''ಸಾಲಗಾರ ರಾಜ್ಯವಾಗುವಂತೆ ಮಾಡಿ ಖುಷಿಪಡುತ್ತಿರುವ ನಿಮ್ಮನ್ನು ಕನ್ನಡಿಗರು ಹೇಗೆ ಸ್ವಾಗತಿಸಬೇಕು ಹೇಳಿ?''
ಪ್ರಧಾನಿ ಮೋದಿ, ಅಮಿತ್ ಶಾಗೆ ಸಿದ್ದರಾಮಯ್ಯ ಪ್ರಶ್ನೆ

ಬೆಂಗಳೂರು, ಫೆ. 13: ‘ಕರ್ನಾಟಕದಿಂದ ಸರ್ವಸ್ವವನ್ನು ಕಿತ್ತುಕೊಂಡು ಅನುದಾನ ಕೊಡದೆ ಅನ್ಯಾಯ ಮಾಡಿ ರಾಜ್ಯವನ್ನು ಅಭಿವೃದ್ಧಿಯಲ್ಲಿ ಹಿಂದಕ್ಕೆ ತಳ್ಳಿ, ಸಾಲಗಾರ ರಾಜ್ಯವಾಗುವಂತೆ ಮಾಡಿ ವಿಕೃತ ಖುಷಿ ಪಡುತ್ತಿರುವ ನಿಮ್ಮನ್ನು ಕನ್ನಡಿಗರು ಹೇಗೆ ಸ್ವಾಗತಿಸಬೇಕು ಹೇಳಿ ಮೋದಿ ಮತ್ತು ಅಮಿತ್ ಶಾ ಅವರೇ?’ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಸೋಮವಾರ ಪ್ರಧಾನಿ ಮೋದಿಗೆ ಆರನೇ ಕಂತಿನಲ್ಲಿ 14 ಪ್ರಶ್ನೆಗಳನ್ನು ಕೇಳಿದ ಸಿದ್ದರಾಮಯ್ಯ, ಮೋದಿ ಮತ್ತು ಅಮಿತ್ ಶಾ ಅವರೆ ಚುನಾವಣೆ ಹತ್ತಿರ ಬರುತ್ತಿರುವುದರಿಂದ ಪದೇ ಪದೇ ಕರ್ನಾಟಕಕ್ಕೆ ಬರುತ್ತಿದ್ದೀರಿ. ನಿಮಗೆ ಪ್ರವಾಹ ಬಂದಾಗ ನೆನಪಾಗದ ಕರ್ನಾಟಕ, ಆಕ್ಸಿಜನ್ ಇಲ್ಲದೆ ರಾಜ್ಯದಲ್ಲಿ ಕೋವಿಡ್ ರೋಗಿಗಳು ಮರಣ ಹೊಂದಿದಾಗ ನೆನಪಾಗದ ಕರ್ನಾಟಕ ವಿಮಾನ ಹಾರಿಸುವಾಗ ನೆನಪಾಗುತ್ತದೆ’ ಎಂದು ವಾಗ್ದಾಳಿ ನಡೆಸಿದ್ದಾರೆ.
‘ನೀವು ಕರ್ನಾಟಕಕ್ಕೆ ಬಂದಾಗಲೆಲ್ಲ ನಾನು ಮತ್ತು ರಾಜ್ಯದ ಜನರು ಹಲವು ಪ್ರಶ್ನೆಗಳನ್ನು ಕೇಳಿದ್ದೇವೆ. ಈ ಪ್ರಶ್ನೆಗಳಿಗೆ ಉತ್ತರ ನೀಡುವಂತಹ ಯಾವ ದಿಟ್ಟತನವನ್ನೂ, ಧೈರ್ಯವನ್ನೂ ನೀವು ತೋರಿಸಿಲ್ಲ. ಹಾಗಾಗಿ ಕರ್ನಾಟಕಕ್ಕೆ ನಿಮ್ಮ ನೇತೃತ್ವದ ಬಿಜೆಪಿ ಸರಕಾರ ಅನ್ಯಾಯ ಮಾಡಿದೆ ಎಂಬುದನ್ನು ಒಪ್ಪಿಕೊಂಡಂತಾಗಿದೆ. ಪ್ರಶ್ನೆಗಳು ಮುಗಿದಿಲ್ಲ. ಇಂದೂ ಕೆಲವು ಪ್ರಶ್ನೆಗಳನ್ನು ಕೇಳುತ್ತಿದ್ದೇನೆ ಉತ್ತರಿಸುವ ಧೈರ್ಯ ತೋರಿಸುತ್ತಿರ ಎಂದು ನಂಬಿದ್ದೇನೆ’ ಎಂದು ಅವರು ತಿಳಿಸಿದ್ದಾರೆ.
‘2014ರಲ್ಲಿ ತಾವು ಅಧಿಕಾರಕ್ಕೆ ಬಂದ ದಿನದಿಂದ ಕೇಂದ್ರ ಸರಕಾರವು ಇದುವರೆಗೆ ಕರ್ನಾಟಕದಿಂದ ಆದಾಯ ತೆರಿಗೆ, ಕಾಪೆರ್Çರೇಟ್ ತೆರಿಗೆ, ಜಿಎಸ್‍ಟಿ ಹಾಗೂ ಜಿಎಸ್‍ಟಿ ಬರುವುದಕ್ಕೂ ಪೂರ್ವದಲ್ಲಿದ್ದ ವಿವಿಧ ರೀತಿಯ ತೆರಿಗೆಗಳು, ಅಡಿಷನಲ್ ಎಕ್ಸೈಸ್ ಡ್ಯೂಟಿ, ವಿವಿಧ ಸೆಸ್ಸುಗಳು, ಸರ್ ಛಾರ್ಜುಗಳು, ಕಸ್ಟಮ್ಸ್ ಡ್ಯೂಟಿ ಹಾಗೂ ಇತರೆ ಎಲ್ಲ ಮೂಲಗಳಿಂದ ವರ್ಷವಾರು ಸಂಗ್ರಹಿಸಿದ ಸಂಪನ್ಮೂಲಗಳೆಷ್ಟು?’ ಎಂದು ಪ್ರಶ್ನಿಸಿದ್ದಾರೆ.
ಹಾಗೆಯೆ ಗುಜರಾತು, ಉತ್ತರಪ್ರದೇಶ, ಮಹಾರಾಷ್ಟ್ರ, ಮಧ್ಯಪ್ರದೇಶ, ಪಶ್ಚಿಮಬಂಗಾಳ ಮುಂತಾದ ದೊಡ್ಡವಾದ ಎಂಟು ರಾಜ್ಯಗಳಿಂದ ಎಷ್ಟು ಸಂಗ್ರಹ ಮಾಡುತ್ತಿದ್ದೀರಿ ಎಂಬುದನ್ನು ರಾಜ್ಯವಾರು ಮಾಹಿತಿ ಕೊಡಿ?, ಕೇಂದ್ರವು ಕರ್ನಾಟಕದಿಂದ ಒಟ್ಟಾರೆ ಸಂಗ್ರಹಿಸಿದ ಆದಾಯದಲ್ಲಿ ಕರ್ನಾಟಕಕ್ಕೆ ವಾಪಸ್ಸು ಕೊಟ್ಟಿದ್ದೆಷ್ಟು? ಎಷ್ಟು ತೆರಿಗೆ ಪಾಲು ಕೊಟ್ಟಿದ್ದೀರಿ? ಕೇಂದ್ರ ಪುರಸ್ಕøತ ಯೋಜನೆಗಳಿಗೆ ಎಷ್ಟು ಕೊಟ್ಟಿದ್ದೀರಿ? ಎಷ್ಟು ಕಿಮೀ ಹೆದ್ದಾರಿ ನಿರ್ಮಿಸಿದ್ದೀರಿ, ಎಷ್ಟು ಕಿಮೀ ರೈಲ್ವೆ ನಿರ್ಮಿಸಿದ್ದೀರಿ? ಎಷ್ಟು ವಿಶೇಷ ಅನುದಾನ ಕೊಟ್ಟಿದ್ದೀರಿ? ಕರ್ನಾಟಕದ ರೈತರಿಗೆ, ಕಾರ್ಮಿಕರಿಗೆ, ವ್ಯಾಪಾರಿಗಳಿಗೆ, ಸಣ್ಣ ಪುಟ್ಟ ಉದ್ಯಮಿಗಳಿಗೆ, ಮೀನುಗಾರರಿಗೆ, ಪರಿಶಿಷ್ಟ ಜಾತಿ, ಪಂಗಡಗಳ ಜನರಿಗೆ, ಮಹಿಳೆಯರಿಗೆ, ನೇಕಾರರಿಗೆ, ಮಕ್ಕಳ ಕಲ್ಯಾಣಕ್ಕೆ ಎಷ್ಟು ಖರ್ಚು ಮಾಡಿದ್ದೀರಿ? ಎಂದು ಅವರು ಕೇಳಿದ್ದಾರೆ.
‘ಅಮಿತ್ ಶಾ ಅವರೇ ಕರಾವಳಿಯವರು ಅಡಿಕೆ ಬೆಳೆಯುತ್ತಾರೆ, ಗುಜರಾತಿನವರು ಬಳಸುತ್ತಾರೆ’ ಎಂದು ಹೇಳಿದ್ದೀರಿ? ಆದರೆ ಕಾಂಗ್ರೆಸ್ ಸರಕಾರ ಅಧಿಕಾರದಲ್ಲಿದ್ದಾಗ ಅಡಿಕೆ ಬೆಲೆ 90ಸಾವಿರ ರೂ ದಾಟಿತ್ತು. ಈಗ 40-45 ಸಾವಿರ ರೂ.ಗೆ ಕುಸಿದಿದೆ. ಈ ಪ್ರಮಾಣದಲ್ಲಿ ಕುಸಿಯಲು ಕಾರಣವೇನು? ಲಭ್ಯ ಮಾಹಿತಿಯ ಪ್ರಕಾರ ಬೇರೆ ಬೇರೆ ದೇಶಗಳಿಂದ 65ಸಾವಿರ ಟನ್ ಅಡಿಕೆಯನ್ನು ಆಮದು ಮಾಡಿಕೊಳ್ಳುತ್ತಿರುವುದು ಕಾರಣವಾ ಅಥವಾ ಗುಜರಾತಿನ ವ್ಯಾಪಾರಿಗಳು ಕರಾವಳಿಯ ಅಡಿಕೆ ಕೊಳ್ಳುವುದನ್ನು ನಿಲ್ಲಿಸಿದ್ದಾರಾ? ಕರ್ನಾಟಕದ ಅಡಿಕೆ, ತೆಂಗು, ಮೆಣಸು, ಕಾಫಿ ಮುಂತಾದ ಬೆಳೆಗಾರರಿಗೆ ಅನ್ಯಾಯ ಮಾಡುತ್ತಿರುವುದು ಯಾರು?’ ಎಂದು ಅವರು ಪ್ರಶ್ನೆ ಮಾಡಿದ್ದಾರೆ.
