ಉಡುಪಿ ಜಿಲ್ಲೆಯ ಸಮುದ್ರದಲ್ಲಿ ಸಾವಿನ ಪ್ರಮಾಣ ಶೂನ್ಯಕ್ಕೆ ತರಲು ಪ್ರಯತ್ನ: ಜಿಲ್ಲಾಧಿಕಾರಿ ಕೂರ್ಮಾರಾವ್
ಮಲ್ಪೆಯಲ್ಲಿ ಕರಾವಳಿ ಭದ್ರತಾ ತರಬೇತಿ ಸಂಸ್ಥೆ ಉದ್ಘಾಟನೆ

ಉಡುಪಿ: ಜಿಲ್ಲೆಯ ಕರಾವಳಿ ಪ್ರದೇಶದಲ್ಲಿ ಗರಿಷ್ಠ ಭದ್ರತೆ ಮತ್ತು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವುದರ ಮೂಲಕ ಬೀಚ್, ಬಂದರು ಸೇರಿದಂತೆ ಸಮುದ್ರದಲ್ಲಿ ಸಂಭವಿಸುವ ಸಾವುಗಳನ್ನು ಶೂನ್ಯಕ್ಕೆ ತರುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಬೇಕಾಗಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ತಿಳಿಸಿದ್ದಾರೆ.
ಮಲ್ಪೆಯಲ್ಲಿರುವ ಕರಾವಳಿ ಕಾವಲು ಪೊಲೀಸ್ ಕೇಂದ್ರ ಕಚೇರಿಯಲ್ಲಿ ನೂತನವಾಗಿ ಆರಂಭಿಸಲಾದ ಕರಾವಳಿ ಭದ್ರತಾ ತರಬೇತಿ ಸಂಸ್ಥೆಯನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಸಾವಿನ ಸಂಖ್ಯೆ ಶೂನ್ಯಕ್ಕೆ ತರುವ ನಿಟ್ಟಿನಲ್ಲಿ ಜಿಲ್ಲೆಯ ಪೊಲೀಸ್ ಇಲಾಖೆ, ಸ್ಥಳೀಯ ಸಂಸ್ಥೆಗಳು ಹಾಗೂ ಮೀನುಗಾರಿಕೆ ಇಲಾಖೆಗಳು ಸೇರಿ ಪಡುಬಿದ್ರೆ, ಕಾಪು, ಮಲ್ಪೆ ಸೇರಿದಂತೆ ಮುಖ್ಯವಾದ ಬೀಚ್‌ಗಳಲ್ಲಿ ಎರಡು ವಾರದಲ್ಲಿ ಅಧ್ಯಯನ ಮಾಡಿ ವರದಿ ತಯಾರಿಸಬೇಕು. ತಂತ್ರಜ್ಞಾನ ಮತ್ತು ಸಂಪನ್ಮೂಲ ಬಳಸಿಕೊಂಡು ಅನಾಹುತಗಳು ಸಂಭವಿಸದಂತೆ ಕ್ರಮ ತೆಗೆದುಕೊಳ್ಳಬೇಕು. ಈ ನಿಟ್ಟಿನಲ್ಲಿ ಈ ತರಬೇತಿ ಕೇಂದ್ರದ ಮೂಲಕ ಎಲ್ಲಾ ವಿಧದ ತರಬೇತಿಯನ್ನು ಕರಾವಳಿ ಕಾವಲು ಪೊಲೀಸ್ ಸಿಬ್ಬಂದಿಗೆ ನೀಡಬೇಕು ಎಂದರು.
ಕರಾವಳಿ ಕಾವಲು ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ಬದಲಾದ ಸನ್ನಿವೇಶ ಗಳಿಗೆ ತಕ್ಕಂತೆ ಅಗತ್ಯ ತಾಂತ್ರಿಕ ತರಬೇತಿಯನ್ನು ನಿರಂತರವಾಗಿ ಪಡೆಯುವ ಮೂಲಕ ಸಮುದ್ರದ ಮೂಲಕ ಎದುರಾಗುವ ಯಾವುದೇ ರೀತಿಯ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಸನ್ನದ್ದವಾಗಿರಬೇಕು. ಇದರಲ್ಲಿ ಸ್ಥಳೀಯ ಮೀನುಗಾರರು ಹಾಗೂ ಸಾರ್ವಜನಿಕರನ್ನು ಕೂಡ ಸೇರಿಸಿಕೊಳ್ಳಬೇಕು ಎಂದು ಅವರು ತಿಳಿಸಿದರು.
ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ ಹಾಕೆ ಮಚ್ಚೀಂದ್ರ ಮಾತನಾಡಿ, ಇತ್ತೀಚೆಗೆ ಸಮುದ್ರದ ಮೂಲಕ ಹೆಚ್ಚಿನ ಕಾನೂನು ಬಾಹಿರ ಚಟುವಟಿಕೆಗಳು ನಡೆಯುತ್ತಿದ್ದು ಇವುಗಳನ್ನು ನಿಯಂತ್ರಿಸಲು ಪೊಲೀಸ್ ಸಿಬ್ಬಂದಿಗೆ ನಿರಂತರವಾಗಿ ನೂತನ ಮತ್ತು ತಾಂತ್ರಿಕ ತರಬೇತಿಯ ಅಗತ್ಯವಿದೆ ಎಂದು ಹೇಳಿದರು.
