ಇಂದು ‘ಬಾಯಿ, ಮುಖ ಮತ್ತು ದವಡೆ ಶಸ್ತ್ರ ಚಿಕಿತ್ಸಕರ' ದಿನ

ದಂತ ವೈದ್ಯಕೀಯ ಕ್ಷೇತ್ರ ಎನ್ನುವುದು ವೈದ್ಯಕೀಯ ಶಾಸ್ತ್ರದ ಒಂದು ಅವಿಭಾಜ್ಯ ಅಂಗ. ಪ್ರಾಥಮಿಕವಾಗಿ ದಂತ ವೈದ್ಯಕೀಯ ಪದವಿ (B.D.S) ಪಡೆದ ಬಳಿಕ, ಸುಮಾರು ಒಂಭತ್ತು ವಿಭಾಗಗಳಲ್ಲಿ ಉನ್ನತ ವ್ಯಾಸಂಗ ಅಥವಾ ಸ್ನಾತಕೋತರ ಪದವಿ (M.D.S) ಪಡೆಯುವ ಅವಕಾಶವಿದೆ. ಇದರಲ್ಲಿ ಒಂದು ಶಸ್ತ್ರ ಚಿಕಿತ್ಸೆಗೆ ಸಂಬಂಧಿಸಿದ ಸ್ನಾತಕೋತ್ತರ ಪದವಿಯನ್ನು ಬಾಯಿ, ಮುಖ ಮತ್ತು ದವಡೆ ಶಾಸ್ತ್ (ORAL AND MAXILLOFACIAL SURERY) ಎಂದು ಕರೆಯಲಾಗುತ್ತದೆ. ಬಾಯಿ ಮುಖ ಮತ್ತು ದವಡೆ ತಜ್ಞರು ಸಾಮಾನ್ಯವಾಗಿ ಬಾಯಿ ಮುಖ ಮತ್ತು ದವಡೆಗೆ ಸಂಬಂಧಪಟ್ಟ ರೋಗಗಳಿಗೆ ಸಂಬಂಧಿಸಿದ ಶಸ್ತ್ರಚಿಕಿತ್ಸೆ ಮಾಡುತ್ತಾರೆ. ಅಪಘಾತಗಳಾಗಿ ಬಾಯಿ, ಮುಖ ಮತ್ತು ದವಡೆಗೆ ಏಟು ತಗಲಿ ದವಡೆ ಮುರಿದಾಗ, ಬಾಯಿ, ಮುಖ ಮತ್ತು ದವಡೆಯಲ್ಲಿ ಕ್ಯಾನ್ಸರ್ ಗಡ್ಡೆಗಳು ಬೆಳೆದಾಗ, ಸೀಳು ತುಟಿ ಮತ್ತು ಸೀಳು ಅಂಗಳ ನ್ಯೂನತೆ ಇದ್ದರೆ ಶಸ್ತ್ರಚಿಕಿತ್ಸೆಯ ಮುಖಾಂತರ ಸರಿಪಡಿಸಲಾಗುತ್ತದೆ. ವಿರೂಪಗೊಂಡ ಮುಖದ ಅಂದವನ್ನು ಹೆಚ್ಚಿಸಲು ಆರ್ಥೋಗ್ನಾತಿಕ್ ಸರ್ಜರಿಯ ಮುಖಾಂತರ ದವಡೆ ಮತ್ತು ಮುಖದ ಅಂದ ಹೆಚ್ಚಿಸಲು, ಬಾಯಿ ಮುಖ ಮತ್ತು ದವಡೆ ತಜ್ಞರು ಶಸ್ತ್ರ ಚಿಕಿತ್ಸೆ ಮಾಡುತ್ತಾರೆ. ಇದಲ್ಲದೆ ದವಡೆಯ ಕೀಲುಗಳಲ್ಲಿ ನ್ಯೂನತೆ ಇದ್ದಾಗ, ಬಾಯಿ ಮುಖ ಮತ್ತು ಕುತ್ತಿಗೆಯ ಸುತ್ತ ಕೀವು ತುಂಬಿಕೊಂಡು ಜೀವಕ್ಕೆ ಕುತ್ತು ಬಂದಾಗ, ದವಡೆಯ ಕೀಲು ಜಾರಿಕೊಂಡು ಬಾಯಿ ಮುಚ್ಚಲು ಸಾಧ್ಯವಾಗದಿದ್ದಾಗ, ದವಡೆಯ ಸುತ್ತ ಮುತ್ತಲಿನ ನರಗಳಲ್ಲಿ ತೊಂದರೆ ಇದ್ದಾಗ ಬಾಯಿ ಮುಖ ಮತ್ತು ದವಡೆ ತಜ್ಞರು ಶಸ್ತ್ರ ಚಿಕಿತ್ಸೆ ಮಾಡುತ್ತಾರೆ. ಅದೇ ರೀತಿ ಅಡ್ಡಾದಿಡ್ಡಿಯಾಗಿ ಬೆಳೆದ ಮೂರನೇ ದವಡೆ ಹಲ್ಲನ್ನು ತೆಗೆಯಲು ಬಾಯಿ ಮುಖ ಮತ್ತು ದವಡೆ ತಜ್ಞರ ಸೇವೆಯನ್ನು ಬಳಸಿ ಕೊಳ್ಳಲಾಗುತ್ತದೆ. ಜನರಲ್ಲಿ ಈ ದಂತ ವೈದಕೀಯ ಶಾಸ್ತ್ರದ ಶಸ್ತ್ರ ಚಿಕಿತ್ಸಾ ವಿಭಾಗದ ಬಗ್ಗೆ ಹೆಚ್ಚಿನ ಅರಿವು ಮತ್ತು ಜಾಗೃತಿ ಮೂಡಿಸುವ ದೃಷ್ಟಿಯಲ್ಲಿ ಪ್ರತೀ ವರ್ಷ ಭಾರತಾದ್ಯಂತ ‘ಬಾಯಿ ಮುಖ ಮತ್ತು ದವಡೆ ಶಸ್ತ್ರ ಚಿಕಿತ್ಸಕರ ದಿನ’’ ಎಂದು ಫೆಬ್ರವರಿ 13ರಂದು ಆಚರಿಸಲಾಗುತ್ತದೆ. 1969ರ ಫೆಬ್ರವರಿ 13 ರಂದು ಭಾರತೀಯ ಬಾಯಿ, ಮುಖ ಮತ್ತು ದವಡೆ ಶಸ್ತ್ರ ಚಿಕಿತ್ಸಕರ ಸಂಘ ಅಸ್ತಿತ್ವಕ್ಕೆ ಬಂದಿತು. ಭಾರತ ದೇಶವೊಂದರಲ್ಲಿಯೇ ಸುಮಾರು 25,000 ಬಾಯಿ ಮುಖ ಮತ್ತು ದವಡೆ ಶಸ್ತ್ರಚಿಕಿತ್ಸಕರು ಇದ್ದಾರೆ. ಪ್ರತೀ ವರ್ಷ ಯಾವುದಾದರೊಂದು ಧ್ಯೇಯ ವಾಕ್ಯ ಇಟ್ಟುಕೊಂಡು ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಸದ್ದಿಲ್ಲದೇ ನಡೆಯುತ್ತದೆ. 2015ರಿಂದ 2018ರವರೆಗೆ ಈ ಆಚರಣೆಯ ದ್ಯೇಯ ವಾಕ್ಯ “FACE IT CAMPAIGN” ಆಗಿರುತ್ತದೆ ಈ ಬರಹದಡಿಯಲ್ಲಿ ‘‘ರಸ್ತೆ ಸುರಕ್ಷಾ ನಿಯಮಗಳು ಮತ್ತು ಮುಖಾಂಗಗಳ ಅಪಘಾತ ಎಂಬ ಸಂದೇಶದೊಂದಿಗೆ ರಾಜ್ಯದಾದ್ಯಂತ ಜನರಲ್ಲಿ ರಸ್ತೆ ಸುರಕ್ಷಾ ನಿಯಮಗಳ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ನಡೆಸಲಾಗುತ್ತದೆ. 2020ರ ಆಚರಣೆಯ ಧ್ಯೇಯವಾಕ್ಯ ‘‘ಮುಖದ ವಿಕಲಾಂಗತೆ ನಿವಾರಣೆ’’ ಎಂಬು ದಾಗಿದೆ. 2023ರ ಆಚರಣೆಯ ಧ್ಯೇಯವಾಕ್ಯ Saving lifes, saving faces ಎಂಬುದಾಗಿದೆ.
