ವಿಶ್ವಕಪ್ ವಿಜೇತ ಇಂಗ್ಲೆಂಡ್‌ನ ಮಾಜಿ ನಾಯಕ ಇಯಾನ್ ಮೊರ್ಗನ್ ಎಲ್ಲ ಮಾದರಿ ಕ್ರಿಕೆಟ್‌ನಿಂದ ನಿವೃತ್ತಿ

ಲಂಡನ್, ಫೆ.13: ಇಂಗ್ಲೆಂಡ್‌ನ ಚೊಚ್ಚಲ ಏಕದಿನ ವಿಶ್ವಕಪ್ ವಿಜೇತ ತಂಡದ ಮಾಜಿ ನಾಯಕ ಇಯಾನ್ ಮೊರ್ಗನ್(Eoin Morgan ) ಸೋಮವಾರ ಎಲ್ಲ ಮಾದರಿಯ ಕ್ರಿಕೆಟ್‌ನಿಂದ ನಿವೃತ್ತಿ ಪ್ರಕಟಿಸಿದ್ದಾರೆ.
ಮೊರ್ಗನ್ 2019ರಲ್ಲಿ ಇಂಗ್ಲೆಂಡ್ ತಂಡ ಮೊದಲ ಬಾರಿ 50 ಓವರ್ ವಿಶ್ವಕಪ್ ಜಯಿಸಲು ನೇತೃತ್ವವಹಿಸಿದ್ದು, ಟ್ವಿಟರ್‌ನಲ್ಲಿ ಹೇಳಿಕೆಯೊಂದರಲ್ಲಿ ಪ್ರಕಟಿಸಿ ನಿವೃತ್ತಿ ನಿರ್ಧಾರ ತಿಳಿಸಿದ್ದಾರೆ.
‘‘ಸುದೀರ್ಘ ಚರ್ಚೆಯ ನಂತರ ಕ್ರಿಕೆಟ್ ಬಿಟ್ಟು ಹೋಗಲು ಇದುವೇ ಸೂಕ್ತ ಸಮಯ ಎಂದು ಭಾವಿಸಿದ್ದೇನೆ. ವೃತ್ತಿಪರ ಕ್ರಿಕೆಟ್ ಆಡುವಾಗಿನ ಸಾಹಸ ಹಾಗೂ ಸವಾಲುಗಳಿಂದ ನಾನೀಗ ವಂಚಿತನಾಗುವುದರಲ್ಲಿ ಸಂಶಯವಿಲ್ಲ. ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯ ನಂತರ ನನ್ನ ಪ್ರೀತಿಪಾತ್ರರೊಂದಿಗೆ ಹೆಚ್ಚು ಸಮಯ ಕಳೆಯುವೆ. ಪ್ರತಿಯೊಂದು ಕ್ಷಣವನ್ನು ಆನಂದಿಸಿದ್ದೇನೆ. ಎಲ್ಲ ಕ್ರೀಡಾಪಟುವಿನಂತೆ ವೃತ್ತಿಜೀವನದಲ್ಲಿ ಅನೇಕ ಏಳು-ಬೀಳುಗಳನ್ನು ಕಂಡಿದ್ದೇನೆ. ಕುಟುಂಬ, ಸ್ನೇಹಿತರ ಸಹಕಾರ ಸದಾ ಇತ್ತು. ಈ ಸಂದರ್ಭದಲ್ಲಿ ನನ್ನ ಪತ್ನಿ, ಕುಟುಂಬ, ಸ್ನೇಹಿತರು, ಕೋಚ್, ಸಹ ಆಟಗಾರರು, ಅಭಿಮಾನಿಗಳೀಗೆ ಧನ್ಯವಾದಗಳನ್ನು ಹೇಳಲು ಇಚ್ಛಿಸುತ್ತೇನೆ’’ ಎಂದು ವಿದಾಯದ ಸಂದೇಶದಲ್ಲಿ ಮೊರ್ಗನ್ ತಿಳಿಸಿದ್ದಾರೆ.
ಐರ್‌ಲ್ಯಾಂಡ್‌ನ ಡಬ್ಲಿನ್ ಮೂಲದ ಮೊರ್ಗನ್ 16ನೇ ವಯಸ್ಸಿನಲ್ಲಿ ಐರ್‌ಲ್ಯಾಂಡ್ ತಂಡದ ಪರ ಏಕದಿನ ಕ್ರಿಕೆಟಿಗೆ ಪಾದಾರ್ಪಣೆಗೈದಿದ್ದರು. 2009ರಲ್ಲಿ ಇಂಗ್ಲೆಂಡ್‌ಗೆ ತೆರಳಿದ್ದರು. ಇಂಗ್ಲೆಂಡ್‌ನ ಪರ 2009 ಹಾಗೂ 2022ರ ನಡುವೆ 16 ಟೆಸ್ಟ್, 248 ಏಕದಿನ ಹಾಗೂ 115 ಟಿ-20 ಪಂದ್ಯಗಳನ್ನು ಆಡಿದ್ದಾರೆ. 16 ಟೆಸ್ಟ್‌ನಲ್ಲಿ 700 ರನ್ ಗಳಿಸಿದ್ದರು.
ಏಕದಿನ ಹಾಗೂ ಟ್ವೆಂಟಿ-20 ಕ್ರಿಕೆಟ್‌ನ ಶ್ರೇಷ್ಠ ನಾಯಕನಾಗಿದ್ದ ಮೊರ್ಗನ್ 126 ಏಕದಿನ ಹಾಗೂ 72 ಟಿ-20 ಪಂದ್ಯಗಳಲ್ಲಿ ಇಂಗ್ಲೆಂಡ್ ಸಾರಥ್ಯವಹಿಸಿದ್ದು, ಎರಡೂ ಮಾದರಿಯ ಕ್ರಿಕೆಟ್‌ನಲ್ಲಿ 118 ಗೆಲುವು ಸಾಧಿಸಿರುವುದು ಕೂಡ ದಾಖಲೆಯಾಗಿದೆ.