶಿಕ್ಷಣದ ಜವಾಬ್ಧಾರಿಯನ್ನು ಖಾಸಗಿಯವರಿಗೆ ಹಸ್ತಾಂತರ ಮಾಡಿದ ನಂತರ ಸರಕಾರಿ ಶಾಲೆಗಳ ಅಸ್ತಿತ್ವವೂ ಸಹ ಪರಿಗಣನೆಗೆ ಬರುವುದಿಲ್ಲ.