ಭಾರತದಂತಹ ಮುಂದುವರಿಯುತ್ತಿರುವ ರಾಷ್ಟ್ರದಲ್ಲಿ ಮೂಲಭೂತ ಸೌಕರ್ಯ ಗಳ ಕೊರತೆಯಿಂದಾಗಿ ರಸ್ತೆಗಳ ನಿರ್ವಹಣೆ ಚೆನ್ನಾಗಿಲ್ಲದಿರುವುದರ ಜೊತೆಗೆ ಜನರಲ್ಲಿ ರಸ್ತೆ ಸುರಕ್ಷತಾ ನಿಯಮಗಳ ಬಗೆಗಿನ ಅಸಡ್ಡೆ, ಅಸಹಕಾರ ಮತ್ತು ನಿರ್ಲಕ್ಷದಿಂದಾಗಿ ಹೆಚ್ಚಿನ ಅಪಘಾತಗಳು ಮಾರಣಾಂತಿಕವಾಗಿ ಪರಿಣಮಿಸತೊಡಗಿದೆ. ಹೆಲ್ಮೆಟ್‌ಗಳನ್ನು ದ್ವಿಚಕ್ರ ವಾಹನ ಓಡಿಸುವವರು ಕಡ್ಡಾಯವಾಗಿ ಧರಿಸಿದಲ್ಲಿ ಶೇ.80ರಷ್ಟು ಪ್ರಾಣಾ ಪಾಯವನ್ನು ಕಡಿಮೆ ಮಾಡಬಹುದು. ಅದೇ ರೀತಿ ಕಾರು ಮತ್ತು ನಾಲ್ಕು ಚಕ್ರ ವಾಹನ ಗಳನ್ನು ಓಡಿಸುವವರು ಸೀಟು ಬೆಲ್ಟ್ ಧರಿಸಿದಲ್ಲಿ ಸುಮಾರು ಶೇ.75ರಷ್ಟು ಬಾಯಿ, ಮುಖ ಮತ್ತು ದವಡೆಗಳ ಅಪಘಾತ ಮತ್ತು ತಲೆಯ ಮೇಲಾಗುವ ಮಾರಣಾಂತಿಕ ಅಪಘಾತಗಳನ್ನು ತಡೆಯಬಹುದಾಗಿದೆ.
ಗೋಲ್ಡನ್ ಅವರ್
ವಿಶ್ವ ಆರೋಗ್ಯ ಸಂಸ್ಥೆ ವರದಿ ಪ್ರಕಾರ ವಿಶ್ವದ 199 ದೇಶಗಳಲ್ಲಿರಸ್ತೆ ಅಪಘಾತ ಸಂಖ್ಯೆಯಲ್ಲಿ ಭಾರತ ಮೊದಲ ಸ್ಥಾನದಲ್ಲಿದೆ. ವಿಶ್ವದಾದ್ಯಂತ ಸಾವನ್ನಪ್ಪುವ 10 ಜನರಲ್ಲಿ ಕನಿಷ್ಠ ಒಬ್ಬರು ಭಾರತದವರು. 2020 ರಲ್ಲಿ ಸುಮಾರು 3,66,000 ಸಾವಿರ ರಸ್ತೆ ಅಪಘಾತಗಳು ನಡೆದಿದ್ದು 1,30,000 ಮಂದಿ ಸಾವನ್ನಪ್ಪಿದ್ದಾರೆ ಮತ್ತು 3,50,000 ಕ್ಕೂ ಹೆಚ್ಚು ಮಂದಿ ಗಾಯ ಗೊಂಡಿದ್ದಾರೆ. 2022 ರಲ್ಲಿ ರಸ್ತೆ ಅಪಘಾತದ ಸಂಖ್ಯೆ 4,00,000ವನ್ನು ದಾಟಿದೆ ಎಂದು ಅಂಕಿ ಅಂಶಗಳಿಂದ ತಿಳಿದು ಬಂದಿದೆ.
