21ವರ್ಷ ಕಳೆದರೂ ಪೂರ್ಣ ಪಾವತಿಯಾಗದ ಪಿಂಚಣಿ!
ನಿವೃತ್ತ ಪ್ರಾಂಶುಪಾಲರ ಹೋರಾಟಕ್ಕೆ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನ ಬೆಂಬಲ

ಉಡುಪಿ: ವಯೋ ನಿವೃತ್ತಿ ಪಡೆದು 21ವರ್ಷ ಕಳೆದರೂ ತನಗೆ ನ್ಯಾಯವಾಗಿ ಸಿಗಬೇಕಾದ ನಿವೃತ್ತಿ ವೇತನದ ಪೂರ್ಣ ಪಾವತಿಯಾಗಿಲ್ಲ ಎಂದು ಆರೋಪಿಸಿ ನಿವೃತ್ತ ಪ್ರಾಂಶುಪಾಲ, ಉಡುಪಿ ಅಲೆವೂರಿನ ರಘುಪತಿ ಭಟ್ (80) ತನ್ನ ಕಾನೂನು ಹೋರಾಟವನ್ನು ಮುಂದುವರೆಸಿದ್ದಾರೆ.
ಉಡುಪಿ ಕುಂಜಿಬೆಟ್ಟು ವೈಕುಂಠ ಬಾಳಿಗ ಕಾನೂನು ಕಾಲೇಜಿನಲ್ಲಿ ಸೋಮವಾರ ಕರೆದ ಪತ್ರಿಕಾಗೋಷ್ಠಿಯಲ್ಲಿ ಉಡುಪಿಯ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನದ ಅಧ್ಯಕ್ಷ ಡಾ.ರವೀಂದ್ರನಾಥ್ ಶಾನುಭಾಗ್, ರಘುಪತಿ ಭಟ್ ಅವರಿಗೆ ಆಗಿರುವ ಅನ್ಯಾಯವನ್ನು ಮಾಧ್ಯಮದ ಮುಂದೆ ಬಿಚ್ಚಿಟ್ಟರು.
ಕಾರ್ಕಳದ ವೆಂಕಟರಮಣ ಪದವಿ ಪೂರ್ವ ಕಾಲೇಜಿನಲ್ಲಿ ಸುಮಾರು 33 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ಪ್ರಾಂಶುಪಾಲ ರಘುಪತಿ ಭಟ್ 2002ರಲ್ಲಿ ನಿವೃತ್ತರಾದರು. ತನ್ನ ಪಿಂಚಣಿ ಮಂಜೂರಾತಿಗೆ ಅವಶ್ಯ ಇರುವ ದಾಖಲೆಗಳನ್ನು ಪಿಂಚಣಿ ಇಲಾಖೆಗೆ ಕಳುಹಿಸುವಂತೆ ನಿವೃತ್ತಿಗೆ ಮೂರು ತಿಂಗಳ ಮೊದಲೇ ಕಾಲೇಜು ಆಡಳಿತ ಮಂಡಳಿಯನ್ನು ವಿನಂತಿಸಿದ್ದರು. ಆದರೆ ಆಡಳಿತ ಮಂಡಳಿ ಹಾಗೂ ಶಿಕ್ಷಣ ಇಲಾಖೆಯ ದಿವ್ಯ ನಿರ್ಲಕ್ಷದಿಂದಾಗಿ 15 ವರ್ಷಗಳ ಕಾಲ ಪಿಂಚಣಿ ಮಂಜೂರಾಗಲೇ ಇಲ್ಲ. ಅದಕ್ಕಾಗಿ ರಘುಪತಿ ಭಟ್ ಜಿಲ್ಲಾ ನ್ಯಾಯಾಲಯದಿಂದ ಸುಪ್ರೀಂ ಕೋರ್ಟ್‌ವರೆಗೆ ದೀರ್ಘಕಾಲದ ನ್ಯಾಯಾಂಗ ಹೋರಾಟವನ್ನು ಮಾಡಿದ್ದರು. ಅದರ ಫಲವಾಗಿ 2017ರ ಅ.17ರಂದು ಅವರಿಗೆ 177 ತಿಂಗಳ ಪಿಂಚಣಿ ಬಾಕಿ ಒಂದೇ ಗಂಟಿನಲ್ಲಿ ದೊರೆಯಿತು ಎಂದು ಶಾನುಭಾಗ್ ತಿಳಿಸಿದರು.
