ಕಾಂಗ್ರೆಸ್‌ನ ಗೃಹಲಕ್ಷ್ಮಿ, ಗೃಹಜ್ಯೋತಿ ಯೋಜನೆಗಳ ಬಗ್ಗೆ ಪ್ರತೀ ಮನೆಗೂ ಮಾಹಿತಿ ನೀಡಿ: ಪ್ರತಾಪನ್

ಉಡುಪಿ: ಕಾಂಗ್ರೆಸ್ ಪಕ್ಷ ಘೋಷಣೆ ಮಾಡಿರುವ ಗೃಹಲಕ್ಷ್ಮಿ ಹಾಗೂ ಗೃಹಜ್ಯೋತಿ ಯೋಜನೆ ಹಾಗೂ ಕರಾವಳಿ ಪ್ರದೇಶದ ಅಭಿವೃದ್ಧಿಗೆ ಕಾಂಗ್ರೆಸ್ ಪಕ್ಷ ಘೋಷಿಸಿರುವ ಪ್ರತ್ಯೇಕ ಪ್ರಣಾಳಿಕೆ ಬಗ್ಗೆ ಕಾರ್ಯಕರ್ತರು ಜಿಲ್ಲೆಯ ಪ್ರತಿ ಮನೆ ಮನೆಗೂ ತೆರಳಿ ಈ ಯೋಜನೆಗಳ ಕುರಿತು ಮಾಹಿತಿ ನೀಡಬೇಕು ಎಂದು ಲೋಕಸಭಾ ಸದಸ್ಯರೂ, ಉಡುಪಿ- ಚಿಕ್ಕಮಂಗಳೂರು ಕ್ಷೇತ್ರಗಳ ಉಸ್ತುವಾರಿಗಳೂ ಆದ ಪ್ರತಾಪನ್ ಕಾಂಗ್ರೆಸ್‌ನ ಕಾರ್ಯಕರ್ತರಿಗೆ ತಿಳಿಸಿದ್ದಾರೆ.
ಬ್ರಹ್ಮಗಿರಿಯ ನಾಯರ್‌ಕೆರೆಯಲ್ಲಿರುವ ಕಾಂಗ್ರೆಸ್ ಭವನದಲ್ಲಿ ನಡೆದ ಜಿಲ್ಲಾ ಕಾಂಗ್ರೆಸ್ ಸಮಿತಿ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್‌ಕುಮಾರ ಕೊಡವೂರು ಮಾತನಾಡಿ, ಚುನಾವಣೆ ಸಮೀಪಿಸುತ್ತಿರುವುದರಿಂದ ಶೀಘ್ರ ಬಿಎಲ್‌ಎ ಹಾಗೂ ಬೂತು ಅಧ್ಯಕ್ಷರ ಸಭೆಗಳನ್ನು ಕರೆಯಲಾಗುವುದು. ಬಿಎಲ್‌ಎಗಳಿಗೆ ಗುರುತು ಚೀಟಿ ನೀಡುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಎರಡು ಕ್ಷೇತ್ರಗಳಲ್ಲಿ ಪ್ರಜಾಧ್ವನಿ ಕಾರ್ಯಕ್ರಮ ಸಮಾಪನಗೊಂಡಿದ್ದು, ಇನ್ನೂ ಉಳಿದ ಮೂರು ಕ್ಷೇತ್ರ ಗಳಲ್ಲಿಯೂ ಇದನ್ನು ಹಮ್ಮಿಕೊಳ್ಳಲಾಗುವುದು ಎಂದರು.
ಯಕ್ಷಗಾನದ ಹೆಸರಲ್ಲಿ ಯಕ್ಷಗಾನದ ಸಮಗ್ರತೆಯನ್ನು ಮರೆತು ಪಕ್ಷದ ಸಂಘಟನೆಗೆ ಯಕ್ಷಗಾನ ಕಲೆಯನ್ನು ಬಳಸುವುದು, ಯಕ್ಷಗಾನದ ಬಗ್ಗೆ ಸಮಗ್ರ ಅರಿತಿರುವ ವಿದ್ವಾಂಸರು ಕರಾವಳಿ ಪ್ರದೇಶದಲ್ಲಿ ಇರುವಾಗ ವಿವಾದಿತ ಲೇಖಕರನ್ನು ಕರೆಸಿ, ದಿಕ್ಸೂಚಿ ಭಾಷಣ ಮಾಡಿಸುವ ಬಿಜೆಪಿಯ ನಡೆ ಕಲೆಯನ್ನೂ ರಾಜಕೀಯಗೊಳಿಸಿದೆ ಎಂದವರು ಆರೋಪಿಸಿದರು.
ಮಾಜಿ ಸಚಿವ ಹಾಗೂ ಕೆಪಿಸಿಸಿ ಉಪಾಧ್ಯಕ್ಷರೂ ಆದ ವಿನಯಕುಮಾರ್ ಸೊರಕೆ ಮಾತನಾಡಿ, ರಾಜ್ಯದಲ್ಲಿ ಬರ ಬಂದಾಗ, ಪ್ರವಾಹ ಬಂದಾಗ ಕರ್ನಾಟಕಕ್ಕೆ ಬಾರದ ಮೋದಿ, ಶಾ ಅವರು ಇದೀಗ ಮತ ಯಾಚಿಸಲು ವಾರಕ್ಕೊಮ್ಮೆ ಓಡೋಡಿ ಬರುತಿದ್ದಾರೆ. ಮುಂದಿನ ದಿನಗಳಲ್ಲಿ ಓಣಿ ಓಣಿಗೂ ಬರಬಹುದು. ಈಗಲೂ ಜನ ಮೋದಿ ಮುಖ ನೋಡಿಕೊಂಡು ಮತ ಹಾಕುವ ಪರಿಸ್ಥಿತಿಯಿದೆ ಎಂದರೆ, ನಿಮ್ಮ ಸಾಧನೆ ಏನು ಎಂದು ಪಕ್ಷದ ಮುಖಂಡರಿಗೆ ಅಮಿತ್ ಶಾ ತಮ್ಮ ಮಂಗಳೂರು ಭೇಟಿ ವೇಳೆ ಪ್ರಶ್ನಿಸಿರುವುದು ಸರಿಯಾಗಿಯೇ ಇದೆ ಎಂದರು.
