ಎಲ್‌ಟಿಟಿಇ ಮುಖ್ಯಸ್ಥ ಪ್ರಭಾಕರನ್ ಜೀವಂತ: ತಮಿಳುನಾಡು ರಾಜಕಾರಣಿಯ ಹೇಳಿಕೆ

ಚೆನ್ನೈ, ಫೆ. 13: ಲಿಬರೇಶನ್ ಟೈಗರ್ಸ್ ಆಫ್ ತಮಿಳ್ ಈಳಂ (ಎಲ್‌ಟಿಟಿಇ)ನ ಮುಖ್ಯಸ್ಥ ವೇಲುಪಿಳ್ಳೆ ಪ್ರಭಾಕರನ್ ಜೀವಂತವಾಗಿದ್ದಾರೆ ಮತ್ತು ಆರೋಗ್ಯವಾಗಿದ್ದಾರೆ ಹಾಗೂ ಶೀಘ್ರವೇ ಸಾರ್ವಜನಿಕವಾಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ತಮಿಳುನಾಡಿನ ಹಿರಿಯ ರಾಜಕಾರಣಿ ಪಾಳ ನೆಡುಮಾರನ್ ಸೋಮವಾರ ಹೇಳಿದ್ದಾರೆ.
ಶ್ರೀಲಂಕಾದಲ್ಲಿ ಪ್ರತ್ಯೇಕ ತಮಿಳು ದೇಶಕ್ಕಾಗಿ ಸಶಸ್ತ್ರ ಹೋರಾಟ ನಡೆಸಿದ್ದ ಬಂಡುಕೋರ ನಾಯಕ ಮೃತಪಟ್ಟಿದ್ದಾರೆ ಎಂಬುದಾಗಿ ಶ್ರೀಲಂಕಾ ಸರಕಾರ ಘೋಷಿಸಿದ 14 ವರ್ಷಗಳ ಬಳಿಕ ಅವರು ಈ ಹೇಳಿಕೆ ನೀಡಿದ್ದಾರೆ.
ಶ್ರೀಲಂಕಾ ಸರಕಾರದ ವಿರುದ್ಧ ಗೆರಿಲ್ಲಾ ಯುದ್ಧ ನಡೆಸಿದ್ದ ಎಲ್‌ಟಿಟಿಇ ಸ್ಥಾಪಕ ಪ್ರಭಾಕರನ್, ಮುಳ್ಳಿವೈಕಲ್‌ನಲ್ಲಿ ಸೇನೆ ನಡೆಸಿದ ಕಾರ್ಯಾಚರಣೆಯಲ್ಲಿ ಮೃತಪಟ್ಟಿದ್ದಾರೆ ಎಂದು ಶ್ರೀಲಂಕಾ ಸರಕಾರವು 2009 ಮೇ 18ರಂದು ಘೋಷಿಸಿತ್ತು. ಅಂದು ಶ್ರೀಲಂಕಾದಲ್ಲಿ ಅಧ್ಯಕ್ಷ ಮಹಿಂದ ರಾಜಪಕ್ಸ ನೇತೃತ್ವದ ಸರಕಾರವಿತ್ತು.