ಬಡ್ಡಿ ಮೊತ್ತಕ್ಕಾಗಿ ಹೋರಾಟ
ಈ ಮೊತ್ತ ವಿಳಂಬವಾಗಿ ಪಾವತಿಸಿರುವುದಕ್ಕೆ ಇಲಾಖೆಯು 15 ವರ್ಷಗಳ ಬಡ್ಡಿ ಸೇರಿಸಿ ಕೊಡಬೇಕಾಗಿತ್ತು. ಬಡ್ಡಿಗಾಗಿ ವಿದ್ಯಾ ಇಲಾಖೆಯನ್ನು ಸಂಪರ್ಕಿಸುವಂತೆ ಪಿಂಚಣಿ ಇಲಾಖೆ ಬರೆದ ಪತ್ರದಲ್ಲಿ ತಿಳಿಸಿತ್ತು. ಶಿಕ್ಷಣ ಇಲಾಖೆ ಇದಕ್ಕೆ ಸ್ಪಂದಿಸದ ಹಿನ್ನೆಲೆಯಲ್ಲಿ ರಘುಪತಿ ಭಟ್, 2019ರಲ್ಲಿ ಮತ್ತೆ ಹೈಕೋರ್ಟ್ ಮೆಟ್ಟಲೇರಿದರು.
ಸುಮಾರು 18 ತಿಂಗಳ ವಿಚಾರಣೆ ನಡೆಸಿದ ಹೈಕೋರ್ಟ್ 2021ರ ಜನವರಿಯಲ್ಲಿ ತೀರ್ಪು ನೀಡಿ ಪಿಂಚಣಿ ಬಾಕಿ ಅವಧಿಗೆ ಶೇ.8ರಂತೇ ಬಡ್ಡಿ ನೀಡಬೇಕು. ಬಡ್ಡಿ ಪಾವತಿಗಾಗಿ ನಾಲ್ಕು ವಾರಗಳ ಗಡುವನ್ನೂ ವಿಧಿಸಿತು. ಸರಕಾರ ಈ ಮೊತ್ತವನ್ನು ವಿಳಂಬಕ್ಕೆ ಕಾರಣರಾದವರಿಂದಲೇ ವಸೂಲು ಮಾಡುವ ಕೋರ್ಟ್ ನಿರ್ದೇಶನ ನೀಡಿತು. ಆದರೆ 9 ತಿಂಗಳಗಳಾದರೂ ಹೈಕೋರ್ಟ್ ಆದೇಶ ಪಾಲನೆ ಆಗಿರಲಿಲ್ಲ. ಅದಕ್ಕೆ ಅವರು ನ್ಯಾಯಾಂಗ ನಿಂದನಾ ದಾವೆ ಹೂಡಿದರು.
ಅಧಿಕಾರಿಗಳಿಗೆ ಬಂಧನದ ಆದೇಶ ಬರುವುದು ಖಚಿತವೆಂದು ಮನವರಿಕೆಯಾಗಿ ಇಲಾಖೆ ತನ್ನದೇ ರೀತಿಯಲ್ಲಿ ಲೆಕ್ಕಹಾಕಿ ರಘುಪತಿ ಭಟ್ ಅವರಿಗೆ ನ್ಯಾಯವಾಗಿ ನೀಡಬೇಕಾದ ಬಡ್ಡಿ ಮೊತ್ತದ ಅರ್ಧಕ್ಕಿಂತಲೂ ಕಡಿಮೆ ಹಣವನ್ನು ಅವರ ಖಾತೆಗೆ ಜಮಾ ಮಾಡಿತು. ಮಾತ್ರವಲ್ಲ ಕೋರ್ಟ್ ಆದೇಶ ಪಾಲಿಸಲಾಗಿದೆ ಎಂಬ ತಪ್ಪುಅಫಿದಾವಿತ್ ಸಲ್ಲಿಸಿತು ಎಂದು ಅವರು ಆರೋಪಿಸಿದರು.