ಮಂಗಳೂರಿನ ಆಂತರಿಕ ಭದ್ರತಾ ವಿಭಾಗದ ಪೊಲೀಸ್ ಅಧೀಕ್ಷಕ ಡಾ.ಎ. ಎನ್.ಪ್ರಕಾಶ್ ಗೌಡ ಮಾತನಾಡಿದರು. ಕರಾವಳಿ ಕಾವಲು ಪೊಲೀಸ್ ಮಲ್ಪೆ ಪೊಲೀಸ್ ಅಧೀಕ್ಷಕ ಹಾಗೂ ಕರಾವಳಿ ಭದ್ರತಾ ತರಬೇತಿ ಸಂಸ್ಥೆಯ ಪ್ರಾಂಶು ಪಾಲ ಅಬ್ದುಲ್ ಅಹದ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕರಾವಳಿ ಕಾವಲು ಪೊಲೀಸ್ ನಿರೀಕ್ಷಕ ಪ್ರಮೋದ್ ಕುಮಾರ್ ಸ್ವಾಗತಿಸಿ ದರು. ಕರಾವಳಿ ಕಾವಲು ಪೊಲೀಸ್ ಡಿವೈಎಸ್ಪಿಟಿ.ಎಸ್.ಸುಲ್ಫಿ ವಂದಿಸಿದರು. ಎಸ್ಸೈ ಮನಮೋಹನ್ ರಾವ್ ಕಾರ್ಯಕ್ರಮ ನಿರೂಪಿಸಿದರು.
‘ಕರಾವಳಿ ಭದ್ರತಾ ತರಬೇತಿ ಸಂಸ್ಥೆ ತರಬೇತಿ ಸಂಸ್ಥೆ ಸ್ಥಾಪನೆಗಾಗಿ ಈ ಹಿಂದೆ ಜಿಲ್ಲೆಯ ಕೋಡಿಕನ್ಯಾನದಲ್ಲಿ ಮಂಜೂರಾದ 25 ಎಕರೆ ಜಾಗವನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಜಂಟಿಯಾಗಿ ಕಾರ್ಯಪ್ರವೃತರಾಗಬೇಕು. ಇದಕ್ಕೆ ಬೇಕಾದ ಸಂಪನ್ಮೂಲ ಕ್ರೋಡಿಕರಣಕ್ಕೆ ಪ್ರಯತ್ನ ಮಾಡಬಹುದಾಗಿದೆ’
-ಎಂ.ಕೂರ್ಮಾರಾವ್, ಜಿಲ್ಲಾಧಿಕಾರಿ
ಸಿಬ್ಬಂದಿಗೆ ಎರಡು ವಾರಗಳ ಕಾಲ ತರಬೇತಿ
ರಾಜ್ಯದಲ್ಲಿ ಈಗಾಗಲೇ ಭೂಮಿ, ವಾಯು ಪ್ರದೇಶದ ರಕ್ಷಣೆಗೆ ಪೊಲೀಸ್ ಸಿಬ್ಬಂದಿಗೆ ತರಬೇತಿ ನೀಡಲಾಗುತ್ತಿದೆ. ಇದೀಗ ಜಲ ಪ್ರದೇಶದಲ್ಲಿ ರಕ್ಷಣೆಗೆ ಬೇಕಾದ ತರಬೇತಿಯನ್ನು ನೀಡಲು ಕರಾವಳಿ ಭದ್ರತಾ ತರಬೇತಿಯನ್ನು ಆರಂಭಿಸಲಾಗಿದೆ. ಈ ಮೂಲಕ ಮೂರು ವಿಭಾಗದಲ್ಲಿಯೂ ರಾಜ್ಯದ ರಕ್ಷಣೆ ಸಾಧ್ಯವಾಗಲಿದೆ ಎಂದು ಕರಾವಳಿ ಕಾವಲು ಪೊಲೀಸ್ ಮಲ್ಪೆ ಪೊಲೀಸ್ ಅಧೀಕ್ಷಕ ಅಬ್ದುಲ್ ಅಹದ್ ತಿಳಿಸಿದರು.
ಈ ತರಬೇತಿ ಕೇಂದ್ರದಲ್ಲಿ ಕರಾವಳಿ ಕಾವಲು ಪೊಲೀಸ್ ವಿಭಾಗದ ಆಯ್ದ ಸಿಬ್ಬಂದಿಗೆ 2 ವಾರಗಳ ಕಾಲ ತರಬೇತಿ ನೀಡಲಾಗುತ್ತದೆ. ನೌಕಾಪಡೆ, ಕೋಸ್ಟ್ ಗಾರ್ಡ್ ಹಾಗೂ ಗಡಿ ಭದ್ರತಾ ಪಡೆದ ನಿವೃತ್ತ ಅಧಿಕಾರಿಗಳು ತರಬೇತಿ ನೀಡಲಿದ್ದಾರೆ. ತರಬೇತಿಯಲ್ಲಿ ಶೇ.30ರಷ್ಟು ಪ್ರಾಕ್ಟಿಕಲ್ ಕೂಡ ಇರುತ್ತದೆ. ಈಗಾಗಲೇ ಕರಾವಳಿ ಕಾವಲು ಪೊಲೀಸ್ 56 ಸಿಬ್ಬಂದಿ ಗುಜರಾತಿನಲ್ಲಿರುವ ಓಖಾದಲ್ಲಿ ಈಗಾಗಲೇ ತರಬೇತಿ ಪಡೆದುಕೊಂಡಿದ್ದಾರೆ ಎಂದರು.