ನನ್ನ ಹೆತ್ತವರಿಗೆ ಮನೆ ಖರೀದಿಸುವೆ: 1.90 ಕೋ.ರೂ.ಗೆ RCB ಪಾಲಾದ ರಿಚಾ ಘೋಷ್

ಹೊಸದಿಲ್ಲಿ, ಫೆ.13: ‘‘ನನ್ನ ಹೆತ್ತವರಿಗೆ ಕೋಲ್ಕತಾದಲ್ಲಿ ಫ್ಲಾಟ್‌ವೊಂದನ್ನು ಖರೀದಿಸಲು ಬಯಸುತ್ತೇನೆ. ನನ್ನ ತಂದೆ-ತಾಯಿ ಅಲ್ಲಿ ನೆಲೆಸಬೇಕೆಂದು ಬಯಸುವೆ. ಅವರು ಈಗ ತಮ್ಮ ಜೀವನವನ್ನು ಆನಂದಿಸಬೇಕೆಂದು ಆಸೆ ಪಡುವೆ. ಅವರು ತಮ್ಮ ಜೀವನದಲ್ಲಿ ಸಾಕಷ್ಟು ಕಷ್ಟಪಟ್ಟಿದ್ದಾರೆ. ಅವರು ನನಗಾಗಿ ಸಾಕಷ್ಟು ಶ್ರಮಿಸಿದ್ದಾರೆ. ಈಗಲೂ ನನ್ನ ತಂದೆ ಅಂಪೈರ್ ಕೆಲಸ ಮಾಡುತ್ತಿದ್ದಾರೆ. ಇಂದಿನಿಂದ ಅವರು ಕಷ್ಟಪಟ್ಟು ಕೆಲಸ ಮಾಡಬೇಕಾಗಿಲ್ಲ ಎಂದು ಭಾವಿಸುತ್ತೇನೆ’’ ಎಂದು ಮಹಿಳೆಯರ ಪ್ರೀಮಿಯರ್ ಲೀಗ್‌ನಲ್ಲಿ 1.90 ಕೋ.ರೂ.ಗೆ ಹರಾಜಾಗಿರುವ 19ರ ಹರೆಯದ ರಿಚಾ ಘೋಷ್ (Richa Ghosh)ಹೇಳಿದ್ದಾರೆ.
ಬಂಗಾಳ ಕ್ರಿಕೆಟ್‌ನಲ್ಲಿ ಅರೆಕಾಲಿಕ ಅಂಪೈರ್ ಆಗಿ ಕೆಲಸ ಮಾಡುತ್ತಿರುವ ರಿಚಾ ಅವರ ತಂದೆ ತನ್ನ ಪುತ್ರಿಗೆ ಹೃದಯಸ್ಪರ್ಶಿ ಶುಭ ಕೋರಿದರು.
ರಿಚಾ ಸೋಮವಾರ ಮುಂಬೈನಲ್ಲಿ ನಡೆದ ಆಟಗಾರ್ತಿಯರ ಹರಾಜಿನಲ್ಲಿ ನಿರೀಕ್ಷೆಯಂತೆಯೇ ಬಿಡ್ಡರ್‌ಗಳ ಗಮನ ಸೆಳೆದರು. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 1.90 ಕೋ.ರೂ. ನೀಡಿ ಅವರನ್ನು ತನ್ನ ತೆಕ್ಕೆಗೆ ಸೇರಿಸಿಕೊಂಡಿತು.
ಮೊದಲ ಆವೃತ್ತಿಯ ಡಬ್ಲುಪಿಎಲ್ ಹರಾಜಿನಲ್ಲಿ ಭಾರತದ ಅತ್ಯಂತ ದುಬಾರಿ ವಿಕೆಟ್‌ಕೀಪರ್ ಪೈಕಿ ಒಬ್ಬರಾಗಿದ್ದಾರೆ. ಘೋಷ್ ತನ್ನ ನಾಯಕಿ ಹರ್ಮನ್‌ಪ್ರೀತ್ ಕೌರ್‌ಗಿಂತಲೂ ಹೆಚ್ಚು ಮೊತ್ತಕ್ಕೆ ಹರಾಜಾದರು. ಕೌರ್ 1.80 ಕೋ.ರೂ.ಗೆ ಮುಂಬೈ ಇಂಡಿಯನ್ಸ್ ಪಾಲಾದರು.
ರವಿವಾರ ದಕ್ಷಿಣ ಆಫ್ರಿಕಾದಲ್ಲಿ ನಡೆದ ಟ್ವೆಂಟಿ-20 ವಿಶ್ವಕಪ್‌ನ ಮೊದಲ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕ್ ವಿರುದ್ಧ ಔಟಾಗದೆ 30 ರನ್ ಗಳಿಸಿದ್ದ ರಿಚಾ ಘೋಷ್ ಅಂಡರ್-19 ವಿಶ್ವಕಪ್ ವಿಜೇತ ತಂಡದ ಸದಸ್ಯೆಯೂ ಆಗಿದ್ದಾರೆ. ಜ.29ರಂದು ಫೈನಲ್‌ನಲ್ಲಿ ಇಂಗ್ಲೆಂಡನ್ನು ಮಣಿಸಿದ್ದ ಭಾರತ ಚಾಂಪಿಯನ್ ಆಗಿತ್ತು. ಪ್ರಸ್ತುತ ಭರ್ಜರಿ ಫಾರ್ಮ್‌ನಲ್ಲಿರುವ ಘೋಷ್ ಆರ್‌ಸಿಬಿಗೆ ಗರಿಷ್ಠ ಮೊತ್ತಕ್ಕೆ ಹರಾಜಾದ ಸ್ಮತಿ ಮಂಧಾನ ಹಾಗೂ ಎಲ್ಲಿಸ್ ಪೆರ್ರಿಯೊಂದಿಗೆ ಸೇರಿಕೊಂಡರು.