ಈ 80 ವರ್ಷದ ರಘುಪತಿ ಭಟ್ ಈಗಾಗಲೇ ತನ್ನ ಪಿಂಚಣಿ ಹಾಗೂ ಬಡ್ಡಿ ಮೊತ್ತಕ್ಕಾಗಿ 21 ವರ್ಷಗಳ ಹೋರಾಟ ನಡೆಸಿದ್ದಾರೆ. ಆದರೂ ಅಧಿಕಾರಿ ಗಳು ಇನ್ನು ಪೂರ್ಣ ಮೊತ್ತ ಪಾಲತಿಸಿಲ್ಲ. ಹಾಗಾಗದೆ ಇವರು ಮುಂದೆ ಸಾಯುವವರೆಗೂ ನ್ಯಾಯಾಲಯಕ್ಕೆ ದಾವೆ ದಾಖಲಿಸುತ್ತಲೇ ಇರಬೇಕೆ ಎಂದು ಡಾ.ರವೀಂದ್ರನಾಥ ಶಾನುಭಾಗ್ ಪ್ರಶ್ನಿಸಿದರು.
ಸುದ್ದಿಗೋಷ್ಠಿಯಲ್ಲಿ ನಿವೃತ್ತ ಪ್ರಾಂಶುಪಾಲ ರಘುಪತಿ ಭಟ್ ಹಾಜರಿದ್ದರು.
‘ತನ್ನ ಪಿಂಚಣಿ ಹಾಗೂ ವಿಳಂಬಕ್ಕೆ ನೀಡಬೇಕಾದ ಬಡ್ಡಿ ಪಡೆಯಲು ಪ್ರತಿಷ್ಠಾನ ರಘುಪತಿ ಭಟ್‌ಗೆ ಸಹಕಾರ ಹಾಗೂ ಮಾರ್ಗದರ್ಶನ ನೀಡುತ್ತಲೇ ಬಂದಿದೆ. ಇದೇ ವೇಳೆ 2003ರ ಕೋರ್ಟ್ ತೀರ್ಪಿನ ಆಧಾರದಲ್ಲಿ ಹೊರಡಿಸಲಾದ ಇನ್ನೊಂದು ಸರಕಾರಿ ಆದೇಶದ ಪ್ರಕಾರ ಪಿಂಚಣಿ ಹಾಗೂ ಇತರ ಸವಲತ್ತುಗಳನ್ನೂ ನೀಡಲು ವಿಳಂಬವಾದಲ್ಲಿ ಶೇ.12ರಂತೆ ಬಡ್ಡಿ ನೀಡಲು ಸ್ಪಷ್ಟವಾಗಿ ನಿರ್ದೇಶನ ನೀಡಲಾಗಿದೆ. ಈ ಹೆಚ್ಚುವರಿ ಬಡ್ಡಿಯನ್ನು ಪಡೆಯಲೂ ಪ್ರತಿಷ್ಠಾನ ಅವರಿಗೆ ಸಂಪೂರ್ಣ ಸಹಕಾರ ನೀಡಲಿದೆ. ನ್ಯಾಯ ಸಿಗುವವರೆಗೆ ಈ ಹೋರಾಟ ಮುಂದುವರೆಯಲಿದೆ.
-ಡಾ.ರವೀಂದ್ರನಾಥ ಶಾನುಭಾಗ್
‘ನ್ಯಾಯ ಪ್ರಕಾರ ಸಿಗಬೇಕಾದ ಹಣ ನನಗೆ ಸಿಗುವವರೆಗೆ ಈ ಹೋರಾಟ ವನ್ನು ಮುಂದುವರೆಸುತ್ತೇನೆ. 2011ರಲ್ಲಿ ನನ್ನ ಬಳಿ ಹಣ ಇಲ್ಲದೆ ಅನಾರೋಗ್ಯ ಪೀಡಿತ 53ವರ್ಷದ ನನ್ನ ಪತ್ನಿಯನ್ನು ಉಳಿಸಿಕೊಳ್ಳಲು ನನಗೆ ಸಾಧ್ಯವಾಗಲಿಲ್ಲ ಮತ್ತು ಪ್ರತಿಭಾವಂತೆ ನನ್ನ ಮಗಳಿಗೆ ಉನ್ನತ ಶಿಕ್ಷಣ ನೀಡಲು ಆಗಲಿಲ್ಲ’
-ರಘುಪತಿ ಭಟ್, ನಿವೃತ್ತ ಪ್ರಾಂಶುಪಾಲರು