‘ಸರಕಾರಿ ಸ್ವಾಮ್ಯದ ಬ್ಯಾಂಕುಗಳಲ್ಲಿ ಸಾಲ ಮಾಡಿ ತೀರಿಸದೆ ದೇಶ ಬಿಟ್ಟು ಓಡಿ ಹೋದ 28 ಜನ ಉದ್ಯಮಿಗಳಲ್ಲಿ 27ಜನ ಗುಜರಾತ್ ಮೂಲದವರು. ಅವರ ಸಾಲಮನ್ನಾ ಮಾಡಲು ಬರೋಡಾ ಬ್ಯಾಂಕು ಮುಂತಾದ ಗುಜರಾತ್ ಮೂಲದ ಬ್ಯಾಂಕುಗಳನ್ನು ಖಾಲಿ ಮಾಡಿದಿರಿ. ಆದುದರಿಂದ ಕರ್ನಾಟಕ ಮೂಲದ ಲಕ್ಷಾಂತರ ಕೋಟಿ ಸಂಪತ್ತಿದ್ದ ಬ್ಯಾಂಕುಗಳನ್ನು ಕಿತ್ತುಕೊಂಡಿದ್ದೀರಿ. ಇದರಿಂದ ಕನ್ನಡಿಗರ ಐಡೆಂಟಿಟಿ ಹೋಯ್ತು, ನಮ್ಮ ಸಂಪತ್ತು ಹೋಯ್ತು, ನಮ್ಮ ಯುವಕ ಯುವತಿಯರಿಗೆ ಸಿಗುತ್ತಿದ್ದ 1ಲಕ್ಷ ಉದ್ಯೋಗಗಳೂ ಹೋದವು, ಈ ಅನ್ಯಾಯಕ್ಕೆ ಕಾರಣ ಯಾರು?’
-ಸಿದ್ದರಾಮಯ್ಯ ವಿಪಕ್ಷ ನಾಯಕ
-------------------------------------------
‘ಅದಾನಿಗೆ ದೇಶದ ಸಂಪತ್ತನ್ನೆಲ್ಲ ಬೀಡುಬೀಸಾಗಿ ಕೊಟ್ಟು ಎಲ್‍ಐಸಿ ಮತ್ತು ಎಸ್‍ಬಿಐ ಮುಂತಾದ ಸಂಸ್ಥೆಗಳನ್ನು ಸಂಕಷ್ಟಕ್ಕೆ ಸಿಲುಕಿಸಿದ್ದೀರಿ. ಇದರಿಂದ ಬಡವರು ಮತ್ತು ಮಧ್ಯಮವರ್ಗದ ಜನರ ಉಳಿತಾಯ ಲೂಟಿ ಹೊಡೆಯಲು ಅವಕಾಶ ಕೊಟ್ಟು ದೇಶಕ್ಕೆ ದ್ರೋಹ ಮಾಡಿದ್ದೀರಿ. ಲೋಕಸಭೆಯಲ್ಲಿ ಅದಾನಿ ಕುರಿತು ವಿಪಕ್ಷಗಳು ಪ್ರಶ್ನೆ ಎತ್ತಿದರೆ ಅದಕ್ಕೆ ಉತ್ತರ ಕೊಡುವುದು ಬಿಟ್ಟು ಆತ್ಮರತಿಯಲ್ಲಿ ತೊಡಗಿಬಿಟ್ಟಿರಿ. ರಾಜ್ಯಸಭೆ ಮತ್ತು ಲೋಕಸಭೆಗೆ ಉತ್ತರ ನೀಡದೆ ನಟನೆ ಮಾಡಬಹುದು. ಆದರೆ, ದೇಶದ ಜನರಿಗೆ ನೀವು ಉತ್ತರ ಕೊಡಲೇಬೇಕಲ್ಲ? ಆ ಉತ್ತರವನ್ನು ಉತ್ತರವನ್ನು ಕರ್ನಾಟಕದಲ್ಲಿಯೆ ಕೊಡಿ’
-ಸಿದ್ದರಾಮಯ್ಯ ವಿಪಕ್ಷ ನಾಯಕ