ಬಿಜೆಪಿ ಇಷ್ಟರವರೆಗೆ ಧರ್ಮ ರಾಜಕೀಯದಿಂದ ಜನರ ಹಾದಿ ತಪ್ಪಿಸುತ್ತಿದ್ದರು. ಈಗ ಕಲೆ, ಸಾಹಿತ್ಯ ಕ್ಷೇತ್ರಗಳಿಗೂ ರಾಜಕೀಯದ ಲೇಪ ಹಚ್ಚಿ ಮಲೀನಗೊಳಿಸುವ ಹುನ್ನಾರ ನಡೆದಿದೆ. ರಾಜಕೀಯ ಗುರಿ ಸಾಧನೆಗೆ ಧರ್ಮ, ಕಲೆ, ಸಾಹಿತ್ಯವನ್ನು ದುರ್ಬಳಕೆ ಮಾಡುವುದು ಅತ್ಯಂತ ಖಂಡನೀಯ ಎಂದು ಸೊರಕೆ ನುಡಿದರು.
ಕೇರಳ ಪ್ರದೇಶ್ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ನೌಷಾದ್, ಮುಖಂಡರಾದ ಎಂ.ಎ.ಗಫೂರ್, ದಿನೇಶ್ ಪುತ್ರನ್, ಭುಜಂಗ ಶೆಟ್ಟಿ, ಕಿಶನ್ ಹೆಗ್ಡೆ, ಕೊಳ್ಕೆಬೈಲ್, ಮಂಜುನಾಥ ಪೂಜಾರಿ, ಶ್ಯಾಮಲಾ ಭಂಡಾರಿ, ಬಿ. ನರಸಿಂಹ ಮೂರ್ತಿ, ಪ್ರಶಾಂತ ಜತ್ತನ್ನ, ರಮೇಶ್ ಕಾಂಚನ್, ಕೃಷ್ಣಮೂರ್ತಿ ಆಚಾರ್ಯ, ಇಸ್ಮಾಯಿಲ್ ಆತ್ರಾಡಿ ಸಲಹೆ ಸೂಚನೆಗಳನ್ನು ನೀಡಿದರು.
ಸಭೆಯಲ್ಲಿ ಪಕ್ಷದ ಮುಖಂಡರಾದ ಹಿರಿಯಣ್ಣ, ಪ್ರಖ್ಯಾತ ಶೆಟ್ಟಿ, ನೀರೆ ಕೃಷ್ಣ ಶೆಟ್ಟಿ, ಮಲ್ಯಾಡಿ ಶಿವರಾಮ ಶೆಟ್ಟಿ, ನವೀನ್‌ಚಂದ್ರ ಶೆಟ್ಟಿ, ದಿವಾಕರ ಕುಂದರ್, ಮುರಲಿ ಶೆಟ್ಟಿ, ಶಶಿಧರ ಶೆಟ್ಟಿ ಎಲ್ಲೂರು, ಜಯಕುಮಾರ್, ರೋಶನ್ ಶೆಟ್ಟಿ, ಬಿಪಿನ್ ಚಂದ್ರಪಾಲ್ ನಕ್ರೆ, ಅಬೀಬ್ ಆಲಿ, ಸಂತೋಷ ಕುಲಾಲ್, ಸದಾಶಿವ ದೇವಾಡಿಗ, ಸೌರಭ ಬಲ್ಲಾಳ್, ಯತೀಶ್ ಕರ್ಕೇರ, ಕಿರ್ಶೋ ಕುಮಾರ ಎರ್ಮಾಳ್, ಉದ್ಯಾವರ ನಾಗೇಶ್ ಕುಮಾರ್, ಬಾಲಕೃಷ್ಣ ಪೂಜಾರಿ, ಉಪೇಂದ್ರ ಮೆಂಡನ್, ರೇವತಿ ಶೆಟ್ಟಿ, ಹಮೀದ್, ಲೂಯಿಸ್ ಲೋಬೋ, ಕೇಶವ ಕೋಟ್ಯಾನ್, ರಾಜೇಶ್ ಶೆಟ್ಟಿ ಕುಂಬ್ರ ಗೋಡು, ಉಪೇಂದ್ರ ಗಾಣಿಗ, ವಿಲ್ಸನ್ ರೋಡ್ರಿಗಸ್ ಉಪಸ್ಥಿತರಿದ್ದರು.
ಸಹಕಾರಿ ಕಾಂಗ್ರೆಸ್ ಅಧ್ಯಕ್ಷ ಅಣ್ಣಯ್ಯ ಸೇರಿಗಾರ್ ಸ್ವಾಗತಿಸಿ, ಪ್ರಚಾರ ಸಮಿತಿ ಅಧ್ಯಕ್ಷ ಹರೀಶ್ ಕಿಣಿ ವಂದಿಸಿದರು. ಜಿಲ್ಲಾ ವಕ್ತಾರ ಭಾಸ್ಕರ ರಾವ್ ಕಿದಿಯೂರು ಕಾರ್ಯಕ್ರಮ ನಿರ್ವಹಿಸಿದರು.