‘‘ಎಲ್‌ಟಿಟಿಇ ಮುಖ್ಯಸ್ಥ ಪ್ರಭಾಕರನ್ ಜೀವಂತವಾಗಿದ್ದಾರೆ ಹಾಗೂ ಅವರು ಶೀಘ್ರವೇ ಸಾರ್ವಜನಿಕವಾಗಿ ಕಾಣಿಸಿಕೊಳ್ಳಲಿದ್ದಾರೆ. ಈ ವಿಷಯವನ್ನು ಜಗತ್ತಿಗೆ ಘೋಷಿಸಲು ನಾವು ಸಂತೋಷಪಡುತ್ತೇವೆ. ತಮಿಳ್ ಈಳಂ (ದೇಶ)ಕ್ಕಾಗಿನ ತನ್ನ ಯೋಜನೆಗಳನ್ನು ಅವರೇ ಘೋಷಿಸಲಿದ್ದಾರೆ’’ ಎಂದು ವಿಶ್ವ ತಮಿಳರ ಒಕ್ಕೂಟದ ಅಧ್ಯಕ್ಷ ನೆಡುಮಾರನ್ ತಂಜಾವೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು. ಈ ಘೋಷಣೆಯನ್ನು ಈಗ ಯಾಕೆ ಮಾಡಿದೆ ಎನ್ನುವುದನ್ನು ವಿವರಿಸಿದ ಅವರು, ‘‘ಶ್ರೀಲಂಕಾದಲ್ಲಿ ಸಿಂಹಳರ ಬಂಡಾಯದ ಬಳಿಕ ರಾಜಪಕ್ಸ ಸರಕಾರ ಪತನಗೊಂಡಿರುವುದು ಪೂರಕ ವಾವಾವರಣವನ್ನು ಸೃಷ್ಟಿಸಿದೆ. ಇದು ಅವರು (ಪ್ರಭಾಕರನ್) ಮತ್ತೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳಲು ಸರಿಯಾದ ಸಮಯವಾಗಿದೆ’’ ಎಂದು ಹೇಳಿಕೊಂಡರು.
ಆದರೆ, ಎಲ್‌ಟಿಟಿಇ ನಾಯಕ ಈಗೆಲ್ಲಿದ್ದಾರೆ ಎನ್ನುವ ಮಾಹಿತಿಯನ್ನು ಅವರು ನೀಡಲಿಲ್ಲ.
ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆಯಲ್ಲಿ ಪ್ರಭಾಕರನ್ ಪ್ರಧಾನ ಆರೋಪಿ. 1991ರಲ್ಲಿ ಶ್ರೀಪೆರುಂಬುದೂರ್‌ನಲ್ಲಿ ನಡೆದ ಆತ್ಮಹತ್ಯಾ ದಾಳಿಯಲ್ಲಿ ರಾಜೀವ್ ಗಾಂಧಿ ಮೃತಪಟ್ಟಿದ್ದರು.
ಮೃತ ಪ್ರಭಾಕರನ್‌ರ ಚಿತ್ರ, ವೀಡಿಯೊಗಳಿದ್ದವು
ಪ್ರಭಾಕರನ್ ಮೃತಪಟ್ಟಿದ್ದಾರೆ ಎಂಬುದಾಗಿ ಶ್ರೀಲಂಕಾ ಸರಕಾರವು 2009ರಲ್ಲಿ ಘೋಷಿಸಿದ ಬಳಿಕ, ಅವರ ಮೃತದೇಹದ್ದೆನ್ನಲಾದ ಹಲವಾರು ಚಿತ್ರಗಳು ಮತ್ತು ವೀಡಿಯೊಗಳು ಸಾರ್ವಜನಿಕರ ವೀಕ್ಷಣೆಗೆ ಲಭ್ಯವಾಗಿತ್ತು. ಅವುಗಳು ತಿರುಚಲಾದ ಚಿತ್ರಗಳು ಎಂಬುದಾಗಿ ಅಂದು ಹಲವರು ಅಭಿಪ್ರಾಯಪಟ್ಟಿದ್ದರು.
ಅದೇ ವೇಳೆ, ಒಪ್ಪಂದವೊಂದಕ್ಕೆ ಅನುಸಾರವಾಗಿ ಶರಣಾಗಲು ಬರುವಾಗ ಅಂತರ್‌ರಾಷ್ಟ್ರೀಯ ನಿಯಮಗಳಿಗೆ ವಿರುದ್ಧವಾಗಿ ಅವರನ್ನು ಗುಂಡಿಕ್ಕಿ ಕೊಲ್ಲಲಾಗಿತ್ತು ಎಂದು ಇತರ ಹಲವರು ಆರೋಪಿಸಿದ್ದರು. ಅವರು ಮೃತಪಟ್ಟಿದ್ದಾರೆ ಎಂಬ ಘೋಷಣೆಯಾದಾಗ ಅವರಿಗೆ 54 ವರ್ಷವಾಗಿತ್ತು.