ರಸ್ತೆ ಅಪಘಾತವಾದಾಗ ಮೊದಲ ಒಂದು ಗಂಟೆಯನ್ನು ‘ಗೋಲ್ಡನ್ ಅವರ್’ ಎಂದು ಕರೆಯುತ್ತಾರೆ. ಈ ಮೊದಲ 60 ನಿಮಿಷಗಳಲ್ಲಿ ತಕ್ಷಣವೇ ಚಿಕಿತ್ಸೆ ಮತ್ತು ಪ್ರಥಮ ಚಿಕಿತ್ಸೆ ನೀಡಬೇಕು. ಹಾಗಾದಲ್ಲಿ ಸಾವು ಮತ್ತು ನೋವಿನ ಪ್ರಮಾಣವನ್ನು ಕಡಿಮೆ ಮಾಡಬಹುದು. ಅಪಘಾತವಾದ ಕೂಡಲೇ ಮೆದುಳಿನ ಕಾಂಡ ಮುರಿತ, ಹೃದಯ ಸ್ತಂಭನ, ಮಹಾಪಧಮನಿ ಮತ್ತು ಇತರ ದೊಡ್ಡ ರಕ್ತನಾಳ ಸೀಳುವಿಕೆಯಿಂದ ಸಾವು ಕ್ಷಣಾರ್ಧದಲ್ಲಿ ಸಂಭವಿಸಬಹುದು. ಇದನ್ನು ತಪ್ಪಿಸಲು ಸಾಧ್ಯವಿಲ್ಲ. ಇದನ್ನು ಮೊದಲ ಟ್ರ್ರೈಮೋಡಲ್ ಪೀಕ್ ಎನ್ನುತ್ತಾರೆ. ಇನ್ನು ಎರಡನೇ ಟ್ರೈಮೋಡಲ್ ಪೀಕ್ ನಿಮಿಷಗಳಿಂದ ಒಂದು ಗಂಟೆಗಳ ಕಾಲ ಇರುತ್ತದೆ. ಈ ಸಂದರ್ಭದಲ್ಲಿ ಸಾವು ಸಂಭವಿಸಲು ಹಲವಾರು ಕಾರಣಗಳು ಇವೆೆ. ಮೆದುಳಿನ ಒಳಭಾಗದಲ್ಲಿ ರಕ್ತಸ್ರಾವ (ಸಬ್‌ಡ್ಯುರಲ್ ಹೆಮಟೋಮ) ಹೀಮೋಥೊರಾಕ್ಸ್, ಗುಲ್ಮ ಗ್ರಂಥಿ ಸೀಳುವಿಕೆ, ಮಾರಣಾಂತಿಕ ತೊಡೆಯ ಎಲುಬು ಮುರಿತ, ಆಂತರಿಕ ರಕ್ತಸ್ರಾವ, ಯಕೃತ್ ಸೀಳುವಿಕೆ ಮುಂತಾದ ಕಾರಣಗಳಿಂದ ರಕ್ತಸ್ರಾವ ಜಾಸ್ತಿಯಾಗಿ ರಕ್ತದೊತ್ತಡ ಕುಸಿದು ಸಾವು ಸಂಭವಿಸಬಹುದು.
ಈ ಸಾವುಗಳನ್ನು ಆದಷ್ಟು ಬೇಗ ಸೂಕ್ತ ಕ್ರಮಗಳನ್ನು ತೆಗೆದುಕೊಂಡರೆ ತಪ್ಪಿಸಬಹು ದಾಗಿದೆ. ಈ ಗುಂಪಿನ ರೋಗಿಗಳ ಚಿಕಿತ್ಸೆಯಿಂದ ‘ಗೋಲ್ಡನ್ ಅವರ್’ ಎಂಬ ಪರಿಕಲ್ಪನೆ ಹುಟ್ಟಿಕೊಂಡಿತು. ಈ ಗೋಲ್ಡನ್ ಅವರ್‌ನ ಮೊದಲ 10 ನಿಮಿಷಗಳನ್ನು ಪ್ಲಾಟಿನಂ ನಿಮಿಷಗಳು ಎಂದೂ ಕರೆಯುತ್ತಾರೆ. ಅಪಘಾತ ಸಂಭವಿಸಿದ 10 ನಿಮಿಷಗಳ ಒಳಗೆ ರೋಗಿಯನ್ನು ಸ್ಥಿರಗೊಳಿಸಿ ಆಸ್ಪತ್ರೆಗೆ ತರಬೇಕು. ಈ 10 ನಿಮಿಷಗಳಲ್ಲಿ ವೈದ್ಯರು ಅಥವಾ ಸಹಾಯಕರು ರೋಗಿಯನ್ನು ತಕ್ಷಣವೇ ಆಸ್ಪತ್ರೆಗೆ ತಲುಪಿಸುವ ವ್ಯವಸ್ಥೆ ಮಾಡಬೇಕು. ಹೆಚ್ಚಿನ ಸಂದರ್ಭಗಳಲ್ಲಿ ರಕ್ತಸ್ರಾವದಿಂದ ರೋಗಿ ಸಾವನ್ನಪ್ಪುತ್ತಾನೆೆ. ತಕ್ಷಣವೇ ಗುರುತಿಸಿ ಶೀಘ್ರವಾಗಿ ಆಸ್ಪತ್ರೆಗೆ ತಲುಪಿಸಿದಲ್ಲಿ ರೋಗಿಯ ಪ್ರಾಣವನ್ನು ರಕ್ಷಿಸಬಹುದಾಗಿದೆ. ಒಟ್ಟಿನಲ್ಲಿ ಅಪಘಾತವಾದ ಮೊದಲ ಒಂದು ಗಂಟೆ ಅತೀ ನಿರ್ಣಾಯಕ.







